ವಿಜಯಸಾಕ್ಷಿ ಸುದ್ದಿ, ಗದಗ: ನಗರದ ಆದರ್ಶ ಶಿಕ್ಷಣ ಸಮಿತಿಯ ಸುವರ್ಣ ಮಹೋತ್ಸವ ಭವನದಲ್ಲಿ ಭಾರತ ಸರ್ಕಾರದ ಯುವ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯ, ಪ್ರಾದೇಶಿಕ ಎನ್ಎಸ್ಎಸ್ ನಿರ್ದೇಶನಾಲಯ (ಬೆಂಗಳೂರು), ಆದರ್ಶ ಶಿಕ್ಷಣ ಸಮಿತಿಯ ಪದವಿ ವಾಣಿಜ್ಯ ಮಹಾವಿದ್ಯಾಲಯದ ಎನ್ಎಸ್ಎಸ್ ಘಟಕ ಹಾಗೂ ಮೈ ಭಾರತ್ ಕೇಂದ್ರ, ಗದಗ ಸಹಯೋಗದಲ್ಲಿ ‘ವಿಕಸಿತ್ ಭಾರತ್–ನಶಾ ಮುಕ್ತ ಯುವ’ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಯಿತು.
ಆದರ್ಶ ಶಿಕ್ಷಣ ಸಮಿತಿಯ ಕಾರ್ಯದರ್ಶಿ ಎ.ಡಿ. ಗೊಡಖಿಂಡಿ ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ಯುವ ಐಕಾನ್ ಆಗಿ ಭಾಗವಹಿಸಿದ್ದ ಭಾರತ ಸರ್ಕಾರದ ರಾಷ್ಟ್ರೀಯ ಯುವ ಐಕಾನ್ ವರುಣ್ ಡಿ. ಆರ್ಯ ಮಾತನಾಡಿ, ಇಂದಿನ ನಶಾ ಮುಕ್ತ ಯುವಕರೇ ನಾಳಿನ ಬಲಿಷ್ಠ ಭಾರತದ ಶಕ್ತಿ. ದೇಶದ ಅಭಿವೃದ್ಧಿ, ಪ್ರಗತಿ ಹಾಗೂ ಸಮೃದ್ಧಿಯಲ್ಲಿ ಯುವಜನರ ಪಾತ್ರ ಅತ್ಯಂತ ಮಹತ್ವದ್ದಾಗಿದ್ದು, ಯುವಕರು ಮಾದಕ ವ್ಯಸನಗಳಿಂದ ದೂರವಿದ್ದು ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಮದ್ಯಪಾನ, ಧೂಮಪಾನ ಹಾಗೂ ವಿವಿಧ ಮಾದಕ ವಸ್ತುಗಳ ವ್ಯಸನವು ದೈಹಿಕ ಆರೋಗ್ಯದ ಜೊತೆಗೆ ಮಾನಸಿಕ ಸ್ಥಿರತೆ, ಶಿಕ್ಷಣ, ಉದ್ಯೋಗ ಮತ್ತು ಕುಟುಂಬದ ನೆಮ್ಮದಿಯ ಮೇಲೂ ದುಷ್ಪರಿಣಾಮ ಬೀರುತ್ತದೆ. ಕ್ರೀಡೆ, ಯೋಗ, ವ್ಯಾಯಾಮ, ಉತ್ತಮ ಹವ್ಯಾಸಗಳು ಹಾಗೂ ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಳ್ಳುವ ಮೂಲಕ ಯುವಕರು ವ್ಯಸನಗಳಿಂದ ದೂರವಿರಬಹುದು ಎಂದು ಅವರು ತಿಳಿಸಿದರು.
ನಶಾ ಮುಕ್ತ ಸಮಾಜ ನಿರ್ಮಾಣಕ್ಕೆ ಕುಟುಂಬ, ಶಾಲೆ, ಕಾಲೇಜು, ಸರ್ಕಾರ ಹಾಗೂ ಸಮಾಜದ ಎಲ್ಲರ ಸಹಕಾರ ಅಗತ್ಯವಾಗಿದೆ. ಪ್ರತಿಯೊಬ್ಬ ಯುವಕ-ಯುವತಿಯೂ “ನಶಾ ಮುಕ್ತ ಯುವ–ಬಲಿಷ್ಠ ಭಾರತ” ಎಂಬ ಗುರಿಯನ್ನು ಜೀವನದ ಧ್ಯೇಯವನ್ನಾಗಿಸಿಕೊಳ್ಳಬೇಕು ಎಂದು ಅವರು ಹೇಳಿದರು.
ಮೈ ಭಾರತ್ ಕೇಂದ್ರದ ಡೆಪ್ಯುಟಿ ಡೈರೆಕ್ಟರ್ ಲೋಕೇಶ್ ಕುಮಾರ್ ಅವರು ವಿದ್ಯಾರ್ಥಿಗಳಿಗೆ ನಶಾ ಮುಕ್ತ ಪ್ರತಿಜ್ಞಾ ವಿಧಿ ಬೋಧಿಸಿ, ವ್ಯಸನದ ದುಷ್ಪರಿಣಾಮಗಳ ಕುರಿತು ಜಾಗೃತಿ ಮೂಡಿಸಿದರು.
ಕಾರ್ಯಕ್ರಮದಲ್ಲಿ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ವಿ.ಟಿ. ನಾಯ್ಕರ್, ಯುವ ನಾಯಕ ಇಮಾಮ ಮೊರಬದ್, ಎನ್ಎಸ್ಎಸ್ ಕಾರ್ಯಕ್ರಮಾಧಿಕಾರಿ ಪ್ರೊ. ಬಿ.ಪಿ. ಜೈನರ್, ವಿವಿಧ ಮಹಾವಿದ್ಯಾಲಯಗಳ ಶಿಕ್ಷಕರು, ಎನ್ಎಸ್ಎಸ್ ಸ್ವಯಂಸೇವಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
“ಇಂದಿನ ನಶಾ ಮುಕ್ತ ಯುವಕರೇ ನಾಳಿನ ಶಕ್ತಿಶಾಲಿ ಭಾರತದ ನಿರ್ಮಾತೃಗಳು. ಆರೋಗ್ಯವಂತ ಮತ್ತು ಜಾಗೃತ ಯುವಜನತೆಯೇ ಅಭಿವೃದ್ಧಿ ಹೊಂದಿದ ರಾಷ್ಟ್ರದ ನಿಜವಾದ ಶಕ್ತಿ.”
– ವರುಣ್ ಡಿ. ಆರ್ಯ, ರಾಷ್ಟ್ರೀಯ ಯುವ ಐಕಾನ್



