HomeGadag Newsಅರಣ್ಯ ರಕ್ಷಕರು ದೇಶದ ಸೈನಿಕರಿದ್ದಂತೆ: ಸಿ.ಎಸ್. ಶಿವನಗೌಡ್ರ

ಅರಣ್ಯ ರಕ್ಷಕರು ದೇಶದ ಸೈನಿಕರಿದ್ದಂತೆ: ಸಿ.ಎಸ್. ಶಿವನಗೌಡ್ರ

For Dai;y Updates Join Our whatsapp Group

ವಿಜಯಸಾಕ್ಷಿ ಸುದ್ದಿ, ಗದಗ: ದೇಶದ ಗಡಿಯನ್ನು ಸೈನಿಕರು ಕಾಯುವಂತೆ, ನಾಡಿನ ಅಮೂಲ್ಯ ಪ್ರಾಕೃತಿಕ ಸಂಪತ್ತನ್ನು ರಕ್ಷಿಸುವ ಗುರುತರ ಜವಾಬ್ದಾರಿಯನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ನಿರ್ವಹಿಸುತ್ತಿದ್ದಾರೆ ಎಂದು ಹಿರಿಯ ದಿವಾಣಿ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಿ.ಎಸ್. ಶಿವನಗೌಡ್ರ ಹೇಳಿದರು.

ತಾಲೂಕಿನ ಬಿಂಕದಕಟ್ಟಿಯ ಸಾಲುಮರದ ತಿಮ್ಮಕ್ಕ ಸಸ್ಯೋದ್ಯಾನದಲ್ಲಿ ಶುಕ್ರವಾರ ಅರಣ್ಯ ಇಲಾಖೆ ಆಯೋಜಿಸಿದ್ದ ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

1980ರ ಅರಣ್ಯ ಸಂರಕ್ಷಣಾ ಕಾಯ್ದೆಗೆ ಸುಪ್ರೀಂ ಕೋರ್ಟ್‌ನ ಟಿ.ಎನ್. ಗೋದಾವರ್ಮನ್ ವಿರುದ್ಧ ಯೂನಿಯನ್ ಆಫ್ ಇಂಡಿಯಾ ಪ್ರಕರಣದ ತೀರ್ಪಿನ ಬಳಿಕ ಮತ್ತಷ್ಟು ಬಲ ದೊರೆತಿದೆ. ಕರ್ನಾಟಕ ಅರಣ್ಯ ಕಾಯ್ದೆಯ ಸೆಕ್ಷನ್ 62ರಡಿ ಅರಣ್ಯ ಅಧಿಕಾರಿಗಳಿಗೆ ಪೊಲೀಸ್ ಅಧಿಕಾರಿಗಳಂತೆಯೇ ಅಧಿಕಾರ ಹಾಗೂ ರಕ್ಷಣೆ ನೀಡಲಾಗಿದೆ. ಸರ್ಕಾರಿ ದಾಖಲೆಗಳಲ್ಲಿ ‘ಅರಣ್ಯ’ ಎಂದು ನಮೂದಾಗಿರುವ ಪ್ರದೇಶವನ್ನು ಕೇಂದ್ರ ಸರ್ಕಾರದ ಅನುಮತಿಯಿಲ್ಲದೆ ಅನ್ಯ ಉದ್ದೇಶಕ್ಕೆ ಬಳಸಲು ಸಾಧ್ಯವಿಲ್ಲ ಎಂದರು.

ಅರಣ್ಯ ರಕ್ಷಣೆ ಹಾಗೂ ಕಳ್ಳಸಾಗಣೆ ತಡೆಯುವ ಸಂದರ್ಭದಲ್ಲಿ ಪ್ರಾಣತ್ಯಾಗ ಮಾಡಿದ ಹುತಾತ್ಮರ ಕುಟುಂಬಗಳಿಗೆ ಸೂಕ್ತ ಪರಿಹಾರ, ಬೆಂಬಲ ಹಾಗೂ ಪುನರ್ವಸತಿ ಕಲ್ಪಿಸುವುದು ದಿನಾಚರಣೆಯ ಪ್ರಮುಖ ಉದ್ದೇಶವಾಗಿದೆ. ಅವರ ಕುಟುಂಬಗಳೊಂದಿಗೆ ನಾವಿದ್ದೇವೆ ಎಂಬ ಭರವಸೆ ನೀಡುವುದು ಅಗತ್ಯ ಎಂದರು.

ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಮಾತನಾಡಿ, ಮುಂದಿನ ಪೀಳಿಗೆಗಾಗಿ ಅರಣ್ಯ ಉಳಿಸುವ ಉದ್ದೇಶದಿಂದ ಸಿಬ್ಬಂದಿ ತಮ್ಮ ಪ್ರಾಣವನ್ನೇ ತ್ಯಾಗ ಮಾಡಿದ್ದಾರೆ. ಕರ್ತವ್ಯವೇ ಮುಖ್ಯವೆಂದು ಭಾವಿಸಿ ಅಪಾಯಗಳನ್ನು ಎದುರಿಸಿದ ಅವರ ಬಲಿದಾನ ಸ್ಮರಣೀಯ. ಗಡಿಯಲ್ಲಿ ಕಾಯುವ ಯೋಧರಂತೆ ಅರಣ್ಯ ಸಿಬ್ಬಂದಿ ಕಾಡು ಮತ್ತು ಮಾನವ ವಸತಿ ಪ್ರದೇಶಗಳ ನಡುವಿನ ಸೂಕ್ಷ್ಮ ಗಡಿಯನ್ನು ಹಗಲಿರುಳು ಕಾಯುತ್ತಿದ್ದಾರೆ ಎಂದರು.

ಅರಣ್ಯ ಕ್ಷೇತ್ರದಲ್ಲಿ ಎದುರಾಗುವ ಅಪಾಯಗಳ ನಡುವೆಯೂ ಸಿಬ್ಬಂದಿಗೆ ನೀಡುವ ತರಬೇತಿ ಅವರಲ್ಲಿ ಕರ್ತವ್ಯನಿಷ್ಠೆ ಹಾಗೂ ಆತ್ಮಧೈರ್ಯ ತುಂಬುತ್ತದೆ. ಇಂತಹ ಧೀರ ಸಿಬ್ಬಂದಿಯನ್ನು ಕಳೆದುಕೊಳ್ಳುವುದು ದೇಶ ಹಾಗೂ ಇಲಾಖೆಗೆ ತುಂಬಲಾರದ ನಷ್ಟ. ಅರಣ್ಯ ಮತ್ತು ಪ್ರಕೃತಿಯನ್ನು ಮುಂದಿನ ಪೀಳಿಗೆಗೆ ಉಳಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದು ಅವರು ಹೇಳಿದರು.

ಉಪ ಅರಣ್ಯ ಸಂರಕ್ಷಣಾಧಿಕಾರಿ ಸಂತೋಷಕುಮಾರ ಕೆಂಚಪ್ಪನವರ ಮಾತನಾಡಿ, ಅರಣ್ಯ ಸಂರಕ್ಷಣೆ ಕೇವಲ ಅರಣ್ಯ ಇಲಾಖೆಯ ಜವಾಬ್ದಾರಿಯಲ್ಲ. ಸಾರ್ವಜನಿಕರು ಹಾಗೂ ಇತರ ಇಲಾಖೆಗಳು ಒಗ್ಗೂಡಿ ಶ್ರಮಿಸಿದಾಗ ಮಾತ್ರ ಪರಿಣಾಮಕಾರಿ ಸಂರಕ್ಷಣೆ ಸಾಧ್ಯ. ‘ಕಾಡು ನನ್ನದು’ ಎಂಬ ಭಾವನೆ ಪ್ರತಿಯೊಬ್ಬರಲ್ಲೂ ಮೂಡಬೇಕು. ಹಿಂದೆ ಕಳ್ಳಸಾಗಣೆ ಹಾಗೂ ಕಾಡುಗಳ್ಳರ ದಾಳಿಯಿಂದ ಹುತಾತ್ಮರಾಗುವವರ ಸಂಖ್ಯೆ ಹೆಚ್ಚಿತ್ತು. ಈಗ ಇಲಾಖೆಯ ಸಂರಕ್ಷಣಾ ಕ್ರಮಗಳಿಂದ ವನ್ಯಜೀವಿಗಳ ಸಂಖ್ಯೆ ಗಣನೀಯವಾಗಿ ಹೆಚ್ಚಿದೆ. ದೇಶದಲ್ಲೇ ಅತಿ ಹೆಚ್ಚು ಆನೆಗಳು, ಎರಡನೇ ಅತಿ ಹೆಚ್ಚು ಹುಲಿಗಳು ಹಾಗೂ ಮೂರನೇ ಅತಿ ಹೆಚ್ಚು ಚಿರತೆಗಳು ಕರ್ನಾಟಕದಲ್ಲಿವೆ ಎಂದರು.

ರಾಜಸ್ಥಾನದ ಖೇಜರ್ಲಿಯಲ್ಲಿ ಮರಗಳ ರಕ್ಷಣೆಗಾಗಿ ಗ್ರಾಮಸ್ಥರು ಮಾಡಿದ ಬಲಿದಾನ ಹಾಗೂ ಕರ್ನಾಟಕದಲ್ಲಿ ವೀರಪ್ಪನ್ ವಿರುದ್ಧದ ಕಾರ್ಯಾಚರಣೆಯಲ್ಲಿ ಐಎಫ್‌ಎಸ್ ಅಧಿಕಾರಿ ಶ್ರೀನಿವಾಸ್ ಸೇರಿದಂತೆ ಹುತಾತ್ಮರಾದವರ ತ್ಯಾಗವನ್ನು ಸ್ಮರಿಸುವ ಉದ್ದೇಶದಿಂದ ಈ ದಿನಾಚರಣೆ ಆಚರಿಸಲಾಗುತ್ತಿದೆ.

ಕಾರ್ಯಕ್ರಮದಲ್ಲಿ ಹುತಾತ್ಮರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಎಚ್.ಎನ್., ಅಪರ ಜಿಲ್ಲಾಧಿಕಾರಿ ಡಾ. ದುರ್ಗೇಶ್ ಕೆ.ಆರ್., ಉಪವಿಭಾಗಾಧಿಕಾರಿ ಗಂಗಪ್ಪ ಎಂ., ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.

ವನ್ಯಜೀವಿಗಳ ದಾಳಿ ಹಾಗೂ ಅರಣ್ಯ ರಕ್ಷಣೆಯ ಸವಾಲುಗಳ ನಡುವೆಯೂ ಕರ್ತವ್ಯ ನಿರ್ವಹಿಸಿ ಪ್ರಾಣತ್ಯಾಗ ಮಾಡಿದ ವೀರ ಸಿಬ್ಬಂದಿಯ ಬಲಿದಾನ ನಮಗೆ ಸದಾ ಪ್ರೇರಣೆಯಾಗಬೇಕು. ಹುತಾತ್ಮರ ಕುಟುಂಬಗಳೊಂದಿಗೆ ಅರಣ್ಯ ಇಲಾಖೆ ಸದಾ ನಿಲ್ಲಲಿದೆ.

— ಸಂತೋಷಕುಮಾರ ಕೆಂಚಪ್ಪನವರ, ಉಪ ಅರಣ್ಯ ಸಂರಕ್ಷಣಾಧಿಕಾರಿ, ಗದಗ

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img