ವಿಜಯಸಾಕ್ಷಿ ಸುದ್ದಿ, ಗದಗ: ಆರ್ಥಿಕವಾಗಿ ಹಿಂದುಳಿದ ಬ್ರಾಹ್ಮಣ ಸಮುದಾಯದವರಿಗೆ ಸ್ವಯಂ ಉದ್ಯೋಗ ಆರಂಭಿಸಲು ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ವತಿಯಿಂದ 2026-27ನೇ ಸಾಲಿನ ‘ವಿಪ್ರ ಸ್ವ ಉದ್ಯಮ ನೇರ ಸಾಲ ಯೋಜನೆ’ ಜಾರಿಗೊಳಿಸಲಾಗಿದ್ದು, ಆಗಸ್ಟ್ 31ರವರೆಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಮಂಡಳಿಯ ನಿರ್ದೇಶಕ ಗುರುರಾಜ ಬಳಗಾನೂರ ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗುಡಿಕೈಗಾರಿಕೆ, ಸಣ್ಣ ಕೈಗಾರಿಕೆ, ಹೋಟೆಲ್ (ಕ್ಯಾಟರಿಂಗ್), ಅಂಗಡಿ, ಟೈಲರಿಂಗ್, ಟ್ಯಾಕ್ಸಿ ಹಾಗೂ ಹಸು ಸಾಕಾಣಿಕೆಯಂತಹ ಸ್ವಯಂ ಉದ್ಯೋಗ ಕೈಗೊಳ್ಳಲು ಯೋಜನೆಯಡಿ ಆರ್ಥಿಕ ನೆರವು ನೀಡಲಾಗುವುದು. ಅರ್ಹ ಫಲಾನುಭವಿಗಳು ಈ ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕರೆ ನೀಡಿದರು.
2025-26ನೇ ಸಾಲಿನಲ್ಲಿ ಬ್ರಾಹ್ಮಣ ಅಭಿವೃದ್ಧಿ ಮಂಡಳಿಗೆ ರಾಜ್ಯ ಸರ್ಕಾರ ₹25 ಕೋಟಿ ಅನುದಾನ ಬಿಡುಗಡೆ ಮಾಡಿದ್ದು, ಅದರಲ್ಲಿ ₹20 ಕೋಟಿ ವೆಚ್ಚ ಮಾಡಿ ವಿವಿಧ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗಿದೆ. ‘ವಿಶ್ವಾಮಿತ್ರ ಪ್ರತಿಭಾ ಪುರಸ್ಕಾರ’ ಯೋಜನೆಯಡಿ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ₹15 ಸಾವಿರ ಪ್ರೋತ್ಸಾಹಧನ ನೀಡಲಾಗುತ್ತಿದೆ ಎಂದು ಹೇಳಿದರು.
ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ನೋಂದಾಯಿತ ಸಂಸ್ಥೆಗಳಲ್ಲಿ ತರಬೇತಿ ಪಡೆಯುವ ಅಭ್ಯರ್ಥಿಗಳಿಗೆ ವಾರ್ಷಿಕ ₹1 ಲಕ್ಷ ಸಹಾಯಧನ ನೀಡುವ ಯೋಜನೆಯೂ ಜಾರಿಯಲ್ಲಿದೆ. ಬ್ರಾಹ್ಮಣ ಅಭಿವೃದ್ಧಿ ಮಂಡಳಿಗೆ ಕನಿಷ್ಠ ₹100 ಕೋಟಿ ಅನುದಾನ ನೀಡುವಂತೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಮನವಿ ಮಾಡಲಾಗಿದ್ದು, ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಕಿತ್ತೂರು ಕರ್ನಾಟಕ ಭಾಗದ ಬ್ರಾಹ್ಮಣ ಸಮುದಾಯದವರು ಸರ್ಕಾರದ ಯೋಜನೆಗಳ ಪ್ರಯೋಜನವನ್ನು ಹೆಚ್ಚಿನ ಪ್ರಮಾಣದಲ್ಲಿ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.
ಯೋಜನೆಗೆ ಅರ್ಜಿ ಸಲ್ಲಿಸಲು ಕರ್ನಾಟಕದ ಖಾಯಂ ನಿವಾಸಿಯಾಗಿರಬೇಕು. ಬ್ರಾಹ್ಮಣ ಸಮುದಾಯದ ಸಾಮಾನ್ಯ ವರ್ಗಕ್ಕೆ ಸೇರಿದ ಆರ್ಥಿಕವಾಗಿ ಹಿಂದುಳಿದ ಪ್ರಮಾಣಪತ್ರ ಹೊಂದಿರಬೇಕು. ವಯಸ್ಸು 18ರಿಂದ 65 ವರ್ಷದೊಳಗಿರಬೇಕು. ಒಂದು ಕುಟುಂಬದಿಂದ ಒಬ್ಬರಿಗೆ ಮಾತ್ರ ಅವಕಾಶವಿದ್ದು, ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲು ಅವಕಾಶವಿಲ್ಲ. ಸಾಲದ ಉದ್ದೇಶವನ್ನು ಆನ್‌ಲೈನ್ ಅರ್ಜಿಯಲ್ಲಿ ಸ್ಪಷ್ಟವಾಗಿ ನಮೂದಿಸಬೇಕು. ಅರ್ಜಿದಾರರ ಆಧಾರ್‌ಗೆ ಮೊಬೈಲ್ ಸಂಖ್ಯೆ ಲಿಂಕ್ ಆಗಿದ್ದು, ಬ್ಯಾಂಕ್ ಖಾತೆ ಎನ್‌ಪಿಸಿಐ ಸೀಡ್ ಆಗಿರಬೇಕು ಎಂದು ವಿವರಿಸಿದರು.
ಈ ಸಂದರ್ಭದಲ್ಲಿ ಬ್ರಾಹ್ಮಣ ಸಂಘದ ಜಿಲ್ಲಾಧ್ಯಕ್ಷ ವೆಂಕಟೇಶ್ ಕುಲಕರ್ಣಿ, ಅನಿಲ ತೆಂಬದಮನಿ, ಕೃಷ್ಣಜಿ ನಾಡಗೇರ, ನಾಗರಾಜ ಕುಲಕರ್ಣಿ, ಕಿರಣ್ ಪೂಜಾರ, ಮೇಘಾ ಮುದಗಲ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

