ವಿಜಯಸಾಕ್ಷಿ ಸುದ್ದಿ, ಗದಗ: ಮತದಾರರ ಪಟ್ಟಿಗಳ ವಿಶೇಷ ಸಮಗ್ರ ಪರಿಷ್ಕರಣೆ-2026 (ಎಸ್‌ಐಆರ್) ಕುರಿತು ಯಾವುದೇ ಊಹಾಪೋಹಗಳಿಗೆ ಕಿವಿಗೊಡದೆ, ಚುನಾವಣಾ ಆಯೋಗದ ವೇಳಾಪಟ್ಟಿಯಂತೆ ಬಿಎಲ್‌ಒಗಳಿಗೆ ಸಮರ್ಪಕ ಮಾಹಿತಿ ನೀಡಿ ಪ್ರಕ್ರಿಯೆಗೆ ಸಹಕರಿಸಬೇಕು. ಯಾವುದೇ ಅರ್ಹ ಮತದಾರರು ಪಟ್ಟಿಯಿಂದ ಹೊರಗುಳಿಯದಂತೆ ಪಾರದರ್ಶಕ ಹಾಗೂ ನಿಖರ ಮತದಾರರ ಪಟ್ಟಿಯನ್ನು ಸಿದ್ಧಪಡಿಸುವುದೇ ಈ ವಿಶೇಷ ಪರಿಷ್ಕರಣೆಯ ಉದ್ದೇಶವಾಗಿದೆ ಎಂದು ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಸಿ.ಆರ್. ಮುಂಡರಗಿ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಸ್ವೀಪ್ ಸಮಿತಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದ ಸಂಯುಕ್ತಾಶ್ರಯದಲ್ಲಿ ನರಸಾಪುರ ಕೈಗಾರಿಕಾ ವಸಾಹತು ಆವರಣದಲ್ಲಿ ಮಂಗಳವಾರ ಆಯೋಜಿಸಿದ್ದ ಮತದಾರರ ಪಟ್ಟಿಗಳ ವಿಶೇಷ ಸಮಗ್ರ ಪರಿಷ್ಕರಣೆ-2026 (ಎಸ್‌ಐಆರ್) ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪ್ರಜಾಪ್ರಭುತ್ವದ ಸದೃಢತೆಗೆ ನಿಖರ ಮತದಾರರ ಪಟ್ಟಿ ಅತ್ಯಂತ ಅವಶ್ಯಕವಾಗಿದೆ. ಈ ಹಿನ್ನೆಲೆಯಲ್ಲಿ ಮತದಾರರ ಪಟ್ಟಿಯನ್ನು ಸಂಪೂರ್ಣವಾಗಿ ಹೊಸದಾಗಿ ಸಿದ್ಧಪಡಿಸುವ ಪ್ರಕ್ರಿಯೆ ನಡೆಯುತ್ತಿದ್ದು, ಈ ಹಿಂದೆ ಪಟ್ಟಿಯಲ್ಲಿದ್ದ ಮತದಾರರು ಈಗಲೂ ಅದೇ ಸ್ಥಳದಲ್ಲಿದ್ದಾರೆಯೇ, ಹೊಸದಾಗಿ ಸೇರ್ಪಡೆಯಾಗಬೇಕಾದವರು ಯಾರು ಎಂಬುದನ್ನು ಗುರುತಿಸಿ ದೃಢೀಕರಿಸುವ ಉದ್ದೇಶದಿಂದ ಎಸ್‌ಐಆರ್-2026 ಕಾರ್ಯ ಕೈಗೊಳ್ಳಲಾಗಿದೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸಹಾಯಕ ಕಾನೂನು ಅಭಿರಕ್ಷಕ ಗುರುರಾಜ ಬಿ. ಗೌರಿ ತಿಳಿಸಿದರು.
ಬಿಎಲ್‌ಒಗಳು ಮನೆ-ಮನೆಗೆ ಭೇಟಿ ನೀಡಿದಾಗ ಸಾರ್ವಜನಿಕರು ಅಗತ್ಯ ದಾಖಲೆಗಳನ್ನು ನೀಡಿ ಸೂಕ್ತ ನಮೂನೆಗಳನ್ನು ಭರ್ತಿ ಮಾಡಿಕೊಡಬೇಕು. ಇದರಿಂದ ನಿಖರ ಮತದಾರರ ಪಟ್ಟಿ ಸಿದ್ಧಪಡಿಸಲು ಅನುಕೂಲವಾಗುತ್ತದೆ. ಪ್ರತಿಯೊಬ್ಬ ಅರ್ಹ ನಾಗರಿಕರು ತಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ಸೇರ್ಪಡೆಯಾಗಿರುವುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದ ಪ್ರಾಂಶುಪಾಲ ಡಾ. ಶಿವಪ್ಪ ಮರಿಬಸಪ್ಪ ಕುರಿ ಮಾತನಾಡಿ, ಮತದಾರರ ಪಟ್ಟಿಗಳ ವಿಶೇಷ ಸಮಗ್ರ ಪರಿಷ್ಕರಣೆ-2026ರ ಮಹತ್ವವನ್ನು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಅರಿತುಕೊಂಡು ಚುನಾವಣಾ ಆಯೋಗದ ಕಾರ್ಯಕ್ಕೆ ಸಹಕರಿಸಬೇಕು ಎಂದು ಹೇಳಿದರು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದ ಸಹಾಯಕ ಪ್ರಾಧ್ಯಾಪಕ ಡಾ. ಪಿ.ಎಚ್. ಕ್ಯಾರಕೊಪ್ಪ ಸ್ವಾಗತಿಸಿದರು. ಐಕ್ಯೂಎಸಿ ಸಂಚಾಲಕ ಖಲೀಲ್ ಅಹ್ಮದ್ ಚಿಕ್ಕೇರೂರ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಸಹಾಯಕ ಪ್ರಾಧ್ಯಾಪಕ ಮಲಪ್ಪ ಹೊಸೂರು ಕಾರ್ಯಕ್ರಮ ನಿರೂಪಿಸಿ, ಡಾ. ಮಹಾದೇವ ವಡೇಕಾರ ವಂದಿಸಿದರು.



