ಮಂಗಳೂರು: ಚಿನ್ನಾಭರಣ ದೋಚುವ ಉದ್ದೇಶದಿಂದ 80 ವರ್ಷದ ವೃದ್ಧೆಗೆ ಆಹಾರದಲ್ಲಿ ವಿಷ ಬೆರೆಸಿ, ಬಳಿಕ ಉಸಿರುಗಟ್ಟಿಸಿ ಹತ್ಯೆ ನಡೆಸಿದ ಪ್ರಕರಣದಲ್ಲಿ ಮೂವರು ಆರೋಪಿಗಳ ಅಪರಾಧ ಸಾಬೀತಾಗಿದ್ದು, ಮಂಗಳೂರಿನ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ (ವಿಶೇಷ) ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.
ಅಮ್ಟಾಡಿ ಹೀರಾ ನಿವಾಸಿ ವಿಲ್ಮಾ ಪ್ರಸ್ಚಿತಾ ಬಾರೆಟ್ಟೊ (30), ನರಿಕೊಂಬು ಪದಕಟ್ಟೆ ಹೊಯಿಗೆಬೈಲು ನಿವಾಸಿ ಚರಣ್ ಕುಮಾರ್ (34) ಹಾಗೂ ನರಿಕೊಂಬು ಅಂತರಹೌಸ್ ನಿವಾಸಿ ಸತೀಶ್ ಎ.ಆರ್. (33) ಶಿಕ್ಷೆಗೆ ಗುರಿಯಾದ ಅಪರಾಧಿಗಳು.
ಪ್ರಕರಣದ ವಿವರಗಳ ಪ್ರಕಾರ, ಬಂಟ್ವಾಳ ತಾಲೂಕಿನ ಅಮ್ಮುಂಜೆ ಗ್ರಾಮದ ಪಾಂಡೀಲಿ ನಿವಾಸಿ ಬೆನೆಡಿಕ್ಟ್ ಕಾರ್ಲೊ (80) ಅವರು ಪತಿ ಇನಾಸ್ ಕಾರ್ಲೊ ಅವರೊಂದಿಗೆ ವಾಸವಾಗಿದ್ದರು. ಪಾರ್ಶ್ವವಾಯುವಿನಿಂದ ಬಳಲುತ್ತಿದ್ದ ಇನಾಸ್ ಕಾರ್ಲೊ ಹಾಸಿಗೆ ಹಿಡಿದಿದ್ದ ಹಿನ್ನೆಲೆಯಲ್ಲಿ, ಮನೆಯ ಆರೈಕೆಗಾಗಿ ವಿಲ್ಮಾ ಪ್ರಸ್ಚಿತಾ ಬಾರೆಟ್ಟೊ ಕಳೆದ ಎರಡು ತಿಂಗಳಿನಿಂದ ಕೆಲಸ ಮಾಡುತ್ತಿದ್ದಳು.
ಈ ವೇಳೆ ಬೆನೆಡಿಕ್ಟ್ ಕಾರ್ಲೊ ಧರಿಸುತ್ತಿದ್ದ ಚಿನ್ನದ ಕರಿಮಣಿ ಸರ ಹಾಗೂ ಮನೆಯಲ್ಲಿದ್ದ ಇತರೆ ಚಿನ್ನಾಭರಣಗಳನ್ನು ಗಮನಿಸಿದ ವಿಲ್ಮಾ, ಅವುಗಳನ್ನು ದೋಚುವ ಉದ್ದೇಶದಿಂದ ಸಂಚು ರೂಪಿಸಿದ್ದಳು. ಈ ವಿಷಯವನ್ನು ಪರಿಚಿತನಾದ ಸತೀಶ್ಗೆ ತಿಳಿಸಿದ್ದು, ಆತ ವೃದ್ಧೆಗೆ ಆಹಾರದಲ್ಲಿ ವಿಷ ಬೆರೆಸುವಂತೆ ಸಲಹೆ ನೀಡಿದ್ದಾನೆ ಎಂದು ತನಿಖೆಯಲ್ಲಿ ಬಹಿರಂಗವಾಗಿದೆ.
ಅದರಂತೆ 2021ರ ಜನವರಿ 25ರಂದು ರಾತ್ರಿ ವಿಲ್ಮಾ ಆಹಾರದಲ್ಲಿ ವಿಷ ಬೆರೆಸಿದ್ದಳು. ವಿಷ ಸೇವಿಸಿದ ಬಳಿಕ ಬೆನೆಡಿಕ್ಟ್ ಕಾರ್ಲೊ ಅರೆಪ್ರಜ್ಞಾವಸ್ಥೆಗೆ ತಲುಪಿದ್ದರು. ಬಳಿಕ ವಿಲ್ಮಾ ಮತ್ತು ಸತೀಶ್ ನಡುವಿನ ಮಾತುಕತೆಯ ನಂತರ ವೃದ್ಧೆಯನ್ನು ಉಸಿರುಗಟ್ಟಿಸಿ ಕೊಲ್ಲುವ ನಿರ್ಧಾರ ಕೈಗೊಳ್ಳಲಾಗಿತ್ತು.
ಯೋಜನೆಯಂತೆ ಸತೀಶ್, ಚರಣ್ ಕುಮಾರ್ನನ್ನು ಮನೆಗೆ ಕಳುಹಿಸಿದ್ದು, ಚಿನ್ನಾಭರಣದಲ್ಲಿ ಪಾಲು ನೀಡುವ ಷರತ್ತಿನ ಮೇರೆಗೆ ಆತ ಸಂಚಿನಲ್ಲಿ ಭಾಗಿಯಾಗಿದ್ದಾನೆ. ಬಳಿಕ ವಿಲ್ಮಾ ಮತ್ತು ಚರಣ್ ಕುಮಾರ್ ಸೇರಿ ತಲೆದಿಂಬು ಹಾಗೂ ಬಟ್ಟೆಯನ್ನು ಬಳಸಿ ಬೆನೆಡಿಕ್ಟ್ ಕಾರ್ಲೊ ಅವರನ್ನು ಉಸಿರುಗಟ್ಟಿಸಿ ಹತ್ಯೆ ಮಾಡಿದ್ದಾರೆ.
ಹತ್ಯೆಯ ಬಳಿಕ ಮೃತೆಯ ಕುತ್ತಿಗೆಯಲ್ಲಿದ್ದ ಚಿನ್ನದ ಕರಿಮಣಿ ಸರ, ಕಿವಿಯೋಲೆ, ಬಳೆ, ಉಂಗುರ, ಚೈನ್ ಸೇರಿದಂತೆ ಸುಮಾರು ₹2.75 ಲಕ್ಷ ಮೌಲ್ಯದ, 61.070 ಗ್ರಾಂ ತೂಕದ ಚಿನ್ನಾಭರಣವನ್ನು ದೋಚಿದ್ದಾರೆ. ನಂತರ ವಿಷದ ಉಳಿದ ಅಂಶವನ್ನು ರಸ್ತೆಯ ತೋಡಿಗೆ ಎಸೆದು ಸಾಕ್ಷ್ಯ ನಾಶಪಡಿಸಲು ಯತ್ನಿಸಿದ್ದಾರೆ.
2021ರ ಜನವರಿ 26ರಂದು ಪ್ರಕರಣ ಬೆಳಕಿಗೆ ಬಂದಿದ್ದು, ಆರಂಭದಲ್ಲಿ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅನುಮಾನಾಸ್ಪದ ಸಾವು ಎಂದು ಪ್ರಕರಣ ದಾಖಲಾಗಿತ್ತು. ಬಳಿಕ ಪೊಲೀಸ್ ತನಿಖೆಯಲ್ಲಿ ಇದು ಪೂರ್ವಯೋಜಿತ ಕೊಲೆ ಎಂಬುದು ದೃಢಪಟ್ಟ ಹಿನ್ನೆಲೆಯಲ್ಲಿ ಕೊಲೆ ಪ್ರಕರಣ ದಾಖಲಿಸಲಾಗಿತ್ತು.
ಪ್ರಕರಣದ ವಿಚಾರಣೆ ನಡೆಸಿದ ಮಂಗಳೂರಿನ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ (ವಿಶೇಷ) ನ್ಯಾಯಾಲಯದ ನ್ಯಾಯಾಧೀಶ ಜಗದೀಶ್ ವಿ.ಎನ್. ಅವರು ಮೂವರು ಆರೋಪಿಗಳ ವಿರುದ್ಧದ ಆರೋಪಗಳು ಸಾಬೀತಾಗಿವೆ ಎಂದು ತೀರ್ಪು ನೀಡಿದ್ದಾರೆ.



