ವಿಜಯಸಾಕ್ಷಿ ಸುದ್ದಿ, ಗದಗ: ಕಡ್ಲಿಗಡಬ ಹುಣ್ಣಿಮೆ ಹಾಗೂ ಗುರುಪೌರ್ಣಿಮೆ ಅಂಗವಾಗಿ ನಭಾಪೂರ ಹದ್ದಿನಲ್ಲಿರುವ ಶ್ರೀ ಮಲ್ಲೆಮ್ಮತಾಯಿ ದೇವಸ್ಥಾನದಲ್ಲಿ ಬುಧವಾರ ವಿಶೇಷ ಧಾರ್ಮಿಕ ಕಾರ್ಯಕ್ರಮಗಳು ಭಕ್ತಿಭಾವದಿಂದ ನೆರವೇರಿದವು.
ಈ ಪ್ರಯುಕ್ತ ಬೆಳಿಗ್ಗೆ ಮಹಾರುದ್ರಾಭಿಷೇಕ, ಬಿಲ್ವಾರ್ಚನೆ ಹಾಗೂ ಮಹಾಮಂಗಳಾರತಿ ವಿಜೃಂಭಣೆಯಿಂದ ನಡೆಯಿತು. ಬೆಳಧಡಿ ಗ್ರಾಮದ ಕೃಷ್ಣಪ್ಪ ಶಿವಪ್ಪ ತೋಟದ ಕುಟುಂಬದವರು ಅಭಿಷೇಕ ಸೇವೆಯನ್ನು ನೆರವೇರಿಸಿ ದೇವಿಯ ಕೃಪೆಗೆ ಪಾತ್ರರಾದರು.
ಪೂಜಾ ವಿಧಿವಿಧಾನಗಳನ್ನು ಅರ್ಚಕ ಮಲ್ಲಯ್ಯಸ್ವಾಮಿ ಅಂಗಡಿ ಹಿರೇಮಠ ನೆರವೇರಿಸಿದರು. ಕಾರ್ಯಕ್ರಮದಲ್ಲಿ ಸುತ್ತಮುತ್ತಲಿನ ಗ್ರಾಮಗಳ ಭಕ್ತರು, ತಾಯಂದಿರು ಹಾಗೂ ಹಿರಿಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಮಲ್ಲೆಮ್ಮತಾಯಿಯ ದರ್ಶನ ಪಡೆದು ವಿಶೇಷ ಪೂಜೆಯಲ್ಲಿ ಭಾಗವಹಿಸಿದರು.
ಪೂಜೆ ಬಳಿಕ ಭಕ್ತರಿಗೆ ಮಹಾಪ್ರಸಾದ ವಿತರಿಸಲಾಗಿದ್ದು, ತೋಟದ ಕುಟುಂಬದವರು ಪ್ರಸಾದ ಸೇವೆಯ ವ್ಯವಸ್ಥೆ ಮಾಡಿದರು. ಭಕ್ತರು ದೇವಿಯ ಆಶೀರ್ವಾದ ಪಡೆದು ಧನ್ಯತೆ ಮೆರೆದರು.



