ಸಮಾಜವನ್ನು ಬದಲಾಯಿಸಲು ಕಾನೂನು, ಶಿಕ್ಷೆ ಅಥವಾ ಭಯಕ್ಕಿಂತಲೂ ಮನಪರಿವರ್ತನೆಯೇ ಅತ್ಯಂತ ದೊಡ್ಡ ಅಸ್ತ್ರ ಎಂಬುದನ್ನು ತಮ್ಮ ಬದುಕಿನ ಮೂಲಕ ಸಾಬೀತುಪಡಿಸಿದ ಮಹಾನ್ ಸಮಾಜ ಸುಧಾರಕರಲ್ಲಿ ಲಿಂಗೈಕ್ಯ ಡಾ. ಮಹಾಂತ ಶಿವಯೋಗಿ ಅಜ್ಜನವರು ಅಗ್ರಗಣ್ಯರು.
ಕೈಯಲ್ಲಿ ಕೆಂಪು ಬಣ್ಣದ ಜೋಳಿಗೆ, ಹೃದಯದಲ್ಲಿ ಸಮಾಜದ ನೋವು, ತುಟಿಗಳಲ್ಲಿ ಜಾಗೃತಿಯ ಸಂದೇಶ ಹೊತ್ತು ದೇಶ-ವಿದೇಶಗಳಲ್ಲಿ ಸಂಚರಿಸಿದ ಅವರು, ಲಕ್ಷಾಂತರ ಜನರ ಬದುಕಿನಲ್ಲಿ ಹೊಸ ಬೆಳಕು ಮೂಡಿಸಿದರು. ಜನರಿಂದ ಹಣವಲ್ಲ, ಮದ್ಯ, ತಂಬಾಕು, ಗುಟ್ಕಾ, ಬೀಡಿ, ಸಿಗರೇಟ್ ಸೇರಿದಂತೆ ತಮ್ಮ ದುಷ್ಚಟಗಳನ್ನೇ ಜೋಳಿಗೆಗೆ ಹಾಕುವಂತೆ ಭಿಕ್ಷೆ ಬೇಡಿದ ಅವರ ಅಪರೂಪದ ಅಭಿಯಾನ ವಿಶ್ವದಲ್ಲೇ ವಿಶಿಷ್ಟ ಸಾಮಾಜಿಕ ಜಾಗೃತಿ ಚಳವಳಿಯಾಗಿ ಗುರುತಿಸಿಕೊಂಡಿದೆ.
ಅವರ ಈ ಅಪೂರ್ವ ಸೇವೆಯನ್ನು ಗೌರವಿಸಿ ಕರ್ನಾಟಕ ಸರ್ಕಾರವು ಪ್ರತಿವರ್ಷ ಆಗಸ್ಟ್ 1ರಂದು ‘ವ್ಯಸನ ಮುಕ್ತ ದಿನಾಚರಣೆ’ಯನ್ನು ರಾಜ್ಯಾದ್ಯಂತ ಆಚರಿಸುತ್ತಿದೆ. ಯುವಜನತೆಯಲ್ಲಿ ಮಾದಕ ವಸ್ತುಗಳ ದುಷ್ಪರಿಣಾಮಗಳ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ಈ ದಿನಕ್ಕೆ ವಿಶೇಷ ಮಹತ್ವ ನೀಡಲಾಗಿದೆ.
ಬಾಲ್ಯದಲ್ಲೇ ಸನ್ಯಾಸ, ಸಮಾಜ ಸೇವೆಯತ್ತ ಪಯಣ
1930ರ ಆಗಸ್ಟ್ 1ರಂದು ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಹಿಪ್ಪರಗಿ ಗ್ರಾಮದಲ್ಲಿ ಜನಿಸಿದ ಡಾ. ಮಹಾಂತ ಶಿವಯೋಗಿಗಳು ಬಾಲ್ಯದಲ್ಲಿಯೇ ಆಧ್ಯಾತ್ಮಿಕ ಬದುಕಿನತ್ತ ಆಕರ್ಷಿತರಾದರು. ಕೇವಲ 10ನೇ ವಯಸ್ಸಿನಲ್ಲೇ ಸನ್ಯಾಸ ಸ್ವೀಕರಿಸಿ ಸವದಿಯ ವಿರಕ್ತ ಮಠದ ಚಿಕ್ಕ ಸ್ವಾಮೀಜಿಗಳಾದರು.
ಕಾಶಿಯಲ್ಲಿ ಸಂಸ್ಕೃತ, ಹಿಂದಿ, ಯೋಗ, ಶಾಸ್ತ್ರೀಯ ಸಂಗೀತ ಹಾಗೂ ಆಧ್ಯಾತ್ಮಿಕ ವಿದ್ಯೆಗಳಲ್ಲಿ ಉನ್ನತ ಶಿಕ್ಷಣ ಪಡೆದ ಅವರು, ತಮ್ಮ ಜ್ಞಾನವನ್ನು ಸಮಾಜದ ಒಳಿತಿಗಾಗಿ ಬಳಸುವ ಸಂಕಲ್ಪ ಕೈಗೊಂಡರು. 1970ರಲ್ಲಿ ಚಿತ್ತರಗಿ ಶ್ರೀ ವಿಜಯ ಮಹಾಂತೇಶ್ವರ ಸಂಸ್ಥಾನ ಮಠದ 19ನೇ ಪೀಠಾಧಿಪತಿಗಳಾಗಿ ಅಧಿಕಾರ ವಹಿಸಿಕೊಂಡ ನಂತರ ಸಮಾಜಮುಖಿ ಕಾರ್ಯಗಳಿಗೆ ಹೊಸ ದಿಕ್ಕು ನೀಡಿದರು.
ಒಂದು ಕುಟುಂಬದ ದುರಂತದಿಂದ ಹುಟ್ಟಿದ ಮಹಾನ್ ಚಳವಳಿ
ಅತಿಯಾದ ಮದ್ಯಪಾನದಿಂದ ಮೃತಪಟ್ಟ ಯುವಕನ ಮನೆಗೆ ಸಾಂತ್ವನ ಹೇಳಲು ತೆರಳಿದಾಗ ಕಂಡ ದೃಶ್ಯ ಶ್ರೀಗಳ ಬದುಕಿನ ದಿಕ್ಕನ್ನೇ ಬದಲಿಸಿತು. ಗಂಡನನ್ನು ಕಳೆದುಕೊಂಡ ಪತ್ನಿ, ಹಸಿವಿನಿಂದ ಕಣ್ಣೀರು ಸುರಿಸುತ್ತಿದ್ದ ಮಕ್ಕಳು, ದಿಕ್ಕಿಲ್ಲದೆ ನಿಂತ ಕುಟುಂಬವನ್ನು ಕಂಡ ಅವರು, ಇದು ಕೇವಲ ಒಂದು ಕುಟುಂಬದ ದುಃಖವಲ್ಲ, ಸಾವಿರಾರು ಮನೆಗಳ ವಾಸ್ತವ ಎಂದು ಅರಿತುಕೊಂಡರು.
ಈ ಅನುಭವವೇ 1975ರಲ್ಲಿ ‘ಮಹಾಂತ ಜೋಳಿಗೆ’ ಅಭಿಯಾನಕ್ಕೆ ಕಾರಣವಾಯಿತು.
ಹಣವಲ್ಲ, ದುಷ್ಚಟಗಳನ್ನೇ ಜೋಳಿಗೆಗೆ ಹಾಕಿ!
ಕೈಯಲ್ಲಿ ಕೆಂಪು ಜೋಳಿಗೆ ಹಿಡಿದು ಮನೆ-ಮನೆಗೆ ತೆರಳುತ್ತಿದ್ದ ಶ್ರೀಗಳು,
“ಮದ್ಯ, ತಂಬಾಕು, ಗುಟ್ಕಾ, ಬೀಡಿ, ಸಿಗರೇಟ್ ಹಾಗೂ ಎಲ್ಲ ರೀತಿಯ ದುಷ್ಚಟಗಳನ್ನು ಈ ಜೋಳಿಗೆಗೆ ಹಾಕಿ… ಇನ್ನು ಮುಂದೆ ಅವುಗಳಿಂದ ದೂರವಿರಿ” ಎಂದು ಮನವಿ ಮಾಡುತ್ತಿದ್ದರು.
ಅವರ ಮಾತಿನಲ್ಲಿ ಭಯ ಇರಲಿಲ್ಲ; ಪ್ರೀತಿ, ಕಾಳಜಿ ಹಾಗೂ ಬದುಕಿನ ಮೌಲ್ಯಗಳಿದ್ದವು. ಪರಿಣಾಮ ಸಾವಿರಾರು ಜನರು ವ್ಯಸನ ತೊರೆದು ಹೊಸ ಬದುಕು ಆರಂಭಿಸಿದರು.
ಸುಮಾರು 42 ವರ್ಷಗಳ ಕಾಲ ದೇಶದ ಮೂಲೆಮೂಲೆಗೂ ಹಾಗೂ ಇಂಗ್ಲೆಂಡ್ ಸೇರಿದಂತೆ ವಿದೇಶಗಳಿಗೂ ತೆರಳಿ ವ್ಯಸನ ಮುಕ್ತ ಸಮಾಜಕ್ಕಾಗಿ ಅವರು ನಿರಂತರ ಜನಜಾಗೃತಿ ಮೂಡಿಸಿದರು.
ವ್ಯಸನ ನಿರ್ಮೂಲನೆ ಮಾತ್ರವಲ್ಲ… ಸಮಾಜ ಸುಧಾರಣೆಯ ಮಹಾಯಜ್ಞ
ಡಾ. ಮಹಾಂತ ಶಿವಯೋಗಿ ಅಜ್ಜನವರ ಸೇವೆ ವ್ಯಸನ ನಿರ್ಮೂಲನೆಗೆ ಮಾತ್ರ ಸೀಮಿತವಾಗಿರಲಿಲ್ಲ.
ಅವರು ನಿರಂತರ ಅನ್ನದಾಸೋಹ, ವಚನ ಮಾಂಗಲ್ಯ, ದೇವದಾಸಿ ವಿಮೋಚನಾ ಚಳವಳಿ, ದೇವದಾಸಿಯರ ಮಕ್ಕಳಿಗಾಗಿ ಟ್ರಸ್ಟ್ ಸ್ಥಾಪನೆ, ನಿರುದ್ಯೋಗಿಗಳು ಹಾಗೂ ವಿಧವೆಯರಿಗಾಗಿ ‘ಕಾಯಕ ಸಂಜೀವಿನಿ’ ಸಂಸ್ಥೆ, ಯೋಗ ಮತ್ತು ನಿಸರ್ಗ ಚಿಕಿತ್ಸಾ ಕೇಂದ್ರಗಳು, ಪರಿಶಿಷ್ಟ ಜಾತಿ ಹಾಗೂ ಪಂಗಡದ ಯುವಕರಿಗೆ ಧರ್ಮ ಸಂಸ್ಕಾರ, ಮಹಿಳಾ ಸಾಧಕಿಯರಿಗೆ ಜಂಗಮ ದೀಕ್ಷೆ ನೀಡಿ ಮಠಾಧಿಪತಿಗಳನ್ನಾಗಿ ಮಾಡುವುದು, ಮಠದ ಜಮೀನಿನಲ್ಲಿ ರೈತರಿಗೆ ಕೃಷಿಗೆ ಅವಕಾಶ ಕಲ್ಪಿಸುವುದು ಹಾಗೂ ಬರಗಾಲದ ಸಂದರ್ಭದಲ್ಲಿ ಗಂಜಿ ಕೇಂದ್ರಗಳನ್ನು ಆರಂಭಿಸುವ ಮೂಲಕ ಸಮಾಜದ ಎಲ್ಲ ವರ್ಗಗಳ ಅಭಿವೃದ್ಧಿಗೆ ಶ್ರಮಿಸಿದರು.
ಸಮಾಜ ಸೇವೆಗೆ ಸಂದ ಅನೇಕ ಗೌರವಗಳು
ಅವರ ಅಪೂರ್ವ ಸೇವೆಗಾಗಿ ‘ಅಭಿನವ ಚನ್ನಬಸವಣ್ಣ’, ‘ಕಾಯಕನಿಷ್ಠ ಶಿವಯೋಗಿ’, ‘ಪ್ರವಚನ ಪ್ರವೀಣ’, ‘ಕಾಯಕಯೋಗಿ’, ‘ಸಮಾಜ ಸುಧಾರಕ’, ‘ದಲಿತೋದ್ಧಾರ ಮಹಾಂತ’, ‘ಸ್ಪಂದನ ಪ್ರಶಸ್ತಿ’, ‘ಗಣಾಚಾರ ಪ್ರಶಸ್ತಿ’, ‘ಕನಕಶ್ರೀ ಪ್ರಶಸ್ತಿ’, ‘ನಾಡಿನ ಪುಣ್ಯದ ಶಿವಯೋಗಿ ಪ್ರಶಸ್ತಿ’, ‘ಯೋಗರತ್ನ ಪ್ರಶಸ್ತಿ’ ಸೇರಿದಂತೆ ಹಲವಾರು ಪ್ರತಿಷ್ಠಿತ ಗೌರವಗಳು ಅವರಿಗೆ ಲಭಿಸಿವೆ.
ಸಂದೇಶ ಇಂದಿಗೂ ಜೀವಂತ
2018ರಲ್ಲಿ ಡಾ. ಮಹಾಂತ ಶಿವಯೋಗಿ ಅಜ್ಜನವರು ಶಿವೈಕ್ಯರಾದರೂ, ಅವರು ಬಿತ್ತಿದ ವ್ಯಸನ ಮುಕ್ತ ಸಮಾಜದ ಕನಸು ಇಂದಿಗೂ ಲಕ್ಷಾಂತರ ಜನರಿಗೆ ಪ್ರೇರಣೆಯಾಗಿದೆ.
ಇಂದಿನ ದಿನಗಳಲ್ಲಿ ಯುವಜನತೆ ಮಾದಕ ವಸ್ತುಗಳತ್ತ ಆಕರ್ಷಿತರಾಗುತ್ತಿರುವ ಸಂದರ್ಭದಲ್ಲಿ, ಅವರ ‘ಮಹಾಂತ ಜೋಳಿಗೆ’ ಚಳವಳಿ ಇನ್ನಷ್ಟು ಪ್ರಸ್ತುತವಾಗಿದೆ. ಆರೋಗ್ಯವಂತ ವ್ಯಕ್ತಿ, ಸುಖೀ ಕುಟುಂಬ ಹಾಗೂ ಸದೃಢ ಸಮಾಜ ನಿರ್ಮಾಣಕ್ಕೆ ಅವರ ಆದರ್ಶಗಳು ಇಂದಿಗೂ ದಾರಿದೀಪವಾಗಿವೆ.
“ಲಿಂಗೈಕ್ಯ ಡಾ. ಮಹಾಂತ ಶಿವಯೋಗಿ ಅಜ್ಜನವರು ಆರಂಭಿಸಿದ ‘ಮಹಾಂತ ಜೋಳಿಗೆ’ ಅಭಿಯಾನವು ಕೇವಲ ವ್ಯಸನ ವಿರೋಧಿ ಚಳವಳಿಯಲ್ಲ; ಅದು ಸಮಾಜದ ಮನಪರಿವರ್ತನೆಯ ಮಹತ್ವದ ಆಂದೋಲನವಾಗಿದೆ. ಪ್ರತಿಯೊಬ್ಬ ಯುವಕ-ಯುವತಿಯೂ ಮಾದಕ ವಸ್ತುಗಳು ಹಾಗೂ ದುಷ್ಚಟಗಳಿಂದ ದೂರವಿದ್ದು ಆರೋಗ್ಯಯುತ ಜೀವನ ನಡೆಸಬೇಕು. ಆಗಸ್ಟ್ 1ರ ವ್ಯಸನ ಮುಕ್ತ ದಿನಾಚರಣೆಯ ಅಂಗವಾಗಿ ಪ್ರತಿಯೊಬ್ಬರೂ ತಮ್ಮ ಕುಟುಂಬ, ಸ್ನೇಹಿತರು ಹಾಗೂ ಸಮಾಜದಲ್ಲಿ ವ್ಯಸನ ವಿರೋಧಿ ಜಾಗೃತಿ ಮೂಡಿಸುವ ಸಂಕಲ್ಪ ಮಾಡಬೇಕು. ವ್ಯಸನ ಮುಕ್ತ ವ್ಯಕ್ತಿ, ವ್ಯಸನ ಮುಕ್ತ ಕುಟುಂಬ ಮತ್ತು ವ್ಯಸನ ಮುಕ್ತ ಗ್ರಾಮಗಳ ನಿರ್ಮಾಣವೇ ಡಾ. ಮಹಾಂತ ಶಿವಯೋಗಿ ಅಜ್ಜನವರಿಗೆ ಸಲ್ಲಿಸುವ ನಿಜವಾದ ಗೌರವವಾಗಿದೆ.”
– ಸಿ.ಎನ್. ಶ್ರೀಧರ್, ಜಿಲ್ಲಾಧಿಕಾರಿ, ಗದಗ
ಪ್ರಮುಖಾಂಶಗಳು
- 1930ರ ಆಗಸ್ಟ್ 1ರಂದು ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಹಿಪ್ಪರಗಿ ಗ್ರಾಮದಲ್ಲಿ ಜನನ.
- ಕೇವಲ 10ನೇ ವಯಸ್ಸಿನಲ್ಲೇ ಸನ್ಯಾಸ ಸ್ವೀಕರಿಸಿ ಸವದಿಯ ವಿರಕ್ತ ಮಠದ ಚಿಕ್ಕ ಸ್ವಾಮೀಜಿಗಳಾದರು.
- ಕಾಶಿಯಲ್ಲಿ ಸಂಸ್ಕೃತ, ಹಿಂದಿ, ಯೋಗ, ಶಾಸ್ತ್ರೀಯ ಸಂಗೀತ ಹಾಗೂ ಆಧ್ಯಾತ್ಮಿಕ ವಿದ್ಯೆಗಳಲ್ಲಿ ಪರಿಣತಿ ಪಡೆದರು.
- 1970ರಲ್ಲಿ ಚಿತ್ತರಗಿ ಶ್ರೀ ವಿಜಯ ಮಹಾಂತೇಶ್ವರ ಸಂಸ್ಥಾನ ಮಠದ 19ನೇ ಪೀಠಾಧಿಪತಿಗಳಾಗಿ ಅಧಿಕಾರ ವಹಿಸಿಕೊಂಡರು.
- 1975ರಲ್ಲಿ ಐತಿಹಾಸಿಕ ‘ಮಹಾಂತ ಜೋಳಿಗೆ’ ವ್ಯಸನ ವಿರೋಧಿ ಅಭಿಯಾನ ಆರಂಭಿಸಿದರು.
- 42 ವರ್ಷಗಳ ಕಾಲ ದೇಶ-ವಿದೇಶಗಳಲ್ಲಿ ಸಂಚರಿಸಿ ವ್ಯಸನ ಮುಕ್ತ ಸಮಾಜಕ್ಕಾಗಿ ಜನಜಾಗೃತಿ ಮೂಡಿಸಿದರು.
- ಅನ್ನದಾಸೋಹ, ದೇವದಾಸಿ ವಿಮೋಚನೆ, ಯೋಗ-ನಿಸರ್ಗ ಚಿಕಿತ್ಸೆ, ಮಹಿಳಾ ಸಬಲೀಕರಣ, ರೈತರಿಗೆ ನೆರವು ಸೇರಿದಂತೆ ಅನೇಕ ಸಮಾಜಮುಖಿ ಕಾರ್ಯಕ್ರಮಗಳನ್ನು ಜಾರಿಗೊಳಿಸಿದರು.
- ಸಮಾಜ ಸೇವೆಗಾಗಿ ‘ಅಭಿನವ ಚನ್ನಬಸವಣ್ಣ’, ‘ಸಮಾಜ ಸುಧಾರಕ’, ‘ಕಾಯಕಯೋಗಿ’, ‘ಯೋಗರತ್ನ’ ಸೇರಿದಂತೆ ಹಲವು ಪ್ರತಿಷ್ಠಿತ ಪ್ರಶಸ್ತಿಗಳಿಗೆ ಭಾಜನರಾದರು.
- 2018ರಲ್ಲಿ ಶಿವೈಕ್ಯರಾದರೂ ಅವರ ವ್ಯಸನ ಮುಕ್ತ ಸಮಾಜದ ಸಂದೇಶ ಇಂದಿಗೂ ಲಕ್ಷಾಂತರ ಜನರಿಗೆ ಸ್ಫೂರ್ತಿಯಾಗಿದೆ.
- ಅವರ ಅಪೂರ್ವ ಸಮಾಜ ಸೇವೆಯನ್ನು ಗೌರವಿಸಿ ಕರ್ನಾಟಕ ಸರ್ಕಾರವು ಪ್ರತಿವರ್ಷ ಆಗಸ್ಟ್ 1 ಅನ್ನು ‘ವ್ಯಸನ ಮುಕ್ತ ದಿನಾಚರಣೆ’ಯಾಗಿ ಆಚರಿಸುತ್ತಿದೆ.
ವಸಂತ ಬಿ. ಮಡ್ಲೂರ, ಸಹಾಯಕ ನಿರ್ದೇಶಕರು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಗದಗ.

