ವಿಜಯಸಾಕ್ಷಿ ಸುದ್ದಿ, ಗದಗ: ಗದಗ ಜಿಲ್ಲಾ ಶರಣ ಸಾಹಿತ್ಯ ಪರಿಷತ್, ಕದಳಿ ವೇದಿಕೆ ಹಾಗೂ ಶ್ರೀ ಜಗದ್ಗುರು ಬೂದೀಶ್ವರ ವಿದ್ಯಾಪೀಠ, ಹೊಸಹಳ್ಳಿ ಇವರ ಸಂಯುಕ್ತ ಆಶ್ರಯದಲ್ಲಿ ಗದಗ ಜಿಲ್ಲಾ ದ್ವಿತೀಯ ಮಕ್ಕಳ ಶರಣ ಸಾಹಿತ್ಯ ಸಮ್ಮೇಳನವನ್ನು ಆಗಸ್ಟ್ 1ರಂದು ಹೊಸಹಳ್ಳಿ ಗ್ರಾಮದ ಶ್ರೀ ಜಗದ್ಗುರು ಬೂದೀಶ್ವರ ಸಂಸ್ಥಾನ ಮಠದಲ್ಲಿ ಆಯೋಜಿಸಲಾಗಿದೆ ಎಂದು ಶರಣ ಸಾಹಿತ್ಯ ಪರಿಷತ್ ಜಿಲ್ಲಾ ಅಧ್ಯಕ್ಷ ಕೆ.ಎ. ಬಳಿಗೇರ ತಿಳಿಸಿದ್ದಾರೆ.
ಪತ್ರಿಕಾ ಪ್ರಕಟಣೆಯಲ್ಲಿ ಈ ಕುರಿತು ಮಾಹಿತಿ ನೀಡಿರುವ ಅವರು, ಬೆಳಿಗ್ಗೆ 8.30ಕ್ಕೆ ರಾಷ್ಟ್ರಧ್ವಜ, ನಾಡಧ್ವಜ ಹಾಗೂ ಪರಿಷತ್ ಧ್ವಜಾರೋಹಣ ನೆರವೇರಲಿದ್ದು, ಜಗದ್ಗುರು ಅಭಿನವ ಬೂದೀಶ್ವರ ಮಹಾಸ್ವಾಮೀಜಿ, ಕೆ.ಎ. ಬಳಿಗೇರ ಹಾಗೂ ಕದಳಿ ವೇದಿಕೆ ಜಿಲ್ಲಾ ಅಧ್ಯಕ್ಷೆ ಸುಧಾ ಹುಚ್ಚಣ್ಣವರ ಧ್ವಜಾರೋಹಣ ನೆರವೇರಿಸಲಿದ್ದಾರೆ ಎಂದರು.
ಬೆಳಿಗ್ಗೆ 10 ಗಂಟೆಗೆ ನಡೆಯುವ ಉದ್ಘಾಟನಾ ಸಮಾರಂಭದಲ್ಲಿ ಮಕ್ಕಳ ಸಾಹಿತಿ ಡಾ. ನಿಂಗು ಸೊಲಗಿ ಸಮ್ಮೇಳನಾಧ್ಯಕ್ಷರಾಗಿದ್ದು, ಜಗದ್ಗುರು ಅಭಿನವ ಬೂದೀಶ್ವರ ಮಹಾಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ಮಾಜಿ ಶಾಸಕ ಡಿ.ಆರ್. ಪಾಟೀಲ ಸಮ್ಮೇಳನ ಉದ್ಘಾಟಿಸಲಿದ್ದು, ಕೆಸಿಸಿ ಬ್ಯಾಂಕ್ ಅಧ್ಯಕ್ಷ ಶಿವಕುಮಾರಗೌಡ ಪಾಟೀಲ ಗ್ರಂಥ ಲೋಕಾರ್ಪಣೆ ಮಾಡಲಿದ್ದಾರೆ. ಇದೇ ಸಂದರ್ಭದಲ್ಲಿ ವಚನ ಗಾಯನ ಹಾಗೂ ಶಾಲಾ ಮಕ್ಕಳಿಂದ ವಚನ ನೃತ್ಯ ಪ್ರದರ್ಶನ ನಡೆಯಲಿದೆ.
ಮಧ್ಯಾಹ್ನ 12 ಗಂಟೆಗೆ ‘ಮರೆಯಲಾಗದ ನಾಡಿನ ಶರಣರು’ ವಿಷಯದ ಗೋಷ್ಠಿ ನಡೆಯಲಿದ್ದು, ಅಶೋಕ ಉಂಡಿ ಅಧ್ಯಕ್ಷತೆ ವಹಿಸಲಿದ್ದಾರೆ. ಶಶಾಂಕ ಸಂಕದಾಳ, ಐಶ್ವರ್ಯ ಪಾಟೀಲ ಹಾಗೂ ಶ್ರೀದೇವಿ ಗಾಳಪ್ಪನವರ ಉಪನ್ಯಾಸ ನೀಡಲಿದ್ದಾರೆ. ಇದೇ ವೇಳೆ ಬಾಲ ವಿಜ್ಞಾನಿ ಪುನೀತರೆಡ್ಡಿ ಎನ್.ಎ. ಅವರು ಆಪ್ಟಿಕಲ್ ಟೆಲಿಸ್ಕೋಪ್ ತಯಾರಿಕೆಯ ಪ್ರಾತ್ಯಕ್ಷಿಕೆ ನೀಡಲಿದ್ದಾರೆ.
ಮಧ್ಯಾಹ್ನ 2.30ಕ್ಕೆ ‘ಮಕ್ಕಳ ವ್ಯಕ್ತಿತ್ವ ರೂಪಿಸುವಲ್ಲಿ ಶಿಕ್ಷಕರೋ, ಪಾಲಕರೋ ಯಾರು ಶ್ರೇಷ್ಠರು?’ ಎಂಬ ವಿಷಯದ ಕುರಿತು ಮಕ್ಕಳ ಹರಟೆ ಗೋಷ್ಠಿ ನಡೆಯಲಿದ್ದು, ಡಾ. ಜಿ.ಬಿ. ಪಾಟೀಲ ಹಾಗೂ ಈಶ್ವರ ಮೇಡ್ಲೇರಿ ಅಧ್ಯಕ್ಷತೆ ವಹಿಸಲಿದ್ದಾರೆ. ಶಿಕ್ಷಕರು ಮತ್ತು ಪಾಲಕರ ಪರವಾಗಿ ವಿದ್ಯಾರ್ಥಿಗಳು ತಮ್ಮ ಅಭಿಪ್ರಾಯ ಮಂಡಿಸಲಿದ್ದಾರೆ.
ಸಂಜೆ 4 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದ್ದು, ಬಳಗಾನೂರಿನ ಶ್ರೀ ಶಿವಶಾಂತವೀರ ಶರಣರು ಸಾನ್ನಿಧ್ಯ ವಹಿಸಲಿದ್ದಾರೆ.
ಈ ಸಂದರ್ಭದಲ್ಲಿ ‘ಬಾಲ ಶರಣಸಿರಿ’ ಪ್ರಶಸ್ತಿಗೆ ಆಯ್ಕೆಯಾದ ಮೈಲಾರಿ ವಗ್ಗರ, ಪ್ರಿಯಾಂಕಾ ಲಮಾಣಿ, ಪ್ರೀತಮ್ ಕಬ್ಬೇರಹಳ್ಳಿ, ಪ್ರೀತಿ ಬುಳ್ಳಾ, ದಿಂಗಾಲೇಶ ಜಂಗಳಿ, ಹರ್ಷಿತಾ ಕೋರಿಶೆಟ್ಟರ, ರಾಹುಲ್ ಕಾರಭಾರಿ ಹಾಗೂ ಪ್ರಣಮ್ಯ ಗುಜಮಾಗಡಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿ ಸನ್ಮಾನಿಸಲಾಗುವುದು.
ಕಾರ್ಯಕ್ರಮದಲ್ಲಿ ವಿವಿಧ ಗಣ್ಯರು, ಸಾಹಿತಿಗಳು, ಶಿಕ್ಷಣ ತಜ್ಞರು ಹಾಗೂ ಸಾರ್ವಜನಿಕರು ಭಾಗವಹಿಸಲಿದ್ದು, ಸಾಹಿತ್ಯಾಸಕ್ತರು ಮತ್ತು ಶರಣ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಕೆ.ಎ. ಬಳಿಗೇರ ಮನವಿ ಮಾಡಿದ್ದಾರೆ.



