ಕೊನೆ ಎಸೆತದಲ್ಲಿ‌ ಬೌಂಡರಿ ಗೆರೆ ದಾಟಿದ ಚೆಂಡು!

0
Spread the love

ರೇಟಿಂಗ್: **

Advertisement

ನಿರ್ಮಾಪಕರು: ಎಸ್.ಪೂರ್ಣಚಂದ್ರ ನಾಯ್ಡು , ಶ್ರೀಕಾಂತ್ ವೀರಮಾಚಿನೇನಿ.
ನಿರ್ದೇಶನ: ಸುಜಯ್ ಕೆ ಶ್ರೀಹರಿ
ಛಾಯಾಗ್ರಹಣ: ಕುಂಜುನ್ನಿ ಎಸ್ ಕುಮಾರ್
ಸಂಗೀತ ನಿರ್ದೇಶನ: ಜಿಬ್ರಾನ್
ಸಂಕಲನ: ಆಂಟೊನಿ
ಕಲಾ ನಿರ್ದೇಶನ: ಶ್ರೀನಿವಾಸ
ಸಾಹಸ: ಡಿಫರೆಂಟ್ ಡ್ಯಾನಿ ಮತ್ತು ಮಾರ್ಷಲ್ ರಾಮಣ್ಣ
ನೃತ್ಯ ಸಂಯೋಜನೆ: ಬಾನು ಮತ್ತು ಜಾನಿ ಮಾಸ್ಟರ್
ಸಾಹಿತ್ಯ: ನಾಗೇಂದ್ರ ಪ್ರಸಾದ್
ಸಂಭಾಷಣೆ: ಗುರು ಪ್ರಸಾದ್ ಮತ್ತು ಇ ಧರ್ಮೇಂದ್ರ
ಚಿತ್ರ ಪ್ರದರ್ಶನ: ಶ್ರೀ ಶಾರದಾ ಚಿತ್ರಮಂದಿರ, ಕೊಪ್ಪಳ.

ಬಸವರಾಜ ಕರುಗಲ್.
ಮೂರು ವರ್ಷಗಳ ನಂತರ ತೆರೆ ಮೇಲೆ ಕಾಣಿಸಿಕೊಂಡಿರೊ ರಿಯಲ್ ಸ್ಟಾರ್ ಉಪೇಂದ್ರ, ಹೋಮ್ ಮಿನಿಸ್ಟರ್ ಸಿನಿಮಾ ಮೂಲಕ ಅವರನ್ನು ಅಭಿಮಾನಿಗಳ ಚಕ್ರವರ್ತಿಯನ್ನಾಗಿ ಮಾಡಲಾಗಿದೆ. ಐ ಲವ್ ಯು ಸಿನಿಮಾದಲ್ಲಿ ಸೋತಿದ್ದ ಉಪ್ಪಿ, ಆನಂತರ ಯಾವ ಸಿನಿಮಾದಲ್ಲೂ ಕಾಣಿಸಿಕೊಂಡಿರಲಿಲ್ಲ. After long gap ಹೋಮ್ ಮಿನಿಸ್ಟರ್ ಅವತಾರದಲ್ಲಿ ಕಾಣಿಸಿಕೊಂಡಿರೊ ಉಪೇಂದ್ರರನ್ನ ನೋಡಲು ಬಹಳ ನಿರೀಕ್ಷೆ ಇಟ್ಟುಕೊಂಡು ಬರಬೇಕಿಲ್ಲ. ಯಾಕೆಂದರೆ ಹೋಮ್ ಮಿನಿಸ್ಟರ್ ಸಿನಿಮಾದಲ್ಲಿ ಅನಿರೀಕ್ಷಿತವಾಗಿ ನಡೆಯುವಂಥದ್ದು, ಘಟಿಸುವಂಥದ್ದು ಏನೂ ಇಲ್ಲ. ಹಾಗಂತ ಅರ್ಧಕ್ಕೆ ಎದ್ದು ಬಂದರೆ ಒಂದೊಳ್ಳೇ ಮೇಸೇಜ್‌ನ್ನ ಮಿಸ್ ಮಾಡ್ಕೊತೀರಾ..

ನಿಜ ಹನ್ನೇರಡು ನಿಮಿಷಗಳ ಅತ್ಯುತ್ತಮ ಸಬ್ಜೆಕ್ಟ್‌ನ್ನ ಸಿನಿಮಾ ಮೂಲಕ ತೆರೆಗೆ ತರಲು ಎರಡೂವರೆ ಗಂಟೆ ಬಳಸಿಕೊಂಡದ್ದು, ಪ್ರೇಕ್ಷಕರಿಗೆ ಹೋಮ್ ಮಿನಿಸ್ಟರ್ ಮಾಡುವ ತಾಳ್ಮೆಯ ಪರೀಕ್ಷೆಯೇ ಸರಿ. ಇಂಥ ಒಳ್ಳೆಯ ವಿಷಯವನ್ನು ಅಚ್ಚುಕಟ್ಟಾಗಿ, ಇಂಟರೆಸ್ಟಿಂಗ್ ಆಗಿ ಸಿನಿಮಾ ಮಾಡುವ ಅವಕಾಶವನ್ನ ಚಿತ್ರದ ನಿರ್ದೇಶಕ ಸುಜಯ್ ಕೆ.ಶ್ರೀಹರಿ ಮಿಸ್ ಮಾಡ್ಕೊಂಡಿದ್ದಾರೆ.

ಕುಟುಂಬವನ್ನೇ ಗಮನದಲ್ಲಿಟ್ಟುಕೊಂಡು ಮಾಡಿದ ಸಿನಿಮಾ ಇದು ಎಂದು ಥಟ್ಟನೇ ಹೇಳಬಹುದು. ಒಂದರ್ಧ ಸಿನಿಮಾ ಶಿವಣ್ಣ ಅಭಿನಯದ “ಅಮ್ಮಾವ್ರ ಗಂಡ” ಸಿನಿಮಾಗೆ ತಾಳೆಯಾಗುತ್ತದೆ.

ಮೊದಲೆಲ್ಲ ಮನೆ ಅಂದ್ರೆ ಅಪ್ಪ, ಅಮ್ಮ, ಗಂಡ, ಹೆಂಡತಿ ಮತ್ತು ಮಕ್ಕಳು ಇರುತ್ತಿದ್ದರು. ಗಂಡ ಹೆಂಡತಿ ಕೆಲಸಕ್ಕೆ ಹೋದರೆ ಮಕ್ಕಳನ್ನ ಅಪ್ಪ ಅಮ್ಮ ನೋಡ್ಕೊತಿದ್ರು. ಆದರೆ ಈಗ ಮನೆ ಅಂದ್ರೆ ಗಂಡ, ಹೆಂಡತಿ ಮತ್ತು ಮಗು ಎನ್ನುವ ಕಾಲವಿದು. ಗಂಡ ಹೆಂಡತಿ ಕೆಲಸಕ್ಕೆ ಹೋದ್ರೆ ಮಗುವನ್ನ ನೋಡಿಕೊಳ್ಳಲು ಆಳನ್ನು ನೇಮಿಸಬೇಕು. ಮಕ್ಕಳು ದೇವರಿದ್ದ ಹಾಗೆ ಕಾಳಜಿ ತೋರಿಸುವವರನ್ನು ಪ್ರೀತಿಸುತ್ತವೆ. ಕೆಲವರು ಕಾಳಜಿಯನ್ನು ಹಣ ಗಳಿಸುವ ಮಾರ್ಗ ಮಾಡಿಕೊಂಡು ದೇವರಿಗೆ ಮೋಸ ಮಾಡುತ್ತಾರೆ. ಅದಕ್ಕೆ ಈ ಚಿತ್ರದಲ್ಲಿ ನಾಯಕ ತಾನು ಕೆಲಸ ಬಿಟ್ಟು ಮನೆಯಲ್ಲೇ ಇರ‌್ತಾನೆ.

ಮನೆಯ ಎಲ್ಲ ಜವಾಬ್ದಾರಿ ನಾಯಕ ರೇಣು (ಉಪೇಂದ್ರ) ಹೆಗಲಿಗಿದ್ದು, ಮೇಲ್ನೋಟಕ್ಕೆ ಉಂಡಾಡಿ ಗುಂಡನ ಥರಾ ಕಾಣ್ತಾನೆ. ಅಕ್ಕ ಪಕ್ಕದ ಮನೆಯ ಗೃಹಿಣಿಯರೇ ಈತನ ಫ್ರೆಂಡ್ಸ್. ಸದಾ ಹೆಂಗಸರ ಜೊತೆಗಿದ್ದು ಅವರ ಮನೆಯ ಸಮಸ್ಯೆಗಳನ್ನು ಪರಿಹರಿಸುವ ಆಪತ್ಬಾಂಧವ. ಆದರೆ ಒಮ್ಮೆ ರೇಣುನೇ ಸಮಸ್ಯೆಯಲ್ಲಿ ಸಿಲುಕುತ್ತಾನೆ. ಆ ಸಮಸ್ಯೆ‌ ಕುಟುಂಬವನ್ನೇ ಬ್ರೇಕ್ ಮಾಡುತ್ತದೆ.

ಪ್ರತಿಭೆಗೆ ಪ್ರೋತ್ಸಾಹ ನೀಡುವ ನಾಯಕನ ಗುಣವೇ ಮುಳ್ಳಾಗಿ, ಚಿತ್ರದ ಕೊನೆಯಲ್ಲಿ ಮುಳ್ಳಿನ ಮಧ್ಯೆಯೂ ಅರಳುವ ಗುಲಾಬಿಯಂತೆ ಕಂಗೊಳಿಸುತ್ತಾನೆ. ವರ್ಕ್ ಫ್ರಂ ಹೋಮ್ ಅಂದ್ರೆ ಮನೆ  ಕೆಲಸ ಮಾಡ್ತಾ ಮಾಡ್ತಾನೇ ಮಕ್ಕಳ ಕೇರ್‌ಗೆ ಒಂದು ಆ್ಯಪ್ ಸಂಶೋಧಿಸುತ್ತಾನೆ. ಅದು ಹೇಗೆ ವರ್ಕ್ ಮಾಡುತ್ತದೆ ಅನ್ನೋದನ್ನ ಚಿತ್ರದಲ್ಲಿ ಸೂಕ್ಷ್ಮವಾಗಿ, ಸಂಕ್ಷಿಪ್ತವಾಗಿ ಹೇಳಲಾಗಿದೆ. ಇಡೀ ಚಿತ್ರದಲ್ಲಿ ಗಮನ ಸೆಳೆಯುವ ಅಂಶವೆಂದರೆ ಇದೊಂದೇ.

ಹೋಮ್ ಮಿನಿಸ್ಟರ್ ಅನ್ನೋದು ಸಿನಿಮಾದಲ್ಲಿ ಬರುವ ಟಿವಿಯ ರಿಯಾಲಿಟಿ ಷೋವೊಂದರ ಹೆಸರು. ರಿಯಾಲಿಟಿ ಷೋವನ್ನೇ ಚಿತ್ರಕ್ಕೆ ಕನೆಕ್ಟ್ ಮಾಡಿ, ಕ್ಲೈಮ್ಯಾಕ್ಸ್‌ನಲ್ಲಿ ಕಣ್ಣೀರು ಹಾಕಿಸುತ್ತಾರೆ ನಿರ್ದೇಶಕ ಸುಜಯ್.

ಆದರೆ ಚಿತ್ರದ ಕೆಲವು ಅಂಶಗಳು ಲಾಜಿಕ್ ಇಲ್ಲದೇ ಲಗಾಮಿಲ್ಲದ ಕುದುರೆಯಂತೆ ಓಡಿ ಬಿಡುತ್ತವೆ. ಕೆಲವೊಮ್ಮೆ ಏನೊ ಹೇಳಲು ಹೋಗಿ ಏನೇನೇನೋ ಹೇಳಿಬಿಡುತ್ತಾರೆ ಎಂಬ ಭಾವ ಕಾಡುತ್ತದೆ.

ಸುಜಯ್ ಕಥೆಯ ಆಯ್ಕೆಯಲ್ಲಿ ಗೆದ್ದಿದ್ದಾರೆ. ಅದನ್ನು ತೆರೆಗೆ ತರುವಲ್ಲಿ ಸೋತಿದ್ದಾರೆ ಎಂಬುದನ್ನು ಬೇಸರ ಮಾಡಿಕೊಳ್ಳದೇ ಒಪ್ಪಿಕೊಳ್ಳಬೇಕು. ಹಣ ಹಾಕಿದ ನಿರ್ಮಾಪಕ ಪೂರ್ಣಚಂದ್ರ ನಾಯ್ಡು ಹಾಗೂ ಶ್ರೀಕಾಂತ್ ಬಂಡವಾಳ ವಾಪಸ್ ತೆಗೆಯಲು ಮತ್ತೊಂದು ಉತ್ತಮ ಸಿನಿಮಾ ನಿರ್ಮಾಣಕ್ಕೆ ಅಣಿಯಾಗಬೇಕಷ್ಟೇ. ಕುಂಜುನ್ನಿ ಛಾಯಾಗ್ರಹಣ ಸಾಧಾರಣ ಬಜೆಟ್ ಸಿನಿಮಾ ಇದು ಎಂಬುದನ್ನು ಎತ್ತಿ ತೋರಿಸುತ್ತದೆ. ಜಿಬ್ರಾನ್ ಮ್ಯೂಜಿಕ್‌ನಲ್ಲಿ ಮ್ಯಾಜಿಕ್ ಇಲ್ಲ. ಗುರುಪ್ರಸಾದ್ ಮತ್ತು ಧರ್ಮೇಂದ್ರ ಚಿತ್ರಕ್ಕಾಗಿ ಮಾತುಗಳನ್ನು ಬರೆದಿದ್ದು, ಅಲ್ಲಲ್ಲಿ ಬರೆ ಎಳೆಯುತ್ತವೆ. ಕಣ್ಣೀರು ತರಿಸುತ್ತವೆ. ಡಿಫರೆಂಟ್ ಡ್ಯಾನಿ ಸ್ಟಂಟ್‌ನಲ್ಲಿ ಗಮನ ಸೆಳೆಯುವಂಥ ಎಲಿಮೆಂಟ್ಸ್ ಇಲ್ಲ.

ಒಟ್ಟಾರೆ ಹೋಮ್ ಮಿನಿಸ್ಟರ್ ಹೇಗಿದ್ದಾನೆಂದರೆ  ಕೊನೆಯ ಬಾಲ್‌ನಲ್ಲಿ ಬೌಂಡರಿ ಹೊಡೆದಂತೆ ಕಾಣಿಸುತ್ತಾನೆ. ಆ ಬೌಂಡರಿ ಬರುವವರೆಗೆ ನೋಡುಗನಿಗೆ ಸಖತ್ ಬೋರು. ಬೌಂಡರಿ ಹೊಡೆದಾಗ ಸೌಂಡು ಸಿಕ್ಕಾಪಟ್ಟೆ ಜೋರು.


Spread the love

LEAVE A REPLY

Please enter your comment!
Please enter your name here