ವಿಜಯಸಾಕ್ಷಿ ಸುದ್ದಿ, ಗದಗ: ಮಹಾತ್ಮ ಗಾಂಧಿ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ರಾಜ್ ವಿಶ್ವವಿದ್ಯಾಲಯದಲ್ಲಿ ನಡೆದ ವಿದ್ಯಾರ್ಥಿನಿ ಸಾವು ಪ್ರಕರಣದ ಸಮಗ್ರ ತನಿಖೆಗೆ ಗೃಹ ಇಲಾಖೆಗೆ ಪತ್ರ ಬರೆದು, ಖುದ್ದು ಭೇಟಿ ನೀಡಿ ಮನವಿ ಸಲ್ಲಿಸಲಾಗುವುದು ಎಂದು ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮಿ ಚೌಧರಿ ತಿಳಿಸಿದರು.
ಶನಿವಾರ ಜಿಲ್ಲಾಡಳಿತ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಕರಣದ ತನಿಖೆಯಲ್ಲಿ ಯಾವುದೇ ನಿರ್ಲಕ್ಷ್ಯ ಕಂಡುಬಂದರೆ ಸಂಬಂಧಪಟ್ಟವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸರ್ಕಾರವನ್ನು ಒತ್ತಾಯಿಸಲಾಗುವುದು ಎಂದರು.
ಮೃತ ವಿದ್ಯಾರ್ಥಿನಿಯ ಕುಟುಂಬವು ಕೊಲೆ ಆರೋಪ ಮಾಡಿದ್ದು, ವಸತಿ ನಿಲಯದ ಸಿಸಿ ಟಿವಿ ದೃಶ್ಯಾವಳಿಯ ಒಂದು ತಿಂಗಳ ಬ್ಯಾಕ್‌ಅಪ್ ಇಲ್ಲ ಎಂಬ ಮಾಹಿತಿ ಲಭ್ಯವಾಗಿದೆ. ದೂರು ದಾಖಲಿಸುವ ವೇಳೆ ಪೊಲೀಸರಿಂದ ಒತ್ತಡ ಹೇರಲಾಗಿದೆ ಎಂಬ ಆರೋಪವೂ ಕೇಳಿಬಂದಿದ್ದು, ಪೊಲೀಸ್ ಠಾಣೆಯ ಸಿಸಿ ಟಿವಿ ದೃಶ್ಯಾವಳಿಯನ್ನೂ ಪರಿಶೀಲಿಸಲಾಗುವುದು ಎಂದು ಹೇಳಿದರು.
ರೋಣ ತಾಲೂಕು ಆಸ್ಪತ್ರೆ ಹಾಗೂ ಗದಗಿನ ಕೆ.ಎಚ್. ಪಾಟೀಲ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ಗಂಡು ಮಕ್ಕಳ ಜನನ ಪ್ರಮಾಣ ಹೆಚ್ಚಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಹೆಣ್ಣು ಭ್ರೂಣ ಹತ್ಯೆ ತಡೆಯಲು ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ ಎಂದರು.
ರೋಣ ತಾಲೂಕು ಆಸ್ಪತ್ರೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಪರಿಹರಿಸಬೇಕು. ಮಹಿಳೆಯರ ಸಮಸ್ಯೆಗಳಿಗೆ ಸ್ಥಳೀಯ ಮಟ್ಟದಲ್ಲೇ ಸ್ಪಂದಿಸಲು ಮಹಿಳಾ ಗ್ರಾಮಸಭೆಗಳನ್ನು ನಿಯಮಿತವಾಗಿ ನಡೆಸಬೇಕು. ಜೊತೆಗೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಹಿಳೆಯರ ಅಹವಾಲು ಆಲಿಸಲು ತಿಂಗಳಿಗೆ ಒಂದು ದಿನ ಮೀಸಲಿಡುವಂತೆ ಸರ್ಕಾರದ ಗಮನ ಸೆಳೆಯಲಾಗುವುದು ಎಂದು ತಿಳಿಸಿದರು.
ಎರಡು ದಿನಗಳ ಜಿಲ್ಲಾ ಪ್ರವಾಸದಲ್ಲಿ ವಸತಿ ನಿಲಯಗಳು, ಆಸ್ಪತ್ರೆಗಳು, ಪೊಲೀಸ್ ಠಾಣೆ, ಮಕ್ಕಳ ದತ್ತು ಕೇಂದ್ರ, ಅಲೆಮಾರಿ ಸಮುದಾಯದ ನಿವಾಸಗಳು, ಕೃಷಿ ಕಾರ್ಮಿಕರು ಹಾಗೂ ಕುರಿಗಾಹಿಗಳನ್ನು ಭೇಟಿ ಮಾಡಿ ಸಮಸ್ಯೆಗಳನ್ನು ಆಲಿಸಲಾಗಿದೆ. ಅಲೆಮಾರಿ ಸಮುದಾಯಕ್ಕೆ ಕುಡಿಯುವ ನೀರು, ರಸ್ತೆ, ಶೌಚಾಲಯ ಹಾಗೂ ಗ್ರಂಥಾಲಯ ಸೇರಿದಂತೆ ಮೂಲಸೌಕರ್ಯಗಳನ್ನು ಕಲ್ಪಿಸುವ ಅಗತ್ಯವಿದೆ ಎಂದು ಹೇಳಿದರು.
ಅಹವಾಲು ಸ್ವೀಕಾರ ಸಭೆಯಲ್ಲಿ ಸಾವಿರಕ್ಕೂ ಹೆಚ್ಚು ಮಹಿಳೆಯರು ಭಾಗವಹಿಸಿದ್ದರು. ದೇವದಾಸಿಯರು, ಅಲೆಮಾರಿ ಸಮುದಾಯದವರು, ಲಿಂಗತ್ವ ಅಲ್ಪಸಂಖ್ಯಾತರು ಸೇರಿದಂತೆ ಹಲವರು ಉದ್ಯೋಗ, ಮನೆ, ಪಿಂಚಣಿ, ಮೂಲಸೌಕರ್ಯ ಹಾಗೂ ಕೌಟುಂಬಿಕ ಸಮಸ್ಯೆಗಳ ಕುರಿತು ಮನವಿ ಸಲ್ಲಿಸಿದ್ದಾರೆ. ಮನೆ ಸೌಲಭ್ಯಕ್ಕಾಗಿ ಬಂದ 66 ಅರ್ಜಿಗಳನ್ನು ವಿವಿಧ ವಸತಿ ಯೋಜನೆಗಳಲ್ಲಿ ಆದ್ಯತೆಯ ಮೇರೆಗೆ ಪರಿಗಣಿಸಿ ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಹಾಗೂ ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಕಾರ್ಯದರ್ಶಿ ರೂಪಾ ಉಪಸ್ಥಿತರಿದ್ದರು.
“ವಿದ್ಯಾರ್ಥಿನಿ ಸಾವು ಪ್ರಕರಣದ ಸಮಗ್ರ ತನಿಖೆಗೆ ಗೃಹ ಇಲಾಖೆಗೆ ಪತ್ರ ಬರೆಯುತ್ತೇನೆ. ಮಹಿಳೆಯರ ಸಮಸ್ಯೆಗಳಿಗೆ ತ್ವರಿತ ಸ್ಪಂದನೆ ಸಿಗುವಂತೆ ಮಹಿಳಾ ಗ್ರಾಮಸಭೆಗಳನ್ನು ನಿಯಮಿತವಾಗಿ ನಡೆಸಬೇಕು.”
ಡಾ. ನಾಗಲಕ್ಷ್ಮಿ ಚೌಧರಿ, ಅಧ್ಯಕ್ಷೆ, ಕರ್ನಾಟಕ ರಾಜ್ಯ ಮಹಿಳಾ ಆಯೋಗ



