ಮಂಡ್ಯ: ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆಯ ಅಬ್ಬರ ಹೆಚ್ಚಾಗಿದ್ದು, ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೃಷ್ಣರಾಜಸಾಗರ ಜಲಾಶಯಕ್ಕೆ ಭಾರೀ ಪ್ರಮಾಣದಲ್ಲಿ ನೀರು ಹರಿದುಬರುತ್ತಿದೆ.
ಇದರಿಂದ ಡ್ಯಾಂ ನೀರಿನ ಮಟ್ಟ ವೇಗವಾಗಿ ಏರಿಕೆಯಾಗುತ್ತಿದ್ದು, ಶೀಘ್ರದಲ್ಲೇ 100 ಅಡಿ ತಲುಪುವ ನಿರೀಕ್ಷೆ ಮೂಡಿದೆ.
ಕಳೆದ ಎರಡು ದಿನಗಳ ಹಿಂದೆ ಕೆಆರ್ಎಸ್ ಜಲಾಶಯದ ನೀರಿನ ಮಟ್ಟ 92 ಅಡಿಯಷ್ಟಿತ್ತು. ಇದೀಗ ಭಾರೀ ಒಳಹರಿವಿನಿಂದಾಗಿ ನೀರಿನ ಮಟ್ಟ 97 ಅಡಿಗೆ ಏರಿಕೆಯಾಗಿದೆ. ಜಲಾಶಯದಲ್ಲಿದ್ದ ನೀರಿನ ಸಂಗ್ರಹ ಪ್ರಮಾಣವೂ ಹೆಚ್ಚಾಗಿದ್ದು, ಮೊದಲು 17 ಟಿಎಂಸಿ ಇದ್ದ ನೀರು ಇದೀಗ 20.477 ಟಿಎಂಸಿಗೆ ಏರಿಕೆಯಾಗಿದೆ.
ಕಾವೇರಿ ಜಲಾನಯನ ಪ್ರದೇಶದಲ್ಲಿ ಇದೇ ರೀತಿ ಮಳೆ ಮುಂದುವರಿದರೆ, ಕೆಲವೇ ದಿನಗಳಲ್ಲಿ ಕೆಆರ್ಎಸ್ ಜಲಾಶಯ ಸಂಪೂರ್ಣ ಭರ್ತಿಯಾಗುವ ಸಾಧ್ಯತೆ ಇದೆ. ಇದರಿಂದ ಕಾವೇರಿ ನೀರಿನ ಹಂಚಿಕೆ ವಿಚಾರವಾಗಿ ನಡೆಯುತ್ತಿದ್ದ ಹೋರಾಟಗಳ ನಡುವೆಯೇ ಪ್ರಕೃತಿಯೇ ತಾತ್ಕಾಲಿಕ ನೆಮ್ಮದಿ ನೀಡಿದಂತಾಗಿದೆ.
ಇನ್ನೊಂದೆಡೆ, ಕಬಿನಿ ಜಲಾಶಯ ಈಗಾಗಲೇ ಸಂಪೂರ್ಣ ಭರ್ತಿಯಾಗಿದ್ದು, ಹೆಚ್ಚುವರಿ ನೀರನ್ನು ನದಿಗೆ ಹರಿಸಲಾಗುತ್ತಿದೆ. ಇದರ ಪರಿಣಾಮ ಕಾವೇರಿ ನದಿಯಲ್ಲಿ ನೀರಿನ ಹರಿವು ಹೆಚ್ಚಾಗಿದ್ದು, ತಮಿಳುನಾಡಿಗೂ ನೀರು ಹರಿದುಹೋಗುತ್ತಿದೆ.
ಜಲಾಶಯಗಳು ತುಂಬುತ್ತಿರುವ ಹಿನ್ನೆಲೆಯಲ್ಲಿ ರೈತರು ಹಾಗೂ ಕಾವೇರಿ ನದಿ ಪಾತ್ರದ ಜನರಲ್ಲಿ ಸಂತಸ ಮೂಡಿದೆ. ಉತ್ತಮ ಮಳೆಯಿಂದಾಗಿ ಈ ಬಾರಿ ನೀರಿನ ಸಮಸ್ಯೆ ಕಡಿಮೆಯಾಗುವ ನಿರೀಕ್ಷೆ ರೈತರಲ್ಲಿ ಮೂಡಿದೆ.



