HomeKarnataka Newsರಸ್ತೆ ಅಪಘಾತದಲ್ಲಿ ಮಹಿಳೆ ಸಾವು ಪ್ರಕರಣ; ₹40 ಲಕ್ಷ ಪರಿಹಾರ ನೀಡುವಂತೆ ಬಿಎಂಟಿಸಿಗೆ ಹೈಕೋರ್ಟ್ ಆದೇಶ

ರಸ್ತೆ ಅಪಘಾತದಲ್ಲಿ ಮಹಿಳೆ ಸಾವು ಪ್ರಕರಣ; ₹40 ಲಕ್ಷ ಪರಿಹಾರ ನೀಡುವಂತೆ ಬಿಎಂಟಿಸಿಗೆ ಹೈಕೋರ್ಟ್ ಆದೇಶ

For Dai;y Updates Join Our whatsapp Group

ಬೆಂಗಳೂರು: ರಸ್ತೆ ಅಪಘಾತದಲ್ಲಿ ಮೃತಪಟ್ಟ ಮಹಿಳೆಯ ಕುಟುಂಬಕ್ಕೆ ನೀಡಲಾಗಿದ್ದ ಪರಿಹಾರದ ಮೊತ್ತವನ್ನು ಕರ್ನಾಟಕ ಹೈಕೋರ್ಟ್‌ ಗಣನೀಯವಾಗಿ ಹೆಚ್ಚಿಸಿದೆ. ವಿಚಾರಣಾ ನ್ಯಾಯಾಲಯ ಘೋಷಿಸಿದ್ದ ₹13.30 ಲಕ್ಷ ಪರಿಹಾರವನ್ನು ಮಾರ್ಪಡಿಸಿದ ಹೈಕೋರ್ಟ್‌, ಮೃತರ ಕುಟುಂಬಕ್ಕೆ ಒಟ್ಟು ₹40.54 ಲಕ್ಷ ಪರಿಹಾರ ನೀಡುವಂತೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ)ಗೆ ಆದೇಶಿಸಿದೆ.

ಮೃತ ಶಕಿಲಾ ಬಿ. ಶೆಟ್ಟಿ ಅವರ ಪತಿ ಭಾಸ್ಕರ್ ಎನ್. ಶೆಟ್ಟಿ ಹಾಗೂ ಮಕ್ಕಳು ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜಯಂತ್ ಬ್ಯಾನರ್ಜಿ ಮತ್ತು ನ್ಯಾಯಮೂರ್ತಿ ತಾರಾ ವಿತಸ್ತಾ ಗಂಜು ಅವರಿದ್ದ ವಿಭಾಗೀಯ ಪೀಠ ಈ ಮಹತ್ವದ ತೀರ್ಪು ನೀಡಿದೆ.

ಹೈಕೋರ್ಟ್ ಆದೇಶದಂತೆ, ಮೇಲ್ಮನವಿ ಸಲ್ಲಿಸಲು ಅರ್ಜಿದಾರರು ವಿಳಂಬ ಮಾಡಿದ 217 ದಿನಗಳ ಅವಧಿಗೆ ಬಡ್ಡಿ ಅನ್ವಯಿಸುವುದಿಲ್ಲ. ಉಳಿದ ಅವಧಿಗೆ ಅರ್ಜಿ ಸಲ್ಲಿಸಿದ ದಿನಾಂಕದಿಂದ ವಾರ್ಷಿಕ ಶೇ.9ರ ಬಡ್ಡಿದರದಲ್ಲಿ ಎಂಟು ವಾರಗಳೊಳಗೆ ಪರಿಹಾರದ ಬಾಕಿ ಮೊತ್ತವನ್ನು ಪಾವತಿಸುವಂತೆ ಬಿಎಂಟಿಸಿಗೆ ನಿರ್ದೇಶಿಸಲಾಗಿದೆ.

ಆದಾಯ ತೆರಿಗೆ ದಾಖಲೆ ಪರಿಗಣಿಸದ ನ್ಯಾಯಮಂಡಳಿ

ಮೃತರು ಸ್ವಯಂ ಉದ್ಯೋಗಿಯಾಗಿದ್ದು, ಟ್ಯೂಷನ್ ತರಗತಿಗಳನ್ನು ನಡೆಸುತ್ತಿದ್ದರು. ಅವರ ಆದಾಯ ತೆರಿಗೆ ರಿಟರ್ನ್ಸ್ ದಾಖಲೆಗಳನ್ನು ವಿಚಾರಣಾ ನ್ಯಾಯಾಲಯ ಪರಿಗಣಿಸದೇ, ಕೇವಲ ತಿಂಗಳಿಗೆ ₹9 ಸಾವಿರ ಆದಾಯವೆಂದು ನಿಗದಿಪಡಿಸಿ ₹13.30 ಲಕ್ಷ ಪರಿಹಾರ ಘೋಷಿಸಿತ್ತು.

ಆದರೆ, ಸುಪ್ರೀಂ ಕೋರ್ಟ್‌ನ ತೀರ್ಪುಗಳ ಪ್ರಕಾರ ಆದಾಯ ತೆರಿಗೆ ದಾಖಲೆಗಳು ಶಾಸನಬದ್ಧ ದಾಖಲೆಗಳಾಗಿದ್ದು, ವಾರ್ಷಿಕ ಆದಾಯ ನಿರ್ಧಾರಕ್ಕೆ ಅವುಗಳನ್ನು ಕಡ್ಡಾಯವಾಗಿ ಪರಿಗಣಿಸಬೇಕು ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ. ಕಳೆದ ಮೂರು ವರ್ಷಗಳ ಆದಾಯ ತೆರಿಗೆ ದಾಖಲೆಗಳ ಆಧಾರದ ಮೇಲೆ ಮೃತರ ವಾರ್ಷಿಕ ಸರಾಸರಿ ಆದಾಯ ₹3.33 ಲಕ್ಷ ಎಂದು ಪರಿಗಣಿಸಿ ಹೊಸದಾಗಿ ಪರಿಹಾರ ಲೆಕ್ಕ ಹಾಕಲಾಗಿದೆ.

ಪರಿಹಾರದ ವಿವರ

ಹೈಕೋರ್ಟ್ ಘೋಷಿಸಿರುವ ಪರಿಹಾರದ ವಿವರ ಹೀಗಿದೆ:

  • ಅವಲಂಬನೆ ನಷ್ಟ – ₹38,89,200
  • ಪತಿ ಮತ್ತು ಮಕ್ಕಳಿಗೆ ಸಾಂತ್ವನ ಪರಿಹಾರ – ₹1,32,000
  • ಆಸ್ತಿ (Estate) ನಷ್ಟ – ₹16,500
  • ಅಂತ್ಯಕ್ರಿಯೆ ವೆಚ್ಚ – ₹16,500

ಒಟ್ಟು ಪರಿಹಾರ: ₹40,54,200

ಪ್ರಕರಣದ ಹಿನ್ನೆಲೆ

2017ರ ಜುಲೈ 1ರಂದು ಮಧ್ಯಾಹ್ನ ಶಕಿಲಾ ಬಿ. ಶೆಟ್ಟಿ ಅವರು ತಮ್ಮ ಸಹೋದರನೊಂದಿಗೆ ದ್ವಿಚಕ್ರ ವಾಹನದಲ್ಲಿ ಪ್ರಯಾಣಿಸುತ್ತಿದ್ದ ವೇಳೆ, ಅತಿವೇಗ ಮತ್ತು ನಿರ್ಲಕ್ಷ್ಯದಿಂದ ಬಂದ ಬಿಎಂಟಿಸಿ ಬಸ್ ಹಿಂದಿನಿಂದ ಡಿಕ್ಕಿ ಹೊಡೆದಿತ್ತು. ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು.

ಈ ಹಿನ್ನೆಲೆಯಲ್ಲಿ ಮೃತರ ಪತಿ ಹಾಗೂ ಇಬ್ಬರು ಅಪ್ರಾಪ್ತ ಮಕ್ಕಳು ಮೋಟಾರು ವಾಹನಗಳ ಕಾಯ್ದೆ-1988ರ ಸೆಕ್ಷನ್ 166ರಡಿ ಪರಿಹಾರ ಕೋರಿ ಮೋಟಾರು ಅಪಘಾತಗಳ ಪರಿಹಾರ ನ್ಯಾಯಮಂಡಳಿಯನ್ನು ಸಂಪರ್ಕಿಸಿದ್ದರು. ನ್ಯಾಯಮಂಡಳಿ ಘೋಷಿಸಿದ್ದ ಪರಿಹಾರ ಅಲ್ಪವಾಗಿದೆ ಎಂದು ವಾದಿಸಿ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲಾಗಿತ್ತು.

ಹೈಕೋರ್ಟ್ ಇದೀಗ ಆದಾಯ ತೆರಿಗೆ ದಾಖಲೆಗಳಿಗೆ ಮಹತ್ವ ನೀಡಿ ಪರಿಹಾರದ ಮೊತ್ತವನ್ನು ಮೂರು ಪಟ್ಟು ಹೆಚ್ಚಿಸಿರುವುದು, ರಸ್ತೆ ಅಪಘಾತ ಪರಿಹಾರ ಪ್ರಕರಣಗಳಲ್ಲಿ ಮಹತ್ವದ ತೀರ್ಪಾಗಿ ಪರಿಗಣಿಸಲಾಗುತ್ತಿದೆ.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img