ವಿಜಯಸಾಕ್ಷಿ ಸುದ್ದಿ, ಗದಗ:
ಪತಿ ಕಿರುಕುಳ, ದೌರ್ಜನ್ಯ ನೀಡುತ್ತಿದ್ದಾನೆಂಬ ಪತ್ನಿಯ ಮೌಖಿಕ ದೂರಿನ ಮೇಲೆ ಗಂಡನನ್ನು ವಿಚಾರಣೆಗೆಂದು ಠಾಣೆಗೆ ಕರೆಯಿಸಿ ಪೊಲೀಸರು ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ಗದಗನಲ್ಲಿ ನಡೆದಿದೆ. ಇದರಿಂದಾಗಿ ಗದಗ ಪೊಲೀಸರ ಮತ್ತೊಂದು ಅಮಾನವೀಯ ಕೃತ್ಯ ಬೆಳಕಿಗೆ ಬಂದಂತಾಗಿದೆ.

ದಾವಲಸಾಬ್ ಕುಮನೂರು ಎಂಬ ವ್ಯಕ್ತಿಯನ್ನು ಮಹಿಳಾ ಠಾಣೆಯ ಪಿಎಸ್ಐ ನೂರಾಜಾನ್ ಸಬರ್ ಸಮ್ಮುಖದಲ್ಲಿ ನಾಲ್ವರ ಪೊಲೀಸರು ಥಳಿಸಿದ್ದಾರೆ. ಮಹಿಳಾ ಠಾಣೆಯ ಪೊಲೀಸರು ಥಳಿಸಿದ್ದರ ಪರಿಣಾಮ ಜಿಮ್ಸ್ ಆಸ್ಪತ್ರೆಯಲ್ಲಿ ಗಾಯಗೊಂಡಿರುವ ದಾವಲಸಾಬ್ ಚಿಕಿತ್ಸೆ ಪಡೆಯುತ್ತಿದ್ದಾನೆ.
ಪೊಲೀಸರ ಲಾಟಿ ಹಾಗೂ ಬೂಟೇಟಿನಿಂದ ದಾವಲಸಾಬ್ ಮೈ ಮೇಲೆ ಬಾಸುಂಡೆ ಬಂದಿವೆ. ದಾವಲಸಾಬ್ ಗೆ ಪೊಲೀಸರು ಹೊಡೆದಿರುವ ಪರಿಣಾಮ ಕುಂತರೆ ಕುಳಿತುಕೊಳ್ಳಲಾಗುವುದಿಲ್ಲ. ನಿಂತರೆ ನಿಲ್ಲಲು ಬರದ ಹಾಗೆ ಹೊಡೆದಿದ್ದು, ಜಿಮ್ಸ್ ಆಸ್ಪತ್ರೆಯಲ್ಲಿ ಹಾಸಿಗೆ ಹಿಡಿದಿದ್ದಾನೆ. ಪೊಲೀಸರು ವಿಚಾರಣೆಯ ನೆಪದಲ್ಲಿ ಮಾನವೀಯತೆಯ ಮರೆತು ಮೃಗಗಳಂತೆ ವರ್ತಿಸಿದ್ದಾರೆ. ಅಲ್ಲದೆ, ದಾವಲಸಾಬ್ ಬಳಿ ಇದ್ದ ಹಣವನ್ನು ಕಸಿದುಕೊಂಡು ಕಳುಹಿಸಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದು, ಪೊಲೀಸರ ದಬ್ಬಾಳಿಕೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ನ್ಯಾಯ ಒದಗಿಸಿ ಕೊಡುವಂತೆ ಇಲಾಖೆಯ ಹಿರಿಯ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.

ಐದು ತಿಂಗಳಲ್ಲಿ ನಾಲ್ಕೈದು ಬಾರಿ ಪೊಲೀಸ್ ಠಾಣೆ ಮೆಟ್ಟಿಲೇರಿಸಿದ್ದಾಳೆ. ಸಂತೆಗೆ ಹೋದ ಮಗನನ್ನು ಕರೆಯಿಸಿ ನಮಗೆ ಗೊತ್ತಿರದ ಹಾಗೆ ಪೊಲೀಸರು ಬಡಿದಿದ್ದಾರೆ. ಸಮಯವಾದರೂ ಮನೆಗೆ ಬರದ ಮಗನ ಪೋನ್ ಗೆ ಕರೆ ಮಾಡಿದರೆ ರಿಸೀವ್ ಮಾಡಿಲ್ಲ. ಸಂಜೆ ಆರು ಗಂಟೆಗೆ ಮಗ ಫೋನ್ ಮಾಡಿ ಪೊಲೀಸರ ಹೊಡೆದ ವಿಚಾರ ತಿಳಿಸಿದ್ದಾನೆ. ಪೊಲೀಸರಿಗೆ ದುಡ್ಡು ಕೊಟ್ಟು ಹೊಡೆಸಿದ್ದಾರೆ. ಹೊಡೆದದ್ದಕ್ಕೆ ದೇಹದ ತುಂಬೆಲ್ಲಾ ಗಾಯಗಳಾಗಿವೆ. ಠಾಣೆಗೆ ಕರೆದು ಈ ರೀತಿಯಾಗಿ ಹೊಡೆದು ಏನಾದರೂ ಆಗಿ ಸತ್ತರೆ ಯಾರನ್ನು ಕೇಳಬೇಕು ಎಂದು ದಾವಲಸಾಬ್ ನ ತಾಯಿ ಕಣ್ಣೀರು ಹಾಕುತ್ತಿದ್ದಾರೆ.
ಏನಿದು ಪ್ರಕರಣ?
ದಾವಲಸಾಬ್ ಇಬ್ಬರನ್ನು ಮದುವೆಯಾಗಿದ್ದ. ಇಬ್ಬರು ಹೆಂಡತಿಯರನ್ನು ಪ್ರತ್ಯೇಕವಾಗಿ ಇರಿಸಿದ್ದ. ಆದರೆ, ಮೊದಲ ಹೆಂಡತಿ ಬಸೀರಾಬೇಗಂ ಪತಿ ದಾವಲಸಾಬ್ ನನಗೆ ಕಿರುಕುಳ, ನನ್ನ ಮೇಲೆ ದೌರ್ಜನ್ಯ ನೀಡುತ್ತಿದ್ದಾನೆಂದು ಗದಗನ ಮಹಿಳಾ ಪೊಲೀಸ್ ಠಾಣೆಯಲ್ಲಿ ಮೌಖಿಕ ದೂರು ನೀಡಿದ್ದಳು. ಮೌಖಿಕ ದೂರನ್ನೇ ಬಂಡವಾಳ ಮಾಡಿಕೊಂಡ ಮಹಿಳಾ ಠಾಣೆಯ ಪೊಲೀಸರು ವಿಚಾರಣೆಗೆ ಬಸೀರಾಬೇಗಂಳ ಗಂಡ ದಾವಲಸಾಬ್ ನನ್ನು ಠಾಣೆಗೆ ಕರಿಸಿ ವಿಚಾರಣೆಯ ನೆಪದಲ್ಲಿ ಥಳಿಸಿದ್ದಾರೆ. ಓರ್ವ ಮಹಿಳಾ ಪೊಲೀಸ್ ಹಾಗೂ ಮೂರು ಜನ ಪುರಷ ಪೊಲೀಸರು ಹಿಗ್ಗಾಮುಗ್ಗಾ ಹೊಡೆದಿದ್ದಾರೆ. ಥಳಿಸಿದ್ದಲ್ಲದೆ, ಮಹಿಳಾ ಠಾಣೆಯ ಪಿಎಸ್ಐ ನೂರಾಜಾನ್ 20 ಸಾವಿರ ರೂ.ಗೆ ಬೇಡಿಕೆ ಇಟ್ಟಿದ್ದಾರೆ. ಆಗ ದಾವಲಸಾಬ್ ನನ್ನ ಬಳಿ ಹಣವಿಲ್ಲ ಎಂದಿದ್ದಕ್ಕೆ ಕಿರಾಣಿ ಸಾಮಾನು ತರಲು ಇಟ್ಟುಕೊಂಡಿದ್ದ 40 ಸಾವಿರ ರೂ.ನಲ್ಲೇ ಐದು ಸಾವಿರ ರೂಪಾಯಿ ಕಿತ್ತುಕೊಂಡಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸುತ್ತಿದ್ದಾರೆ.

ಒಟ್ಟಿನಲ್ಲಿ ಗದಗ ನಗರದ ಹುಡ್ಕೋ ಕಾಲನಿಯ ನಿವಾಸಿ ದಿ.ಸಂತೋಷ ಕರ್ಕಿಕಟ್ಟಿ ಪ್ರಕರಣ ಮಾಸುವ ಮುನ್ನವೇ ಮತ್ತೊಂದು ಪ್ರಕರಣ ಬಯಲಿಗೆ ಬಂದಿದ್ದು, ಗದಗ ಪೊಲೀಸರ ದಬ್ಬಾಳಿಕೆಗೆ ಮತ್ತೊಂದು ಪ್ರಕರಣ ಸೇರ್ಪಡೆಯಾದಂತಾಗಿದೆ.