ಚಿಕ್ಕಮಗಳೂರು: ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯಲ್ಲಿ ಅಕ್ರಮವಾಗಿ ನೆಲೆಸಿದ್ದಾರೆ ಎನ್ನಲಾದ ಐವರು ಬಾಂಗ್ಲಾದೇಶಿ ಪ್ರಜೆಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಕಾಫಿ ತೋಟಗಳು, ಹೋಂಸ್ಟೇ ಹಾಗೂ ರೆಸಾರ್ಟ್ಗಳಲ್ಲಿ ಅಕ್ರಮ ನಿವಾಸಿಗಳಿರುವ ಆರೋಪಗಳ ನಡುವೆ ಈ ಬೆಳವಣಿಗೆ ಚರ್ಚೆಗೆ ಕಾರಣವಾಗಿದೆ.
ಕೇಂದ್ರ ಗುಪ್ತಚರ ಇಲಾಖೆಯಿಂದ ಬಂದ ಮಾಹಿತಿಯ ಆಧಾರದ ಮೇಲೆ ಪೊಲೀಸರು ನಡೆಸಿದ ತಪಾಸಣೆ ವೇಳೆ ಐವರು ಪತ್ತೆಯಾಗಿದ್ದಾರೆ. ಅವರ ಬಳಿ ಬಾಂಗ್ಲಾದೇಶದ ಗುರುತಿನ ಚೀಟಿಗಳು ಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಳೆದ ಎರಡು ತಿಂಗಳಿಂದ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಹೊರ ಜಿಲ್ಲೆ ಹಾಗೂ ಹೊರ ರಾಜ್ಯಗಳಿಂದ ಬಂದಿರುವ ಕಾರ್ಮಿಕರ ಮಾಹಿತಿ ಸಂಗ್ರಹಿಸುವ ಕಾರ್ಯ ನಡೆಯುತ್ತಿತ್ತು. ಈ ವೇಳೆ ನಡೆಸಿದ ಪರಿಶೀಲನೆಯಲ್ಲಿ ಐವರು ಕಾಫಿ ಎಸ್ಟೇಟ್ಗಳು ಸೇರಿದಂತೆ ವಿವಿಧೆಡೆ ದಿನಗೂಲಿ ಕೆಲಸ ಮಾಡುತ್ತಿರುವುದು ಪತ್ತೆಯಾಗಿದೆ.
ಬಂಧಿತರನ್ನು ಜಹಾಂಗೀರ್, ಫೈಸುದ್ದಿನ್, ನುಮನ್ ಬಶೀರ್, ಮಹಮದ್ ಹುಮೈನ್ ಹಾಗೂ ಮಹಮದ್ ಹಸೀಬುಲ್ ಎಂದು ಗುರುತಿಸಲಾಗಿದೆ. ಪ್ರಾಥಮಿಕ ವಿಚಾರಣೆಯಲ್ಲಿ ಕೆಲವರು ಒಂಟಿಯಾಗಿ ಹಾಗೂ ಕೆಲವರು ಕುಟುಂಬ ಸಮೇತರಾಗಿ ಚಿಕ್ಕಮಗಳೂರಿಗೆ ಬಂದಿರುವುದು ತಿಳಿದುಬಂದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಯಾರು ಕರೆತಂದರು? ಪೊಲೀಸರಿಂದ ತನಿಖೆ:
ಬಂಧಿತರು ಚಿಕ್ಕಮಗಳೂರಿಗೆ ಹೇಗೆ ಬಂದರು, ಅವರನ್ನು ಯಾರು ಕರೆತಂದರು, ಅವರ ಏಜೆಂಟ್ ಯಾರು ಹಾಗೂ ಸ್ಥಳೀಯ ಸಂಪರ್ಕ ಹೇಗೆ ಬೆಳೆದಿದೆ ಎಂಬುದರ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಹೆಚ್ಚಿನ ಮಾಹಿತಿ ಸಂಗ್ರಹಿಸಲು ವಿಚಾರಣೆ ಮುಂದುವರಿದಿದೆ.
ಇನ್ನು ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಕಾರ್ಮಿಕರ ದಾಖಲೆಗಳು ಹಾಗೂ ಫೋಟೋಗಳನ್ನು ಸಂಗ್ರಹಿಸುವ ಕಾರ್ಯ ನಡೆಯುತ್ತಿದ್ದು, ಅಕ್ರಮ ವಲಸಿಗರ ಪತ್ತೆ ಕಾರ್ಯ ಮುಂದುವರಿದಿದೆ.
ಈ ನಡುವೆ, ಮಲೆನಾಡು ಭಾಗದಲ್ಲಿ ಸಾವಿರಾರು ಅಕ್ರಮ ಬಾಂಗ್ಲಾದೇಶಿ ನಿವಾಸಿಗಳಿದ್ದಾರೆ ಎಂದು ಬಿಜೆಪಿ ಹಾಗೂ ಕೆಲವು ಹಿಂದೂಪರ ಸಂಘಟನೆಗಳು ಈ ಹಿಂದೆ ಆರೋಪಿಸಿದ್ದವು. ಇದೀಗ ಐವರು ಪತ್ತೆಯಾಗಿರುವ ಹಿನ್ನೆಲೆಯಲ್ಲಿ, ಇನ್ನಷ್ಟು ಮಂದಿ ಇದ್ದಾರೆಯೇ ಎಂಬ ಬಗ್ಗೆ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.



