ದಾವಣಗೆರೆ: ಪ್ರಿಯತಮೆಯ ಕತ್ತು ಸೀಳಿ ಹತ್ಯೆಗೈದ ಘಟನೆ ದಾವಣಗೆರೆಯ ಶೇಖರಪ್ಪ ನಗರದಲ್ಲಿ ನಡೆದಿದೆ. 45 ವರ್ಷದ ನಾಗರತ್ನ ಕೊಲೆಯಾದ ಮಹಿಳೆಯಾಗಿದ್ದು, 36 ವರ್ಷದ ನಾಗರಾಜ್ ಕೊಲೆ ಆರೋಪಿಯಾಗಿದ್ದಾನೆ.
ನಾಗರಾಜ್ ಹಲವು ವರ್ಷಗಳಿಂದ ನಾಗರತ್ನ ಅವರೊಂದಿಗೆ ಸಂಬಂಧ ಹೊಂದಿದ್ದ ಎನ್ನಲಾಗಿದೆ. ಇಬ್ಬರ ನಡುವೆ ಕೆಲ ದಿನಗಳಿಂದ ಪದೇಪದೇ ಜಗಳ ನಡೆಯುತ್ತಿತ್ತು ಎಂದು ಸ್ಥಳೀಯರು ತಿಳಿಸಿದ್ದಾರೆ.
ನಾಗರತ್ನ ಅವರು ಪತಿಯನ್ನು ತ್ಯಜಿಸಿ ತಮ್ಮ ಮೂವರು ಮಕ್ಕಳನ್ನು ಬೇರೆಡೆ ಮನೆ ಮಾಡಿಕೊಟ್ಟು, ತಾವು ಒಂಟಿಯಾಗಿ ವಾಸಿಸುತ್ತಿದ್ದರು ಎನ್ನಲಾಗಿದೆ. ಕಲ್ಯಾಣ ಮಂಟಪವೊಂದರಲ್ಲಿ ಕೆಲಸ ಮಾಡುತ್ತಿದ್ದ ನಾಗರತ್ನ ಅವರಿಗೆ ನಾಗರಾಜ್ ಪರಿಚಯವಾಗಿದ್ದು, ಬಳಿಕ ಇಬ್ಬರ ನಡುವೆ ಸಂಬಂಧ ಬೆಳೆದಿತ್ತು ಎಂದು ತಿಳಿದುಬಂದಿದೆ.
ಇಬ್ಬರ ನಡುವಿನ ಜಗಳದಿಂದಾಗಿ ಸುತ್ತಮುತ್ತಲಿನ ನಿವಾಸಿಗಳು ನಾಗರತ್ನ ಅವರಿಗೆ ಮನೆ ಖಾಲಿ ಮಾಡಿಕೊಂಡು ಬೇರೆಡೆ ತೆರಳುವಂತೆ ಸೂಚಿಸಿದ್ದರು ಎನ್ನಲಾಗಿದೆ. ಆದರೆ ಅವರು ಅಲ್ಲಿಯೇ ವಾಸವಾಗಿದ್ದರು.
ಸೆಪ್ಟೆಂಬರ್ 19ರಂದು ಬೆಳಗ್ಗೆ ಸುಮಾರು 10.30ರ ವೇಳೆಗೆ ನಾಗರಾಜ್, ನಾಗರತ್ನ ಅವರ ಮನೆಗೆ ತೆರಳಿ ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ ಎಂದು ಆರೋಪಿಸಲಾಗಿದೆ. ಗಂಭೀರವಾಗಿ ಗಾಯಗೊಂಡ ನಾಗರತ್ನ ಅವರ ಕಿರುಚಾಟ ಕೇಳಿ ಸ್ಥಳೀಯರು ಅಲ್ಲಿಗೆ ಧಾವಿಸಿದ್ದಾರೆ.
ಈ ವೇಳೆ ಆರೋಪಿ ನಾಗರಾಜ್ ಪರಾರಿಯಾಗಲು ಯತ್ನಿಸಿದ್ದಾನೆ ಎನ್ನಲಾಗಿದ್ದು, ಸ್ಥಳೀಯರು ಆತನನ್ನು ಹಿಡಿದು ತೆಂಗಿನ ಮರಕ್ಕೆ ಕಟ್ಟಿ ಹಾಕಿದ್ದಾರೆ. ಬಳಿಕ ಆತನನ್ನು ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ.
ಘಟನೆಗೆ ನಿಖರ ಕಾರಣವೇನು ಎಂಬುದು ಇನ್ನೂ ತಿಳಿದುಬಂದಿಲ್ಲ. ಮಾಹಿತಿ ತಿಳಿದು ಸ್ಥಳಕ್ಕೆ ಆರ್‌ಎಂಸಿ ಯಾರ್ಡ್ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಕೊಲೆಗೆ ಕಾರಣ ಹಾಗೂ ಘಟನೆಯ ಸಂಪೂರ್ಣ ಹಿನ್ನೆಲೆಯ ಕುರಿತು ತನಿಖೆ ಮುಂದುವರಿಸಿದ್ದಾರೆ.



