ನವದೆಹಲಿ: ದೇಶದಲ್ಲಿ ವಿಮೆ ಇಲ್ಲದೆ ಸಂಚರಿಸುವ ವಾಹನಗಳ ಸಂಖ್ಯೆಯನ್ನು ಗಂಭೀರವಾಗಿ ಪರಿಗಣಿಸಿರುವ ಸುಪ್ರೀಂ ಕೋರ್ಟ್ ಮಹತ್ವದ ಕ್ರಮಕ್ಕೆ ಮುಂದಾಗಿದೆ.
ಮಾನ್ಯ ವಿಮೆ ಇಲ್ಲದ ವಾಹನಗಳಿಗೆ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ನೀಡದಿರುವ ಕುರಿತು ಪ್ರಾಯೋಗಿಕ ಯೋಜನೆ ರೂಪಿಸುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿದೆ.
ಭಾರತೀಯ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ ಹಾಗೂ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯಕ್ಕೆ ಪೈಲಟ್ ಯೋಜನೆ ಸಿದ್ಧಪಡಿಸುವಂತೆ ಸುಪ್ರೀಂ ಕೋರ್ಟ್ ಸೂಚಿಸಿದೆ. ಈ ಯೋಜನೆಯಡಿ ಪೆಟ್ರೋಲ್ ಅಥವಾ ಡೀಸೆಲ್ ತುಂಬಿಸುವ ಮೊದಲು ವಾಹನದ ವಿಮೆ ಮಾನ್ಯವಾಗಿದೆಯೇ ಎಂಬುದನ್ನು ಪರಿಶೀಲಿಸುವ ವ್ಯವಸ್ಥೆ ಜಾರಿಗೆ ಬರಬಹುದು.
ಮಾನ್ಯ ವಿಮೆ ಇಲ್ಲದ ವಾಹನಗಳಿಗೆ ಅಗತ್ಯ ವಿಮೆ ಮಾಡಿಸಿಕೊಳ್ಳುವವರೆಗೆ ಇಂಧನ ನಿರಾಕರಿಸುವ ಸಾಧ್ಯತೆಯಿದೆ. ಕಡ್ಡಾಯ ಮೋಟಾರು ವಿಮಾ ನಿಯಮಗಳ ಪಾಲನೆ ಹೆಚ್ಚಿಸುವುದು ಹಾಗೂ ವಿಮೆ ಇಲ್ಲದ ವಾಹನಗಳ ಸಂಚಾರ ತಡೆಯುವುದು ಈ ಕ್ರಮದ ಉದ್ದೇಶವಾಗಿದೆ.
ರಸ್ತೆ ಸುರಕ್ಷತಾ ಕ್ರಮಗಳ ಭಾಗವಾಗಿ ವಾಹನಗಳ ಸ್ವಯಂಚಾಲಿತ ನಂಬರ್ ಪ್ಲೇಟ್ ಗುರುತಿಸುವಿಕೆ (ANPR) ಕ್ಯಾಮೆರಾಗಳನ್ನು ವಾಹನ ಹಾಗೂ ವಿಮಾ ಡೇಟಾಬೇಸ್‌ಗಳಿಗೆ ಸಂಪರ್ಕಿಸುವುದು, ಸಂಚಾರ ಪೊಲೀಸರಿಗೆ ವಿಮೆ ಪರಿಶೀಲನೆಗೆ ಮೊಬೈಲ್ ಸಾಧನಗಳನ್ನು ಒದಗಿಸುವುದು ಸೇರಿದಂತೆ ಹಲವು ಪ್ರಸ್ತಾವನೆಗಳನ್ನು ಸುಪ್ರೀಂ ಕೋರ್ಟ್ ಮುಂದಿಟ್ಟಿದೆ.
ಇದಲ್ಲದೆ, ಹೊಸದಾಗಿ ಖರೀದಿಸುವ ವಾಹನಗಳಿಗೆ ಕಡ್ಡಾಯವಾಗಿರುವ ಮೂರನೇ ವ್ಯಕ್ತಿ ವಿಮೆಯ ಅವಧಿಯನ್ನು ವಿಸ್ತರಿಸುವ ಬಗ್ಗೆಯೂ ಚರ್ಚೆ ನಡೆದಿದೆ. ವಿಮೆ ಇಲ್ಲದ ವಾಹನಗಳಿಂದ ಉಂಟಾಗುವ ಅಪಘಾತ ಪ್ರಕರಣಗಳಲ್ಲಿ ಸಂತ್ರಸ್ತರಿಗೆ ಪರಿಹಾರ ಸಿಗುವಂತೆ ಮಾಡುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗುತ್ತಿದೆ.



