ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದಿನಕ್ಕೊಂದು ಹೊಸ ಬೆಳವಣಿಗೆಗಳು ನಡೆಯುತ್ತಿವೆ.
ಇದೀಗ ಪ್ರಕರಣದ ಎ-14 ಆರೋಪಿ ಪ್ರದೋಷ್ ಅವರು ತಮ್ಮನ್ನು ಮಾಫಿ ಸಾಕ್ಷಿಯಾಗಿ ಪರಿಗಣಿಸುವಂತೆ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿರುವುದು ಪ್ರಕರಣಕ್ಕೆ ಹೊಸ ತಿರುವು ನೀಡಿದೆ.
ಪ್ರಕರಣದ ಸಂಪೂರ್ಣ ಸತ್ಯವನ್ನು ನ್ಯಾಯಾಲಯದ ಮುಂದೆ ಹೇಳುವುದಾಗಿ ಪ್ರದೋಷ್ ಮನವಿ ಮಾಡಿದ್ದಾರೆ. ತಮ್ಮನ್ನು ಕ್ಷಮಿಸಿ ಮಾಫಿ ಸಾಕ್ಷಿಯನ್ನಾಗಿ ಪರಿಗಣಿಸುವಂತೆ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.
ಪ್ರದೋಷ್ ಪರ ವಕೀಲರು 59ನೇ ಸಿಸಿಹೆಚ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದು, ವಿಚಾರಣೆ ವೇಳೆ ನಟ ದರ್ಶನ್ ಇರುವ ಕೊಠಡಿಯಿಂದ ಪ್ರತ್ಯೇಕವಾಗಿ ಬೇರೆ ಜೈಲು ಕೊಠಡಿಯಿಂದ ಪ್ರದೋಷ್ ಅವರನ್ನು ಹಾಜರುಪಡಿಸುವಂತೆ ಮನವಿ ಮಾಡಿದ್ದಾರೆ.
ದರ್ಶನ್ ಅವರಿಂದ ಬೆದರಿಕೆ ಅಥವಾ ಪ್ರಭಾವ ಬೀರುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಭದ್ರತಾ ಕಾರಣಕ್ಕಾಗಿ ಈ ಮನವಿ ಮಾಡಲಾಗಿದೆ ಎಂದು ತಿಳಿಸಲಾಗಿದೆ.
ಪ್ರದೋಷ್ ಅವರ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ, ಈ ಬಗ್ಗೆ ಪ್ರಾಸಿಕ್ಯೂಷನ್ ತನ್ನ ಅಭಿಪ್ರಾಯವನ್ನು ತಿಳಿಸುವಂತೆ ಸೂಚಿಸಿದೆ.
ಈ ಪ್ರಕರಣದಲ್ಲಿ ನಟಿ ಪವಿತ್ರಾ ಗೌಡ ಎ-1 ಆರೋಪಿಯಾಗಿದ್ದು, ನಟ ದರ್ಶನ್ ಎ-2 ಆರೋಪಿಯಾಗಿದ್ದಾರೆ. ಇದೀಗ ಎ-14 ಆರೋಪಿ ಪ್ರದೋಷ್ ಮಾಫಿ ಸಾಕ್ಷಿಯಾಗಲು ಮುಂದಾಗಿರುವುದು ಪ್ರಕರಣದ ತನಿಖೆಯಲ್ಲಿ ಮಹತ್ವದ ಬೆಳವಣಿಗೆಯಾಗಿದೆ.
ಪ್ರದೋಷ್ ನೀಡುವ ಹೇಳಿಕೆಗಳು ಪ್ರಕರಣದ ಮುಂದಿನ ತನಿಖೆ ಹಾಗೂ ನ್ಯಾಯಾಲಯದ ವಿಚಾರಣೆಯಲ್ಲಿ ಪ್ರಮುಖ ಪಾತ್ರ ವಹಿಸುವ ಸಾಧ್ಯತೆ ಇದೆ. ಅವರು ನೀಡುವ ಹೇಳಿಕೆಯಿಂದ ಪ್ರಕರಣದ ಪ್ರಮುಖ ಅಂಶಗಳು ಹೊರಬರುವ ನಿರೀಕ್ಷೆ ಮೂಡಿದೆ.



