ವಿಜಯಸಾಕ್ಷಿ ಸುದ್ದಿ, ಗದಗ: ಪರಿಸರ ಪ್ರೇಮಕ್ಕೆ ಹೆಸರಾಗಿರುವ ಮಾಜಿ ಸಚಿವ ಎಸ್.ಎಸ್. ಪಾಟೀಲ ಅವರ ೯೩ನೇ ಜನ್ಮದಿನವನ್ನು ಈ ಬಾರಿ ಪರಿಸರ ಕಾಳಜಿಯೊಂದಿಗೆ ಅರ್ಥಪೂರ್ಣವಾಗಿ ಆಚರಿಸಲು ಸಿದ್ಧತೆ ನಡೆದಿದೆ.
ಎಸ್.ಎಸ್. ಪಾಟೀಲ ಅವರ ೯೩ನೇ ಹುಟ್ಟುಹಬ್ಬದ ಪ್ರಯುಕ್ತ ೯೩ ಸಸಿಗಳನ್ನು ನೆಡುವ ಮೂಲಕ ಹಸಿರು ಸಂದೇಶ ಸಾರಲು ಗದಗ-ಬೆಟಗೇರಿ ರೋಟರಿ ಕ್ಲಬ್, ಗದಗ-ಬೆಟಗೇರಿ ಇನ್ನರ್‌ವ್ಹೀಲ್ ಕ್ಲಬ್ ಹಾಗೂ ರೋಟ್ರಾಕ್ಟ್ ಕ್ಲಬ್ ಜೆ.ಟಿ. ಕಾಲೇಜು ಘಟಕಗಳು ಮುಂದಾಗಿವೆ.
ಆ. ೧೩ರಂದು ಎಸ್.ಎಸ್. ಪಾಟೀಲ ಅವರ ಜನ್ಮದಿನದ ಹಿನ್ನೆಲೆಯಲ್ಲಿ, ಆ. ೧೧ರಂದು ಬೆಳಿಗ್ಗೆ ೧೦ ಗಂಟೆಗೆ ಗದಗ ತಾಲೂಕಿನ ಹುಯಿಲಗೋಳ ಗ್ರಾಮದ ಬಳಗಾನೂರ ರಸ್ತೆಯಲ್ಲಿರುವ ಡಾ. ಪ್ರದೀಪ ಉಗಲಾಟ ಅವರ ‘ಶಿವಶಾಂತ ಜೀವ ವೈವಿಧ್ಯ ಉದ್ಯಾನವನದಲ್ಲಿ ಸಸಿ ನೆಡುವ ಕಾರ್ಯಕ್ರಮ ನಡೆಯಲಿದೆ.
ಈ ಹಿಂದೆ ಮೃಗಾಲಯದ ಪ್ರಾಣಿಗಳನ್ನು ವಾರ್ಷಿಕ ಪೋಷಕತ್ವದಲ್ಲಿ ದತ್ತು ಪಡೆದು ಪರಿಸರ ಕಾಳಜಿ ಮೆರೆದಿದ್ದ ಎಸ್.ಎಸ್. ಪಾಟೀಲರು, ಈ ಬಾರಿ ‘ಕಾಡು ಬೆಳೆಸಿ, ನಾಡು ಉಳಿಸಿ’ ಎಂಬ ಸಂದೇಶದೊಂದಿಗೆ ಜನ್ಮದಿನವನ್ನು ಹಸಿರುಮಯಗೊಳಿಸಲು ಮುಂದಾಗಿದ್ದಾರೆ. ಅವರ ಪರಿಸರ ಕಾಳಜಿಗೆ ರೋಟರಿ ಕ್ಲಬ್‌ಗಳು ಕೈಜೋಡಿಸಿವೆ.
ಕಾರ್ಯಕ್ರಮದಲ್ಲಿ ಎಸ್.ಎಸ್. ಪಾಟೀಲ ಅವರು ಭಾಗವಹಿಸಿ ೯೩ ಸಸಿ ನೆಡುವ ಅಭಿಯಾನಕ್ಕೆ ಸಾಂಕೇತಿಕವಾಗಿ ಚಾಲನೆ ನೀಡಲಿದ್ದಾರೆ. ರೋಟರಿ ಕ್ಲಬ್ ಉಪಾಧ್ಯಕ್ಷ ಸುರೇಶ ಕುಂಬಾರ ಅಧ್ಯಕ್ಷತೆ ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಸಂತೋಷ ಕೆಂಚಪ್ಪನವರ, ವಲಯ ಅರಣ್ಯಾಧಿಕಾರಿ ವೀರೇಂದ್ರ ಮರಿಬಸಣ್ಣವರ, ರೋಟರಿ ಕ್ಲಬ್ ವೃತ್ತಿಪರ ನಿರ್ದೇಶಕ ವಿನಯ ಟಿಕಾರೆ, ಇನ್ನರ್‌ವ್ಹೀಲ್ ಕ್ಲಬ್ ಅಧ್ಯಕ್ಷೆ ಮಂಜುಳಾ ಅಕ್ಕಿ, ರೋಟ್ರಾಕ್ಟ್ ಕ್ಲಬ್ ಅಧ್ಯಕ್ಷೆ ಸನ್ಮತಿ ತಾಂಬೆ ಹಾಗೂ ರೋಟರಿ ಕ್ಲಬ್ ಖಜಾಂಚಿ ಮಹೇಶ ಹಿಂಡಿ ಪಾಲ್ಗೊಳ್ಳಲಿದ್ದಾರೆ.
ಕಾರ್ಯಕ್ರಮದ ಪ್ರಾಯೋಜಕತ್ವವನ್ನು ರೋಟರಿ ಕ್ಲಬ್ ಅಧ್ಯಕ್ಷ ಡಾ. ಪ್ರದೀಪ ಉಗಲಾಟ ವಹಿಸಿಕೊಂಡಿದ್ದು, ಕಾರ್ಯದರ್ಶಿ ಅಕ್ಷಯ್ ಶೆಟ್ಟಿ ಸ್ವಾಗತಿಸಲಿದ್ದಾರೆ.



