HomeGadag Newsವಿದ್ಯಾರ್ಥಿ, ಪೌರಕಾರ್ಮಿಕರ ಸಮಸ್ಯೆ ಪರಿಹರಿಸಲು ಆಗ್ರಹ

ವಿದ್ಯಾರ್ಥಿ, ಪೌರಕಾರ್ಮಿಕರ ಸಮಸ್ಯೆ ಪರಿಹರಿಸಲು ಆಗ್ರಹ

ವಿಜಯಸಾಕ್ಷಿ ಸುದ್ದಿ, ಗದಗ: ವಿದ್ಯಾರ್ಥಿಗಳು, ಪೌರಕಾರ್ಮಿಕರು ಹಾಗೂ ಎಸ್‌ಸಿ–ಎಸ್‌ಟಿ ಸಮುದಾಯ ಎದುರಿಸುತ್ತಿರುವ ವಿವಿಧ ಸಮಸ್ಯೆಗಳನ್ನು ತಕ್ಷಣ ಪರಿಹರಿಸುವಂತೆ ಆಗ್ರಹಿಸಿ ಜೈ ಭೀಮ್ ಸಂಘರ್ಷ ಸಮಿತಿ ಗದಗ ಜಿಲ್ಲಾ ಘಟಕದ ವತಿಯಿಂದ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ರಾಯರೆಡ್ಡಿ ಅವರಿಗೆ ಮನವಿ ಸಲ್ಲಿಸಲಾಯಿತು.

ಜೈ ಭೀಮ್ ಸಂಘರ್ಷ ಸಮಿತಿ ಜಿಲ್ಲಾಧ್ಯಕ್ಷ ಗಣೇಶ ವಾಯ್. ಹುಬ್ಬಳ್ಳಿ ಅವರ ನೇತೃತ್ವದಲ್ಲಿ ಜಿಲ್ಲಾಡಳಿತ ಭವನದಲ್ಲಿ ಸಚಿವರಿಗೆ ಮನವಿ ಸಲ್ಲಿಸಲಾಯಿತು.

ಗ್ರಾಮೀಣ ಭಾಗದ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಸಮರ್ಪಕ ಬಸ್ ವ್ಯವಸ್ಥೆ ಇಲ್ಲದೆ ತೊಂದರೆಯಾಗುತ್ತಿದೆ. ಇದರಿಂದ ವಿದ್ಯಾರ್ಥಿಗಳು ಸಮಯಕ್ಕೆ ಸರಿಯಾಗಿ ಶಾಲಾ-ಕಾಲೇಜುಗಳಿಗೆ ತೆರಳಲು ಸಾಧ್ಯವಾಗುತ್ತಿಲ್ಲ. ವಿದ್ಯಾರ್ಥಿಗಳ ಪ್ರೈಜ್‌ ಮನಿ ಹಾಗೂ ವಿದ್ಯಾರ್ಥಿವೇತನದ ಸಮಸ್ಯೆಗಳನ್ನು ಪರಿಹರಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

ಜಿಲ್ಲೆಯಲ್ಲಿ ದಲಿತರ ಮೇಲಿನ ದೌರ್ಜನ್ಯ ಹಾಗೂ ಅಸ್ಪೃಶ್ಯತೆ ಇನ್ನೂ ಸಂಪೂರ್ಣವಾಗಿ ನಿವಾರಣೆಯಾಗಿಲ್ಲ. ಈ ಕುರಿತು ಕಟ್ಟುನಿಟ್ಟಿನ ಕ್ರಮ ಕೈಗೊಂಡು, ಎಸ್‌ಸಿ–ಎಸ್‌ಟಿ ಸಮುದಾಯದ ಹಕ್ಕುಗಳು ಹಾಗೂ ಸೌಲಭ್ಯಗಳು ಅರ್ಹರಿಗೆ ತಲುಪುವಂತೆ ಮಾಡಬೇಕು ಎಂದು ಆಗ್ರಹಿಸಿದರು.

ಪೌರಕಾರ್ಮಿಕರ ಸಮಸ್ಯೆಗಳಿಗೂ ಆದ್ಯತೆ ನೀಡಬೇಕು. ಹೊರಗುತ್ತಿಗೆ ಪೌರಕಾರ್ಮಿಕರನ್ನು ಖಾಯಂಗೊಳಿಸುವ ಪ್ರಕ್ರಿಯೆ ಕೈಗೊಳ್ಳಬೇಕು. ಪೌರಕಾರ್ಮಿಕರಿಗೆ ಮನೆ ನಿರ್ಮಾಣಕ್ಕೆ ನೀಡಲಾಗುತ್ತಿದ್ದ ಗೃಹಭಾಗ್ಯ ಯೋಜನೆ ಸ್ಥಗಿತಗೊಂಡಿದ್ದು, ಮತ್ತೆ ಅನುದಾನ ಕಲ್ಪಿಸಬೇಕು. ಸ್ವಂತ ಮನೆ ಇಲ್ಲದ ಪೌರಕಾರ್ಮಿಕರಿಗೆ ಪ್ರತ್ಯೇಕ ನಿವೇಶನ ಅಥವಾ ಜಾಗ ಮಂಜೂರು ಮಾಡಬೇಕು ಎಂದು ಮನವಿ ಮಾಡಿದರು.

ಇದರೊಂದಿಗೆ ದೇವದಾಸಿಯರ ಸಮಸ್ಯೆ, ಗದಗ-ಬೆಟಗೇರಿ ಅವಳಿ ನಗರದ ಕುಡಿಯುವ ನೀರು, ರಸ್ತೆ ಹಾಗೂ ಒಳಚರಂಡಿ ಸಮಸ್ಯೆಗಳನ್ನು ಪರಿಹರಿಸುವಂತೆಯೂ ಮನವಿಯಲ್ಲಿ ಒತ್ತಾಯಿಸಲಾಗಿದೆ.

ಈ ಸಂದರ್ಭದಲ್ಲಿ ಸಮಿತಿಯ ಉಪಾಧ್ಯಕ್ಷ ಮಂಜುನಾಥ ಎಫ್. ತೌಜಲ್, ಆಮ್ ಆದ್ಮಿ ಪಕ್ಷದ ಜಿಲ್ಲಾಧ್ಯಕ್ಷ ಡಾ. ದಾದಾಪೀರ ಕಲೆಗಾರ, ರೋಣ ತಾಲೂಕು ಅಧ್ಯಕ್ಷ ಬಸವರಾಜ ಬದಾಮಿ, ಅಲ್ಪಸಂಖ್ಯಾತರ ಘಟಕದ ಜಿಲ್ಲಾಧ್ಯಕ್ಷ ರಾಷ್ಟ್ರೀನ್ ಜೋಸೆಫ್, ಉಪಾಧ್ಯಕ್ಷ ರಾಜೇಶ ವಿ. ಶೆಟ್ಟರ್, ಯುವ ಘಟಕದ ಜಿಲ್ಲಾಧ್ಯಕ್ಷ ಇಮಾಮಹುಸೇನ ಕುನ್ನಿಬಾವಿ, ಕಾರ್ಯದರ್ಶಿ ಸಮೀರಅಹ್ಮದ ಕುನ್ನಿಬಾವಿ, ಬಾಬು ಬಳ್ಳಾರಿ, ಮಂಜುನಾಥ ಸಂದಿಮನಿ, ಪ್ರೇಮಕುಮಾರ ಹುಬ್ಬಳ್ಳಿ, ಮಂಜುನಾಥ ಸುಂಕದ, ಶ್ರೀಕಾಂತ ಹಲವಾಗಲಿ, ಹೇಮಂತ ಹುಬ್ಬಳ್ಳಿ, ವಿರುಪಾಕ್ಷ ಗೌಡರ, ಗಿರೀಶ ಚಳಗೇರಿ, ರಫೀಕ ನವಲಗುಂದ, ಫರದೀನ ಕಾಟಾಪುರ, ಮಲ್ಲೇಶ ಮೇಳದಾಳಮಠ ಸೇರಿದಂತೆ ಹಲವರು ಉಪಸ್ಥಿತರಿದ್ದರು.

“ವಿದ್ಯಾರ್ಥಿಗಳು, ಪೌರಕಾರ್ಮಿಕರು ಹಾಗೂ ಎಸ್‌ಸಿ–ಎಸ್‌ಟಿ ಸಮುದಾಯದ ಸಮಸ್ಯೆಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ, ಅರ್ಹರಿಗೆ ಸಿಗಬೇಕಾದ ಸೌಲಭ್ಯಗಳನ್ನು ತ್ವರಿತವಾಗಿ ಒದಗಿಸಬೇಕು.”
— ಗಣೇಶ ವಾಯ್. ಹುಬ್ಬಳ್ಳಿ, ಜಿಲ್ಲಾಧ್ಯಕ್ಷರು, ಜೈ ಭೀಮ್ ಸಂಘರ್ಷ ಸಮಿತಿ

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img