HomeBengaluru Newsಬೆಂಗಳೂರಲ್ಲಿ ‘ಆಪರೇಷನ್ ಮುಕ್ತ’ ಕಾರ್ಯಾಚರಣೆ ಚುರುಕು; ಅಕ್ರಮ ವಲಸಿಗರಿಗೆ ಜಾಗ ನೀಡಿದ ಮಾಲೀಕರ ಮೇಲೂ ಕೇಸ್

ಬೆಂಗಳೂರಲ್ಲಿ ‘ಆಪರೇಷನ್ ಮುಕ್ತ’ ಕಾರ್ಯಾಚರಣೆ ಚುರುಕು; ಅಕ್ರಮ ವಲಸಿಗರಿಗೆ ಜಾಗ ನೀಡಿದ ಮಾಲೀಕರ ಮೇಲೂ ಕೇಸ್

ಬೆಂಗಳೂರು: ನಗರದಲ್ಲಿ ಅಕ್ರಮವಾಗಿ ನೆಲೆಸಿರುವ ಬಾಂಗ್ಲಾದೇಶಿ ವಲಸಿಗರನ್ನು ಪತ್ತೆಹಚ್ಚಲು ಬೆಂಗಳೂರು ಪೊಲೀಸರು ನಡೆಸುತ್ತಿರುವ ‘ಆಪರೇಷನ್ ಮುಕ್ತ’ ಕಾರ್ಯಾಚರಣೆ ಮುಂದುವರಿದಿದೆ.

ಇದರ ಬೆನ್ನಲ್ಲೇ ಅಕ್ರಮ ವಲಸಿಗರಿಗೆ ಶೆಡ್ ನಿರ್ಮಿಸಿಕೊಳ್ಳಲು ಜಾಗ ಬಾಡಿಗೆಗೆ ನೀಡಿದ ಆರೋಪದ ಮೇಲೆ ಜಾಗದ ಮಾಲೀಕರ ವಿರುದ್ಧವೂ ಪೊಲೀಸರು ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ.

ನಗರದ ಹೊರವಲಯದಲ್ಲಿ ಹಣದಾಸೆಗೆ ಅಕ್ರಮ ವಲಸಿಗರಿಗೆ ಶೆಡ್ ನಿರ್ಮಿಸಿಕೊಳ್ಳಲು ಜಾಗ ನೀಡಿರುವ ಮಾಲೀಕರ ಮಾಹಿತಿ ಸಂಗ್ರಹಿಸಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈಗಾಗಲೇ ಬೆಳ್ಳಂದೂರು ಪೊಲೀಸ್ ಠಾಣಾ ವ್ಯಾಪ್ತಿಯ ನಾಲ್ವರು ಸೈಟ್ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಅವರಿಗೆ ನೋಟಿಸ್ ಜಾರಿ ಮಾಡಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿದೆ ಎಂದು ತಿಳಿದುಬಂದಿದೆ.

3,200ಕ್ಕೂ ಹೆಚ್ಚು ದಾಖಲೆ ಪರಿಶೀಲನೆ:

‘ಆಪರೇಷನ್ ಮುಕ್ತ’ ಕಾರ್ಯಾಚರಣೆಯ ಭಾಗವಾಗಿ ಇದುವರೆಗೆ 3,200ಕ್ಕೂ ಹೆಚ್ಚು ಜನರ ದಾಖಲೆಗಳನ್ನು ಪೊಲೀಸರು ಪರಿಶೀಲಿಸಿದ್ದಾರೆ. ವೈಟ್‌ಫೀಲ್ಡ್ ಮತ್ತು ಎಲೆಕ್ಟ್ರಾನಿಕ್ ಸಿಟಿ ಪ್ರದೇಶಗಳಲ್ಲಿ ನಡೆದ ತಪಾಸಣೆಯಲ್ಲಿ ಒಟ್ಟು 53 ಅಕ್ರಮ ಬಾಂಗ್ಲಾದೇಶಿ ವಲಸಿಗರು ಪತ್ತೆಯಾಗಿದ್ದಾರೆ.

ಎಲೆಕ್ಟ್ರಾನಿಕ್ ಸಿಟಿಯಲ್ಲಿ 15 ಹಾಗೂ ವೈಟ್‌ಫೀಲ್ಡ್‌ನಲ್ಲಿ 38 ಮಂದಿ ಪತ್ತೆಯಾಗಿದ್ದಾರೆ. ಪತ್ತೆಯಾದವರ ಕುರಿತು ವಿದೇಶಿಯರ ಪ್ರಾದೇಶಿಕ ನೋಂದಣಿ ಕಚೇರಿ (FRRO)ಗೆ ಮಾಹಿತಿ ನೀಡಲಾಗಿದ್ದು, ಮುಂದಿನ ಕಾನೂನು ಪ್ರಕ್ರಿಯೆ ಕೈಗೊಳ್ಳಲಾಗುತ್ತಿದೆ.

30ಕ್ಕೂ ಹೆಚ್ಚು ಸ್ಥಳಗಳಲ್ಲಿ ದಾಳಿ:

ಪೊಲೀಸರು ನಿನ್ನೆ 500ಕ್ಕೂ ಹೆಚ್ಚು ಸಿಬ್ಬಂದಿಯೊಂದಿಗೆ ಬೆಳ್ಳಂದೂರು, ಬೇಗೂರು, ವೈಟ್‌ಫೀಲ್ಡ್, ಕಾಡುಗೋಡಿ, ಕೆ.ಆರ್.ಪುರ ಹಾಗೂ ಎಲೆಕ್ಟ್ರಾನಿಕ್ ಸಿಟಿ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಕಾರ್ಯಾಚರಣೆ ನಡೆಸಿದ್ದಾರೆ.

ಸುಮಾರು 30ಕ್ಕೂ ಹೆಚ್ಚು ಸ್ಥಳಗಳಲ್ಲಿ ಪರಿಶೀಲನೆ ನಡೆಸಲಾಗಿದ್ದು, ಎಲೆಕ್ಟ್ರಾನಿಕ್ ಸಿಟಿ ವ್ಯಾಪ್ತಿಯ ಪರಪ್ಪನ ಅಗ್ರಹಾರ, ಹುಳಿಮಾವು, ಬಂಡೆಪಾಳ್ಯ, ಹೆಬ್ಬಗೋಡಿ ಹಾಗೂ ಬೇಗೂರು ಸೇರಿದಂತೆ 29 ಕಡೆಗಳಲ್ಲಿ ತಪಾಸಣೆ ನಡೆಸಲಾಗಿದೆ.

ವೈಟ್‌ಫೀಲ್ಡ್ ವಿಭಾಗದ ಆರು ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲೂ ಹಲವು ಸ್ಥಳಗಳಲ್ಲಿ ಶೋಧ ನಡೆಸಲಾಗಿದೆ. ಶೆಡ್‌ಗಳಲ್ಲಿ ವಾಸಿಸುತ್ತಿದ್ದವರ ಆಧಾರ್ ಕಾರ್ಡ್, ವೋಟರ್ ಐಡಿ ಸೇರಿದಂತೆ ವಿವಿಧ ಗುರುತಿನ ದಾಖಲೆಗಳನ್ನು ಪೊಲೀಸರು ಪರಿಶೀಲಿಸಿದ್ದಾರೆ.

ಜಾಗ ಮಾಲೀಕರ ಬಗ್ಗೆಯೂ ಮಾಹಿತಿ ಸಂಗ್ರಹ:

ಅಕ್ರಮ ವಲಸಿಗರಿಗೆ ಶೆಡ್ ನಿರ್ಮಿಸಿಕೊಳ್ಳಲು ಜಾಗ ನೀಡಿರುವ ಮಾಲೀಕರ ಬಗ್ಗೆಯೂ ಪೊಲೀಸರು ಮಾಹಿತಿ ಕಲೆಹಾಕುತ್ತಿದ್ದಾರೆ. ಕಾರ್ಯಾಚರಣೆ ನಡೆಸಿದ 30ಕ್ಕೂ ಹೆಚ್ಚು ಸ್ಥಳಗಳ ಮಾಲೀಕರ ವಿವರಗಳನ್ನು ಪರಿಶೀಲಿಸಲಾಗುತ್ತಿದೆ.

ಅಕ್ರಮ ವಲಸಿಗರಿಗೆ ಆಶ್ರಯ ನೀಡುವುದು ಅಥವಾ ಅವರಿಗೆ ಜಾಗ ಒದಗಿಸುವುದರ ಕುರಿತು ಕಾನೂನು ಉಲ್ಲಂಘನೆ ಕಂಡುಬಂದರೆ ಮಾಲೀಕರ ವಿರುದ್ಧವೂ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ನಗರದಲ್ಲಿ ಅಕ್ರಮ ವಲಸಿಗರ ಪತ್ತೆ ಕಾರ್ಯಾಚರಣೆ ಮುಂದುವರಿದಿದ್ದು, ಅನುಮಾನಾಸ್ಪದ ವ್ಯಕ್ತಿಗಳ ಗುರುತಿನ ದಾಖಲೆಗಳ ಪರಿಶೀಲನೆಯನ್ನೂ ಪೊಲೀಸರು ತೀವ್ರಗೊಳಿಸಿದ್ದಾರೆ.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img