ಬೆಂಗಳೂರು: ರಾಜಧಾನಿಯ ಕಂಠೀರವ ಸ್ಟುಡಿಯೋ ಮುಂಭಾಗ ಹಾಗೂ ಡಾ. ರಾಜ್ಕುಮಾರ್ ಪುಣ್ಯಭೂಮಿ ಬಳಿ ನಡೆಯುತ್ತಿದ್ದ ಅಂಡರ್ಪಾಸ್ ಕಾಮಗಾರಿ ವೇಳೆ ಭೀಕರ ದುರಂತ ಸಂಭವಿಸಿದೆ. ಸುಮಾರು 20 ಅಡಿ ಆಳಕ್ಕೆ ತೋಡಲಾಗಿದ್ದ ಗುಂಡಿಯ ಮಣ್ಣಿನ ತಡೆಗೋಡೆ ಏಕಾಏಕಿ ಕುಸಿದು ಬಿದ್ದ ಪರಿಣಾಮ ಓರ್ವ ಕಾರ್ಮಿಕ ಮೃತಪಟ್ಟಿದ್ದು, ಹಲವು ಕಾರ್ಮಿಕರು ಮಣ್ಣಿನಡಿ ಸಿಲುಕಿಕೊಂಡಿದ್ದಾರೆ.
ಅಂಡರ್ಪಾಸ್ ನಿರ್ಮಾಣಕ್ಕಾಗಿ ರಸ್ತೆಯಲ್ಲಿ ಸುಮಾರು 20 ಅಡಿ ಆಳದವರೆಗೆ ಮಣ್ಣು ತೆಗೆಯಲಾಗಿತ್ತು. ಎಂದಿನಂತೆ ಕಾರ್ಮಿಕರು ಕಾಮಗಾರಿಯಲ್ಲಿ ತೊಡಗಿಸಿಕೊಂಡಿದ್ದ ವೇಳೆ ಏಕಾಏಕಿ ಮೇಲ್ಭಾಗದಲ್ಲಿದ್ದ ಮಣ್ಣಿನ ತಡೆಗೋಡೆ ಕುಸಿದು ಬಿದ್ದಿದೆ. ಕ್ಷಣಾರ್ಧದಲ್ಲಿ ಮಣ್ಣು ಕುಸಿದ ಪರಿಣಾಮ ಸ್ಥಳದಲ್ಲಿದ್ದ ಐವರು ಕಾರ್ಮಿಕರು ಮಣ್ಣಿನಡಿ ಸಿಲುಕಿ ಉಸಿರಾಡಲಾಗದೆ ಪರದಾಡಿದ್ದಾರೆ.
ದುರಂತದ ಬೆನ್ನಲ್ಲೇ ಸಿಬ್ಬಂದಿ ಹಾಗೂ ಸಾರ್ವಜನಿಕರು ತಕ್ಷಣ ಕಾರ್ಯಾಚರಣೆಗೆ ಮುಂದಾಗಿದ್ದು, ಮಣ್ಣಿನಡಿ ಸಿಲುಕಿದ್ದ ಮೂವರು ಕಾರ್ಮಿಕರನ್ನು ಸುರಕ್ಷಿತವಾಗಿ ಹೊರತೆಗೆಯಲಾಗಿದೆ. ಘಟನೆಯಲ್ಲಿ ಓರ್ವ ಕಾರ್ಮಿಕ ಮೃತಪಟ್ಟಿರುವುದು ದೃಢಪಟ್ಟಿದ್ದು, ಮತ್ತೋರ್ವ ಕಾರ್ಮಿಕ ಮಣ್ಣಿನಡಿ ಸಿಲುಕಿರುವ ಹಿನ್ನೆಲೆಯಲ್ಲಿ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ.
ಮಾಹಿತಿ ತಿಳಿಯುತ್ತಿದ್ದಂತೆ ಪೊಲೀಸರು ಹಾಗೂ ಹೆಚ್ಚುವರಿ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿದ್ದಾರೆ. ಮಣ್ಣಿನಡಿ ಇನ್ನೂ ಯಾರಾದರೂ ಸಿಲುಕಿಕೊಂಡಿದ್ದಾರೆಯೇ ಎಂಬ ಅನುಮಾನ ಹಿನ್ನೆಲೆಯಲ್ಲಿ ರಕ್ಷಣಾ ಸಿಬ್ಬಂದಿ ವ್ಯಾಪಕ ಶೋಧ ಕಾರ್ಯ ನಡೆಸುತ್ತಿದ್ದಾರೆ. ಘಟನಾ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ರಕ್ಷಣಾ ಕಾರ್ಯಾಚರಣೆ ತೀವ್ರಗೊಳಿಸಲಾಗಿದೆ.



