HomeIndia Newsಖರ್ಗೆ ರ‍್ಯಾಲಿ ಬಳಿಕ ‘ಶುದ್ಧೀಕರಣ’ ಹೋಮ ವಿವಾದ: ರಾಜ್ಯಸಭೆಯಲ್ಲಿ ಸಿಡಿದ ರಾಜಕೀಯ ಕದನ

ಖರ್ಗೆ ರ‍್ಯಾಲಿ ಬಳಿಕ ‘ಶುದ್ಧೀಕರಣ’ ಹೋಮ ವಿವಾದ: ರಾಜ್ಯಸಭೆಯಲ್ಲಿ ಸಿಡಿದ ರಾಜಕೀಯ ಕದನ

For Dai;y Updates Join Our whatsapp Group

ನವದೆಹಲಿ: ಉತ್ತರಾಖಂಡದ ಹಲ್ದ್ವಾನಿಯ ರಾಮಲೀಲಾ ಮೈದಾನದಲ್ಲಿ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಡೆಸಿದ ಸಾರ್ವಜನಿಕ ರ‍್ಯಾಲಿಯ ಬಳಿಕ ಅದೇ ಸ್ಥಳದಲ್ಲಿ ‘ಶುದ್ಧೀಕರಣ’ ಹೋಮ ನಡೆಸಿರುವ ಘಟನೆ ರಾಷ್ಟ್ರ ರಾಜಕೀಯದಲ್ಲಿ ತೀವ್ರ ಸಂಚಲನ ಸೃಷ್ಟಿಸಿದೆ. ದಲಿತ ಸಮುದಾಯಕ್ಕೆ ಸೇರಿದ ಖರ್ಗೆ ವಿರುದ್ಧ ಜಾತಿ ಆಧಾರಿತ ಅವಮಾನ ಮಾಡಲಾಗಿದೆ ಎಂದು ಕಾಂಗ್ರೆಸ್ ಆರೋಪಿಸಿದ್ದು, ವಿಷಯ ಸಂಸತ್ತಿನಲ್ಲೂ ಪ್ರತಿಧ್ವನಿಸಿದೆ.

ಆಗಸ್ಟ್ 8ರಂದು ಖರ್ಗೆ ರ‍್ಯಾಲಿ ನಡೆಸಿದ ರಾಮಲೀಲಾ ಮೈದಾನದಲ್ಲಿ ಆಗಸ್ಟ್ 10ರಂದು ಶ್ರೀರಾಮ ಸೇನಾ ಧರ್ಮಾರ್ಥ ಸೇವಾ ನ್ಯಾಸ್ ಸಂಘಟನೆ ಶುದ್ಧೀಕರಣ ಹೋಮ ನಡೆಸಿತ್ತು. ಈ ಬೆಳವಣಿಗೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಕಾಂಗ್ರೆಸ್, ಖರ್ಗೆ ದಲಿತ ನಾಯಕ ಎಂಬ ಕಾರಣಕ್ಕೆ ಈ ರೀತಿಯ ಕ್ರಮ ಕೈಗೊಳ್ಳಲಾಗಿದೆ ಎಂದು ಆರೋಪಿಸಿದೆ.

ರಾಜ್ಯಸಭೆಯಲ್ಲಿ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ, “ಈ ದೇಶದಲ್ಲಿ ದಲಿತರಿಗೆ ಜಾಗವಿಲ್ಲ ಎಂಬುದನ್ನು ನಾವು ಹೇಳುತ್ತಲೇ ಇದ್ದೇವೆ. ಧರ್ಮದ ಹೆಸರಿನಲ್ಲಿ ಸಮಾಜವನ್ನು ವಿಭಜಿಸಲಾಗುತ್ತಿದೆ. ನಾನು ನನ್ನ ಭಾಷಣದಲ್ಲಿ ಯಾವುದೇ ಧರ್ಮ ಅಥವಾ ಸಮುದಾಯದ ವಿರುದ್ಧ ಮಾತನಾಡಿಲ್ಲ. ಸರ್ಕಾರದ ವೈಫಲ್ಯಗಳ ಬಗ್ಗೆ ಮಾತ್ರ ಪ್ರಸ್ತಾಪಿಸಿದ್ದೆ. ಹಾಗಿದ್ದರೆ ನಾನು ಭಾಷಣ ಮಾಡಿದ ಸ್ಥಳವನ್ನು ಶುದ್ಧೀಕರಿಸುವ ಅಗತ್ಯವೇನಿತ್ತು?” ಎಂದು ಪ್ರಶ್ನಿಸಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಖರ್ಗೆ ರ‍್ಯಾಲಿ ನಡೆದ ಸ್ಥಳವನ್ನು ‘ಶುದ್ಧೀಕರಿಸುವ’ ಹೆಸರಿನಲ್ಲಿ ಹೋಮ ನಡೆಸಿರುವುದು ಹಿಂದೂ ಧರ್ಮದ ಮೌಲ್ಯಗಳಿಗೂ ವಿರುದ್ಧವಾಗಿದ್ದು, ಇಂತಹ ಕ್ರಮಗಳು ಮುಂದಿನ ದಿನಗಳಲ್ಲಿ ಜಾತಿ ಸಂಘರ್ಷಕ್ಕೆ ಕಾರಣವಾಗಬಹುದು ಎಂದು ಕಾಂಗ್ರೆಸ್ ಎಚ್ಚರಿಸಿದೆ. ಉತ್ತರಾಖಂಡ ಕಾಂಗ್ರೆಸ್ ಅಧ್ಯಕ್ಷ ಗಣೇಶ್ ಗೋಡಿಯಾಲ್, ಹೋಮ ನಡೆಸಿದ ಶ್ರೀರಾಮ ಸೇನಾ ಸಂಘಟನೆಗೆ ಬಿಜೆಪಿಯ ಸಂಪರ್ಕವಿದೆ ಎಂದು ಆರೋಪಿಸಿದ್ದು, ಬಿಜೆಪಿ ಈ ಆರೋಪವನ್ನು ಸಂಪೂರ್ಣವಾಗಿ ತಳ್ಳಿಹಾಕಿದೆ.

ರಾಜ್ಯಸಭೆಯಲ್ಲಿ ಪ್ರತಿಕ್ರಿಯಿಸಿದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ, “ಖರ್ಗೆ ಅವರ ಬಗ್ಗೆ ನಮಗೆ ಗೌರವವಿದೆ. ನಡೆದ ಶುದ್ಧೀಕರಣ ಕಾರ್ಯಕ್ರಮವನ್ನು ನಾವು ಖಂಡಿಸುತ್ತೇವೆ. ಈ ಘಟನೆಯ ಬಗ್ಗೆ ತನಿಖೆ ನಡೆಸಲಾಗುವುದು” ಎಂದು ಭರವಸೆ ನೀಡಿದರು. ರಾಜ್ಯಸಭಾ ಸಭಾಪತಿ ಸಿ.ಪಿ. ರಾಧಾಕೃಷ್ಣನ್ ಕೂಡ ಹೋಮ ನಡೆಸಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಅಭಿಪ್ರಾಯಪಟ್ಟರು.

ಇದೇ ವೇಳೆ ಶುದ್ಧೀಕರಣ ಹೋಮ ನಡೆಸಿದ ಶ್ರೀರಾಮ ಸೇನಾ ಧರ್ಮಾರ್ಥ ಸೇವಾ ನ್ಯಾಸ್ ಸಂಘಟನೆ ತಮ್ಮ ಕ್ರಮವನ್ನು ಸಮರ್ಥಿಸಿಕೊಂಡಿದ್ದು, ರಾಮಲೀಲಾ ಮೈದಾನವು ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಿಗಾಗಿ ಮೀಸಲಾದ ಸ್ಥಳವಾಗಿದ್ದು, ರಾಜಕೀಯ ರ‍್ಯಾಲಿಗಳಿಗೆ ಅವಕಾಶ ನೀಡಬಾರದು ಎಂದು ವಾದಿಸಿದೆ. ಜೊತೆಗೆ ಖರ್ಗೆ ರ‍್ಯಾಲಿಯಲ್ಲಿ ಸನಾತನ ಧರ್ಮದ ಭಾವನೆಗಳಿಗೆ ಧಕ್ಕೆ ತರುವ ಘೋಷಣೆಗಳು ಕೇಳಿಬಂದಿದ್ದವು ಎಂದು ಬಿಜೆಪಿ ಆರೋಪಿಸಿದ್ದು, ಕಾಂಗ್ರೆಸ್ ಅದನ್ನು ಸಂಪೂರ್ಣವಾಗಿ ನಿರಾಕರಿಸಿದೆ. ಪರಿಣಾಮ ಈ ಘಟನೆ ಉತ್ತರಾಖಂಡ ರಾಜಕೀಯದಲ್ಲಿ ಹೊಸ ಬಿಜೆಪಿ-ಕಾಂಗ್ರೆಸ್ ಸಂಘರ್ಷಕ್ಕೆ ಕಾರಣವಾಗಿದೆ.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img