HomeIndia Newsಮೋದಿ-ಶಾ ಆಗಮನದ ನಡುವೆ ಕಲಾಪಕ್ಕೆ ಅಡ್ಡಿ: ಆಡಳಿತ-ವಿಪಕ್ಷಗಳ ಗದ್ದಲದ ನಡುವೆ ಲೋಕಸಭೆ ಮುಂಗಾರು ಅಧಿವೇಶನ ಅಂತ್ಯ

ಮೋದಿ-ಶಾ ಆಗಮನದ ನಡುವೆ ಕಲಾಪಕ್ಕೆ ಅಡ್ಡಿ: ಆಡಳಿತ-ವಿಪಕ್ಷಗಳ ಗದ್ದಲದ ನಡುವೆ ಲೋಕಸಭೆ ಮುಂಗಾರು ಅಧಿವೇಶನ ಅಂತ್ಯ

For Dai;y Updates Join Our whatsapp Group

ನವದೆಹಲಿ:ಪ್ರತಿಪಕ್ಷಗಳ ತೀವ್ರ ಗದ್ದಲ, ಪ್ರತಿಭಟನೆ ಹಾಗೂ ಆರೋಪ-ಪ್ರತ್ಯಾರೋಪಗಳ ನಡುವೆಯೇ ಲೋಕಸಭೆಯ ಮುಂಗಾರು ಅಧಿವೇಶನ ಇಂದು ಅನಿರ್ದಿಷ್ಟಾವಧಿಗೆ ಮುಂದೂಡಿಕೆಯಾಗಿದೆ. ‘ವಂದೇ ಮಾತರಂ’ ಗೀತೆಯೊಂದಿಗೆ ಕಲಾಪ ಅಂತ್ಯಗೊಂಡಿದ್ದು, ಅಧಿವೇಶನದ ಕೊನೆಯ ದಿನವೂ ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ತೀವ್ರ ವಾಗ್ವಾದಕ್ಕೆ ವೇದಿಕೆಯಾಯಿತು.

ನೀಟ್‌ ಸೇರಿದಂತೆ ಪರೀಕ್ಷಾ ಅಕ್ರಮಗಳಿಗೆ ಸಂಬಂಧಿಸಿದ ವಿಷಯಗಳ ಕುರಿತು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಲೋಕಸಭೆಯಲ್ಲಿ ಉತ್ತರ ನೀಡಲಿದ್ದಾರೆ ಎಂಬ ನಿರೀಕ್ಷೆ ಇತ್ತು. ಇದೇ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್‌ ಶಾ ಅವರು ಇಂದು ಸಂಸತ್‌ಗೆ ಆಗಮಿಸಿದ್ದರು.

ಲೋಕಸಭೆ ಸ್ಪೀಕರ್‌ ಓಂ ಬಿರ್ಲಾ ಅವರು ತಮ್ಮ ಆಸನದಲ್ಲಿ ಕುಳಿತುಕೊಳ್ಳುವ ಮುನ್ನವೇ ವಿಪಕ್ಷ ಸಂಸದರು ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದರು. ಬಳಿಕ ಸ್ಪೀಕರ್‌ ಅವರು ಸದಸ್ಯರಿಗೆ ಎದ್ದು ನಿಲ್ಲುವಂತೆ ಸೂಚಿಸಿ ‘ವಂದೇ ಮಾತರಂ’ ಗೀತೆಯನ್ನು ಮೊಳಗಿಸಲಾಯಿತು. ಗೀತೆ ಮುಕ್ತಾಯವಾದ ತಕ್ಷಣವೇ ಮತ್ತೆ ವಿಪಕ್ಷ ಸದಸ್ಯರು ಘೋಷಣೆಗಳನ್ನು ಕೂಗಿ ಗದ್ದಲ ಮುಂದುವರಿಸಿದರು.

ಸದನದಲ್ಲಿ ಗದ್ದಲ ಮುಂದುವರಿದ ಹಿನ್ನೆಲೆಯಲ್ಲಿ ಸ್ಪೀಕರ್‌ ಓಂ ಬಿರ್ಲಾ ಅವರು ಯಾವುದೇ ಹೇಳಿಕೆ ನೀಡದೆ ಲೋಕಸಭೆಯನ್ನು ಅನಿರ್ದಿಷ್ಟಾವಧಿಗೆ ಮುಂದೂಡಿದರು.

ಮುಂಗಾರು ಅಧಿವೇಶನದ ಅವಧಿಯುದ್ದಕ್ಕೂ ಆಡಳಿತ ಮತ್ತು ವಿರೋಧ ಪಕ್ಷಗಳ ನಡುವಿನ ಸಂಘರ್ಷ ತೀವ್ರವಾಗಿತ್ತು. ಸಂಸತ್‌ ಭವನದ ಮಕರ ದ್ವಾರದ ಬಳಿ ಬಿಜೆಪಿ ಹಾಗೂ INDIA ಒಕ್ಕೂಟದ ಸಂಸದರು ಪರಸ್ಪರ ಪ್ರತಿಭಟನೆ ನಡೆಸಿದರು.

ಜಾರ್ಖಂಡ್‌ನಲ್ಲಿ ನಡೆಯುತ್ತಿರುವ ವಿದ್ಯಾರ್ಥಿಗಳ ಪ್ರತಿಭಟನೆ ವಿಚಾರದಲ್ಲಿ ಕಾಂಗ್ರೆಸ್‌ ಮೌನ ವಹಿಸಿದೆ ಎಂದು ಆರೋಪಿಸಿ ಬಿಜೆಪಿ ಸಂಸದರು ಲೋಕಸಭೆಯ ವಿಪಕ್ಷ ನಾಯಕ ರಾಹುಲ್‌ ಗಾಂಧಿ ವಿರುದ್ಧ ಮಕರ ದ್ವಾರದ ಬಳಿ ಪ್ರತಿಭಟನೆ ನಡೆಸಿದರು.

ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್‌ ನಾಯಕ ಪವನ್‌ ಖೇರಾ ನೇತೃತ್ವದಲ್ಲಿ ವಿಪಕ್ಷ ಸಂಸದರು ಆಟಿಕೆ ಕೋತಿ ಹಿಡಿದು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಘೋಷಣೆಗಳನ್ನು ಕೂಗಿ ವ್ಯಂಗ್ಯವಾಡಿದರು.

ಕಾಂಗ್ರೆಸ್‌ ಸಂಸದ ಇಮ್ರಾನ್‌ ಪ್ರತಾಪ್‌ಗಢಿ ಮಾತನಾಡಿ, ಆಡಳಿತ ಪಕ್ಷವೇ ಸಂಸತ್‌ ಕಲಾಪ ನಡೆಯದಂತೆ ತಡೆಯುತ್ತಿದೆ ಎಂದು ಆರೋಪಿಸಿದರು. ಗೃಹ ಸಚಿವರು ಹಾಗೂ ಪ್ರಧಾನಿ ಸದನಕ್ಕೆ ಬಂದು ಪ್ರಮುಖ ವಿಷಯಗಳಿಗೆ ಉತ್ತರ ನೀಡಬೇಕು ಎಂಬುದು ವಿಪಕ್ಷಗಳ ಸಹಜ ಬೇಡಿಕೆ ಎಂದು ಹೇಳಿದರು.

ಪರೀಕ್ಷಾ ಅಕ್ರಮಗಳಿಗೆ ಸಂಬಂಧಿಸಿದ ಚರ್ಚೆಗಳ ಸಂದರ್ಭದಲ್ಲಿ ಗೃಹ ಸಚಿವರು ಅಥವಾ ಪ್ರಧಾನಿ ಸದನಕ್ಕೆ ಬಂದು ಉತ್ತರಿಸದಿರುವುದನ್ನು ಪ್ರಶ್ನಿಸಿದ ಅವರು, ವಿಪಕ್ಷಗಳ ಧ್ವನಿಯನ್ನು ಹತ್ತಿಕ್ಕಲಾಗುತ್ತಿದೆ ಎಂದು ಆರೋಪಿಸಿದರು.

ಇತ್ತ ಕೇಂದ್ರ ಸಚಿವ ಮನೋಹರ್‌ ಲಾಲ್‌ ಖಟ್ಟರ್‌ ಅವರು ಲೋಕಸಭೆ ಚರ್ಚೆ ನಡೆಸುವ ಪವಿತ್ರ ವೇದಿಕೆಯಾಗಿದೆ. ಆದರೆ ವಿಪಕ್ಷಗಳು ಯಾವುದೇ ವಿಚಾರವನ್ನು ಕೇಳಿಸಿಕೊಳ್ಳಲು ಸಿದ್ಧವಾಗಿಲ್ಲ ಎಂದು ಟೀಕಿಸಿದರು.

ಚರ್ಚೆಯೇ ನಡೆಯದಂತೆ ಸದನದಲ್ಲಿ ಗದ್ದಲ ಮಾಡುವುದರಿಂದ ಯಾವುದೇ ಪ್ರಯೋಜನವಿಲ್ಲ. ಸಂಸತ್ತು ಯಾರೊಬ್ಬರ ವೈಯಕ್ತಿಕ ಇಚ್ಛೆಯಂತೆ ನಡೆಯುವುದಿಲ್ಲ. ಇದು ಇಡೀ ದೇಶದ ಪ್ರತಿನಿಧಿಗಳ ವೇದಿಕೆಯಾಗಿದೆ ಎಂದು ಅವರು ಹೇಳಿದರು.

ಒಟ್ಟಾರೆ, ಆಡಳಿತ ಮತ್ತು ಪ್ರತಿಪಕ್ಷಗಳ ನಡುವಿನ ನಿರಂತರ ಗದ್ದಲ ಹಾಗೂ ಪ್ರತಿಭಟನೆಗಳ ನಡುವೆಯೇ ಲೋಕಸಭೆಯ ಮುಂಗಾರು ಅಧಿವೇಶನ ಅಂತ್ಯಗೊಂಡಿದೆ.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img