ಉತ್ತರಾಖಂಡ: ಉತ್ತರಾಖಂಡದಲ್ಲಿ ಮಳೆಯ ಅಬ್ಬರ ಮುಂದುವರಿದಿದ್ದು, ಭೂಕುಸಿತದಿಂದ ಬದರಿನಾಥ್–ರಿಷಿಕೇಶ ರಾಷ್ಟ್ರೀಯ ಹೆದ್ದಾರಿ ಮತ್ತೆ ಬಂದ್ ಆಗಿದೆ.
ಶ್ರೀನಗರ ಸಮೀಪದ ಭೂಕುಸಿತ ಪೀಡಿತ ಸಿರೋಬಗರ್ ಪ್ರದೇಶದಲ್ಲಿ ಬೆಟ್ಟದ ಮಣ್ಣು ಹಾಗೂ ಬಂಡೆಗಳು ರಸ್ತೆಗೆ ಜಾರಿಬಿದ್ದಿವೆ. ಪರಿಣಾಮ ಹೆದ್ದಾರಿಯಲ್ಲಿ ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ.
ಹೆದ್ದಾರಿ ಬಂದ್ ಆಗಿರುವುದರಿಂದ ಬದರಿನಾಥ ಧಾಮಕ್ಕೆ ತೆರಳುತ್ತಿದ್ದ ಹಾಗೂ ಅಲ್ಲಿಂದ ವಾಪಸ್ ಬರುತ್ತಿದ್ದ ನೂರಾರು ಯಾತ್ರಿಕರ ವಾಹನಗಳು ರಸ್ತೆಯ ಎರಡೂ ಬದಿಗಳಲ್ಲಿ ಸಿಲುಕಿಕೊಂಡಿವೆ.
ಮಾಹಿತಿ ತಿಳಿಯುತ್ತಿದ್ದಂತೆ ರಾಷ್ಟ್ರೀಯ ಹೆದ್ದಾರಿ ಇಲಾಖೆ ಹಾಗೂ ವಿಪತ್ತು ನಿರ್ವಹಣಾ ತಂಡಗಳು ಸ್ಥಳಕ್ಕೆ ತೆರಳಿವೆ. ರಸ್ತೆಗೆ ಬಿದ್ದಿರುವ ಮಣ್ಣು ಮತ್ತು ಬಂಡೆಗಳನ್ನು ತೆರವುಗೊಳಿಸುವ ಕಾರ್ಯ ಆರಂಭಿಸಲಾಗಿದೆ.
ಇನ್ನೊಂದೆಡೆ, ಭಾರೀ ಮಳೆಯ ಹಿನ್ನೆಲೆಯಲ್ಲಿ ಸಿರೋಬಗರ್ ಸೇರಿದಂತೆ ಉತ್ತರಾಖಂಡದ ಹಲವು ಸೂಕ್ಷ್ಮ ಪ್ರದೇಶಗಳಲ್ಲಿ ಭೂಕುಸಿತದ ಅಪಾಯ ಮುಂದುವರಿದಿದೆ. ಹೀಗಾಗಿ ಯಾತ್ರಿಕರು ಅನಗತ್ಯ ಪ್ರಯಾಣವನ್ನು ತಪ್ಪಿಸುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.
ಜೊತೆಗೆ ಹವಾಮಾನ ಇಲಾಖೆ ಹಾಗೂ ಸ್ಥಳೀಯ ಆಡಳಿತ ನೀಡುವ ಸೂಚನೆಗಳನ್ನು ಪಾಲಿಸುವಂತೆ ಯಾತ್ರಿಕರಿಗೆ ಸಲಹೆ ನೀಡಲಾಗಿದೆ.



