ಮುಂಬೈ: ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ನೇತೃತ್ವದ ಮಹಾರಾಷ್ಟ್ರ ಸರ್ಕಾರ ರಾಜ್ಯದ ಬರ ಪರಿಸ್ಥಿತಿಯನ್ನು ಎದುರಿಸಲು ಬೃಹತ್ ನಿರ್ಧಾರ ಕೈಗೊಂಡಿದ್ದು, ಒಟ್ಟು 358 ತಾಲೂಕುಗಳ ಪೈಕಿ 265 ತಾಲೂಕುಗಳನ್ನು ‘ಬರಪೀಡಿತ’ (Drought Affected) ಎಂದು ಘೋಷಿಸಿದೆ. ಈ ನಿರ್ಧಾರವು ರಾಜ್ಯದ ಶೇಕಡಾ 74ರಷ್ಟು ಭೂಪ್ರದೇಶವನ್ನು ಒಳಗೊಂಡಿದೆ.
ಇತ್ತೀಚೆಗೆ ಸಿಎಂ ದೇವೇಂದ್ರ ಫಡ್ನವೀಸ್ ಅವರು ವಿವಿಧ ಬರಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಇದರ ಬೆನ್ನಲ್ಲೇ ರೈತರು ಹಾಗೂ ಸಾರ್ವಜನಿಕರ ನೆರವಿಗಾಗಿ ಹಲವು ಪ್ರಮುಖ ಬರ ಪರಿಹಾರ ಕ್ರಮಗಳನ್ನು ಸರ್ಕಾರ ಪ್ರಕಟಿಸಿದೆ.
ಬರ ಪರಿಸ್ಥಿತಿ ಎದುರಿಸಲು ಸರ್ಕಾರ ಪ್ರಕಟಿಸಿದ ಪ್ರಮುಖ ಕ್ರಮಗಳು:
- ಕಂದಾಯ ಮತ್ತು ಸಾಲ ವಿನಾಯಿತಿ: ಭೂ ಕಂದಾಯ ಪಾವತಿಯಿಂದ ಸಂಪೂರ್ಣ ವಿನಾಯಿತಿ, ಬೆಳೆ ಸಾಲಗಳ ಪುನಾರಚನೆ ಹಾಗೂ ಕೃಷಿ ಸಂಬಂಧಿತ ಸಾಲಗಳ ವಸೂಲಾತಿಗೆ ತಡೆ ನೀಡಲಾಗಿದೆ.
- ಉಚಿತ ವಿದ್ಯುತ್ ಹಾಗೂ ರಿಯಾಯಿತಿ: ಕೃಷಿ ಪಂಪ್ಸೆಟ್ಗಳ ಬಾಕಿ ವಿದ್ಯುತ್ ಬಿಲ್ನಲ್ಲಿ ರಿಯಾಯಿತಿ ನೀಡಲಾಗಿದೆ. ಈಗಾಗಲೇ 7.5 ಅಶ್ವಶಕ್ತಿ (HP) ಸಾಮರ್ಥ್ಯದ ಪಂಪ್ಗಳಿಗೆ ವಿದ್ಯುತ್ ಬಿಲ್ ವಿನಾಯಿತಿ ಇದ್ದು, ಇನ್ಮುಂದೆ ಹೆಚ್ಚಿನ ಸಾಮರ್ಥ್ಯದ ಪಂಪ್ಗಳಿಗೂ ಈ ವಿನಾಯಿತಿ ವಿಸ್ತರಿಸಲಾಗುವುದು. ಅಲ್ಲದೆ ಬರಪೀಡಿತ ಗ್ರಾಮಗಳ ಕೃಷಿ ಪಂಪ್ಸೆಟ್ಗಳ ವಿದ್ಯುತ್ ಸಂಪರ್ಕ ಕಡಿತಗೊಳಿಸುವುದಿಲ್ಲ.
- ಶೈಕ್ಷಣಿಕ ಹಾಗೂ ಉದ್ಯೋಗ ನೆರವು: ಶಾಲಾ-ಕಾಲೇಜು ವಿದ್ಯಾರ್ಥಿಗಳ ಪರೀಕ್ಷಾ ಶುಲ್ಕದಲ್ಲಿ ರಿಯಾಯಿತಿ ನೀಡಲಾಗಿದ್ದು, ಉದ್ಯೋಗ ಖಾತ್ರಿ ಯೋಜನೆಯ ನಿಯಮ ಸಡಿಲಗೊಳಿಸಿ ಹೆಚ್ಚಿನ ಉದ್ಯೋಗಾವಕಾಶ ಸೃಷ್ಟಿಸಲು ಸೂಚಿಸಲಾಗಿದೆ.
- ಕುಡಿಯುವ ನೀರು ಮತ್ತು ಮೇವು ಪೂರೈಕೆ: ಅಗತ್ಯವಿರುವ ಪ್ರದೇಶಗಳಿಗೆ ಕುಡಿಯುವ ನೀರಿನ ಟ್ಯಾಂಕರ್ ವ್ಯವಸ್ಥೆ ಮಾಡಲಾಗುವುದು. ಜಾನುವಾರುಗಳಿಗೆ ನೀರಿನ ಸೌಲಭ್ಯ ಹಾಗೂ ರೈತರು ಮತ್ತು ಕೃಷಿ ಕಾರ್ಮಿಕರಿಗೆ ಪಶು ಮೇವು ಒದಗಿಸಲಾಗುತ್ತದೆ.
- ಪಂಚನಾಮೆ ಮತ್ತು ನೀರು ಸಂರಕ್ಷಣೆ: ಬೃಹತ್ ಪ್ರಮಾಣದಲ್ಲಿ ನೀರು ಸಂರಕ್ಷಣಾ ಕಾಮಗಾರಿಗಳನ್ನು ಕೈಗೊಳ್ಳಲು ನಿರ್ಧರಿಸಲಾಗಿದೆ. ಎಲ್ಲಾ ಜಿಲ್ಲಾಧಿಕಾರಿಗಳಿಗೆ ಬೆಳೆ ಹಾನಿ ಪಂಚನಾಮೆ ಪ್ರಕ್ರಿಯೆ ತಕ್ಷಣ ಪೂರ್ಣಗೊಳಿಸಲು, ಬೆಳೆ ಪರಿಸ್ಥಿತಿಯ ಛಾಯಾಚಿತ್ರ ಹಾಗೂ GPS ಮಾಹಿತಿ ಸಂಗ್ರಹಿಸಲು ಆದೇಶಿಸಲಾಗಿದೆ.

