ಲಕ್ನೋ: ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ ವಿವಾದದ ನಡುವೆಯೇ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕಾಂಗ್ರೆಸ್ ಹಾಗೂ ಇತರ ಪ್ರತಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಕಾಂಗ್ರೆಸ್ ಮತ್ತು ಪ್ರತಿಪಕ್ಷಗಳು ದೇಶದ ಸಾಂವಿಧಾನಿಕ ಸಂಸ್ಥೆಗಳನ್ನು ದುರ್ಬಲಗೊಳಿಸಲು ಪ್ರಯತ್ನಿಸುತ್ತಿವೆ ಎಂದು ಯೋಗಿ ಆರೋಪಿಸಿದ್ದಾರೆ. SIR ಪ್ರಕ್ರಿಯೆ ಕುರಿತು ಪ್ರತಿಪಕ್ಷಗಳು ಅನಗತ್ಯ ಗೊಂದಲ ಸೃಷ್ಟಿಸುತ್ತಿವೆ. ದೇಶದಲ್ಲಿ ಈ ಹಿಂದೆ ಕೂಡ ಹಲವು ಬಾರಿ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ನಡೆದಿತ್ತು. 1952, 1957, 1961, 1965–66 ಹಾಗೂ 2003ರಲ್ಲಿ ಇಂತಹ ಪ್ರಕ್ರಿಯೆಗಳು ನಡೆದಿದ್ದು, ಅವುಗಳಲ್ಲಿ ಹಲವು ಸಂದರ್ಭಗಳಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರಗಳು ಅಧಿಕಾರದಲ್ಲಿದ್ದವು ಎಂದು ಅವರು ಹೇಳಿದ್ದಾರೆ.
ಎಸ್‌ಐಆರ್ ಪ್ರಕ್ರಿಯೆ ಕುರಿತು ಕಾಂಗ್ರೆಸ್, ಸಮಾಜವಾದಿ ಪಕ್ಷ, ಆರ್‌ಜೆಡಿ ಸೇರಿದಂತೆ ಇತರ ಪಕ್ಷಗಳು ನಡೆಸುತ್ತಿರುವ ಗದ್ದಲ ಅತ್ಯಂತ ದುರದೃಷ್ಟಕರ. ವಿಪಕ್ಷಗಳು ತಮ್ಮ ಭ್ರಷ್ಟ ಕಾರ್ಯವೈಖರಿ ಮತ್ತು ಆರ್ಥಿಕ ಅಕ್ರಮಗಳಿಂದಾಗಿ ದೇಶದ ಆಂತರಿಕ ಹಾಗೂ ಬಾಹ್ಯ ಭದ್ರತೆ ವಿಚಾರದಲ್ಲಿ ಹಲವು ಬಾರಿ ರಾಜಿ ಮಾಡಿಕೊಂಡಿವೆ ಎಂದು ವಾಗ್ದಾಳಿ ನಡೆಸಿದರು.
ಬಾಲಾಕೋಟ್ ವಾಯುದಾಳಿ ಹಾಗೂ ಭಾರತೀಯ ಸೇನೆಯ ಶೌರ್ಯವನ್ನು ಪ್ರಶ್ನಿಸುವುದು, ಆಪರೇಷನ್ ಸಿಂಧೂರ ದಲ್ಲಿ ಭಾರತೀಯ ಸೈನಿಕರು ಪ್ರದರ್ಶಿಸಿದ ಧೈರ್ಯ ಮತ್ತು ಸಾಹಸದ ಬಗ್ಗೆ ದುರುದ್ದೇಶಪೂರ್ವಕವಾಗಿ ಅನುಮಾನ ಮೂಡಿಸುವ ಪ್ರಯತ್ನ ಮಾಡುವುದು, ಇದು ಯಾವ ರೀತಿಯ ದೇಶಭಕ್ತಿ? ಕಾಂಗ್ರೆಸ್ ಹಾಗೂ ಅದರ ಮಿತ್ರಪಕ್ಷಗಳು ಈಗಲೂ ಇದೇ ರೀತಿಯ ಬೇಜವಾಬ್ದಾರಿಯುತ ನಡೆಗಳನ್ನ ಮುಂದುವರಿಸುತ್ತಿವೆ ಎಂದರು.

