ಚಿಕ್ಕಮಗಳೂರು: ಚುಕ್ಕಿ ಜಿಂಕೆಯನ್ನು ಬೇಟೆಯಾಡಿ ಮಾಂಸ ಮಾಡಿ ಅಡುಗೆ ಮಾಡುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಆರೋಪಿಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ್ದಾರೆ.

ಚಿಕ್ಕಮಗಳೂರು ತಾಲೂಕಿನ ದೇವದಾನ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಪರಮೇಶ್ವರ್ ಗೌಡ ಬಂಧಿತ ಆರೋಪಿ. ಇನ್ನು ಕವೀಶ್, ಪೃಥ್ವಿ ರಾಜ್ ಹಾಗೂ ವಿನಯ್ ಎಂಬ ಮೂವರು ಆರೋಪಿಗಳು ಪರಾರಿಯಾಗಿದ್ದು, ಅವರಿಗಾಗಿ ಅರಣ್ಯ ಇಲಾಖೆ ಅಧಿಕಾರಿಗಳು ಶೋಧ ಕಾರ್ಯ ಮುಂದುವರಿಸಿದ್ದಾರೆ.
ಆರೋಪಿಗಳು ನಾಲ್ವರೂ ಸೇರಿ ಉರುಳು ಹಾಕಿ ಚುಕ್ಕಿ ಜಿಂಕೆಯನ್ನು ಬೇಟೆಯಾಡಿದ್ದರು. ಬಳಿಕ ಜಿಂಕೆಯನ್ನು ಕತ್ತರಿಸಿ ಮಾಂಸವನ್ನು ಎರಡು ಮನೆಗಳಲ್ಲಿ ಹಂಚಿಕೊಂಡು ಅಡುಗೆ ಮಾಡಿದ್ದರು. ಈ ಬಗ್ಗೆ ಸ್ಥಳೀಯರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ತಕ್ಷಣ ಕಾರ್ಯಾಚರಣೆ ನಡೆಸಿದ ಅಧಿಕಾರಿಗಳು ಓರ್ವ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
10 ಅಡಿ ಆಳದಲ್ಲಿ ಮುಚ್ಚಿಟ್ಟಿದ್ದ ಅವಶೇಷ ಪತ್ತೆ:
ಜಿಂಕೆಯನ್ನು ಬೇಟೆಯಾಡಿದ ಬಳಿಕ ಅದರ ಅವಶೇಷಗಳನ್ನು ಸುಮಾರು 10 ಅಡಿ ಆಳದಲ್ಲಿ ಹೂತುಹಾಕಲಾಗಿತ್ತು. ಅರಣ್ಯ ಇಲಾಖೆಯ ಶ್ವಾನದಳದ ರೋಜ್ಹಿ, ಮಣ್ಣಿನಲ್ಲಿ ಮುಚ್ಚಿಟ್ಟಿದ್ದ ಅವಶೇಷಗಳನ್ನು ಪತ್ತೆಹಚ್ಚಿದೆ. ಅಲ್ಲದೆ, ಜಿಂಕೆ ಮಾಂಸವನ್ನು ಎರಡು ಮನೆಗಳಲ್ಲಿ ಹಂಚಿಕೊಂಡು ಅಡುಗೆ ಮಾಡಿರುವುದನ್ನೂ ಪತ್ತೆಹಚ್ಚಲು ಶ್ವಾನ ಸಹಾಯ ಮಾಡಿದೆ.
ಈ ಸಂಬಂಧ ಬಾಳೆಹೊನ್ನೂರು ವಲಯ ಅರಣ್ಯ ಕಚೇರಿಯಲ್ಲಿ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಪರಾರಿಯಾಗಿರುವ ಉಳಿದ ಮೂವರು ಆರೋಪಿಗಳ ಪತ್ತೆಗೆ ಅರಣ್ಯ ಇಲಾಖೆ ಅಧಿಕಾರಿಗಳು ಬಲೆ ಬೀಸಿದ್ದಾರೆ.









