ಬೆಂಗಳೂರು: ಬಹುನಿರೀಕ್ಷಿತ ಪಿಂಕ್ ಮೆಟ್ರೋಗೆ ಇಂದು ಮೊದಲ ದಿನದ ಸಂಭ್ರಮ.

ಸಾರ್ವಜನಿಕರ ಪ್ರಯಾಣಕ್ಕೆ ಮುಕ್ತವಾದ ನಮ್ಮ ಮೆಟ್ರೋ ಪಿಂಕ್ ಲೈನ್ನಲ್ಲಿ ಬೆಳಗ್ಗೆಯಿಂದಲೇ ಪ್ರಯಾಣಿಕರ ಸಂಚಾರ ಆರಂಭವಾಗಿದೆ. ಇನ್ನು ಮೊದಲ ದಿನದ ಪ್ರಯಾಣಿಕರಿಗೆ ಸಚಿವ ಕೃಷ್ಣ ಬೈರೇಗೌಡ ಗುಲಾಬಿ ಹೂಗಳನ್ನು ನೀಡಿ ವಿಶೇಷವಾಗಿ ಸ್ವಾಗತಿಸಿದ್ದಾರೆ.
ನಿನ್ನೆ ಪ್ರಧಾನಿ ನರೇಂದ್ರ ಮೋದಿ ಅವರು ಪಿಂಕ್ ಲೈನ್ಗೆ ಹಸಿರು ನಿಶಾನೆ ತೋರಿಸಿದ್ದರು. ಇಂದು ಬೆಳಗ್ಗೆಯಿಂದಲೇ ಸಾರ್ವಜನಿಕರ ಬಳಕೆಗೆ ಮುಕ್ತವಾಗಿರುವ ಹಿನ್ನೆಲೆಯಲ್ಲಿ ಸಚಿವ ಕೃಷ್ಣ ಬೈರೇಗೌಡ ಅವರು ಸುದ್ದುಗುಂಟೆಪಾಳ್ಯ ಮೆಟ್ರೋ ನಿಲ್ದಾಣಕ್ಕೆ ಭೇಟಿ ನೀಡಿದರು.
ಈ ವೇಳೆ ಮೆಟ್ರೋದಲ್ಲಿ ಮೊದಲ ಪ್ರಯಾಣ ಆರಂಭಿಸುತ್ತಿದ್ದ ಪ್ರಯಾಣಿಕರಿಗೆ ಗುಲಾಬಿ ಹೂಗಳನ್ನು ವಿತರಿಸಿ ಶುಭ ಕೋರಿದರು. ಬಳಿಕ ತಾವೂ ಮೆಟ್ರೋ ಏರಿ ಪ್ರಯಾಣಿಸಿದರು. ಪ್ರಯಾಣದ ವೇಳೆ ಪ್ರಯಾಣಿಕರೊಂದಿಗೆ ಆತ್ಮೀಯವಾಗಿ ಮಾತನಾಡಿದರು. ಸಚಿವರೊಂದಿಗೆ ಸೆಲ್ಫಿ ಹಾಗೂ ಫೋಟೋ ತೆಗೆಸಿಕೊಳ್ಳಲು ಪ್ರಯಾಣಿಕರು ಕೂಡ ಮುಗಿಬಿದ್ದ ದೃಶ್ಯ ಕಂಡುಬಂತು.
ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಲೋಕಾರ್ಪಣೆಗೊಳಿಸಿದ್ದ ನಮ್ಮ ಮೆಟ್ರೋ ಪಿಂಕ್ ಲೈನ್ ಮಾರ್ಗ ಇಂದಿನಿಂದ ಸಾರ್ವಜನಿಕ ಸಂಚಾರಕ್ಕೆ ಮುಕ್ತವಾಗಿದೆ. ಕಾಳೇನ ಅಗ್ರಹಾರದಿಂದ ಎಸ್.ಜಿ. ಪಾಳ್ಯ (ಸುದ್ದುಗುಂಟೆಪಾಳ್ಯ)ವರೆಗಿನ ಹೊಸ ಮೆಟ್ರೋ ಮಾರ್ಗದಲ್ಲಿ ಶನಿವಾರ ಬೆಳಗ್ಗೆಯಿಂದಲೇ ವಾಣಿಜ್ಯ ಸಂಚಾರ ಆರಂಭವಾಗಿದೆ.
ಪಿಂಕ್ ಲೈನ್ ಮೆಟ್ರೋ ರೈಲು ಸಂಚಾರದ ಸಮಯ ಹೇಗಿದೆ?
- ಸೋಮವಾರ ಕಾಳೇನ ಅಗ್ರಹಾರದಿಂದ ಮೊದಲ ರೈಲು ಬೆಳಗ್ಗೆ 4.55 ಗಂಟೆಗೆ ಹೊರಡಲಿದೆ.
- ಎಸ್.ಜಿ. ಪಾಳ್ಯ ಮೆಟ್ರೋ ನಿಲ್ದಾಣದಿಂದ ಮೊದಲ ರೈಲು ಬೆಳಗ್ಗೆ 5.00 ಗಂಟೆಗೆ ಹೊರಡಲಿದೆ.
ಮಂಗಳವಾರದಿಂದ ಶನಿವಾರದವರೆಗೆ ಪಿಂಕ್ ಲೈನ್ ಮೆಟ್ರೋ ಟೈಮಿಂಗ್ಸ್:
- ಎರಡೂ ಟರ್ಮಿನಲ್ ನಿಲ್ದಾಣಗಳಿಂದ ಮೊದಲ ರೈಲು ಬೆಳಗ್ಗೆ 6.00 ಗಂಟೆಗೆ ಹೊರಡಲಿದೆ.
ಭಾನುವಾರದ ಪಿಂಕ್ ಲೈನ್ ಮೆಟ್ರೋ ಟೈಮಿಂಗ್ಸ್:
- ಎರಡೂ ಟರ್ಮಿನಲ್ ನಿಲ್ದಾಣಗಳಿಂದ ಮೊದಲ ರೈಲು ಬೆಳಗ್ಗೆ 7.00 ಗಂಟೆಗೆ ಹೊರಡಲಿದೆ.
- ಕೊನೆಯ ರೈಲು ಕಾಳೇನ ಅಗ್ರಹಾರದಿಂದ: ರಾತ್ರಿ 10.50 ಗಂಟೆಗೆ ಹೊರಡಲಿದೆ.
- ಎಸ್.ಜಿ. ಪಾಳ್ಯ (ಸುದ್ದುಗುಂಟೆಪಾಳ್ಯ)ದಿಂದ ರಾತ್ರಿ 10.54 ಗಂಟೆಗೆ ಹೊರಡಲಿದೆ.
ಎಷ್ಟು ನಿಮಿಷಕ್ಕೊಮ್ಮೆ ಪಿಂಕ್ ಲೈನ್ ಮೆಟ್ರೋ?
ಪಿಂಕ್ ಲೈನ್ನಲ್ಲಿ ಪ್ರಯಾಣಿಕರ ದಟ್ಟಣೆ ಹೆಚ್ಚಿರುವ ಪೀಕ್ ಅವರ್ಗಳಲ್ಲಿ ಪ್ರತಿ 8 ನಿಮಿಷಕ್ಕೊಮ್ಮೆ ರೈಲು ಸಂಚರಿಸಲಿದೆ. ಇತರೆ ಸಮಯದಲ್ಲಿ ಕಾಳೇನ ಅಗ್ರಹಾರ ಮತ್ತು ಎಸ್.ಜಿ. ಪಾಳ್ಯ ನಡುವಿನ ಮಾರ್ಗದಲ್ಲಿ ಪ್ರತಿ 10 ನಿಮಿಷಕ್ಕೊಮ್ಮೆ ರೈಲು ಸೇವೆ ಲಭ್ಯವಿರಲಿದೆ. ಶನಿವಾರ ಮತ್ತು ಭಾನುವಾರ ರೈಲುಗಳು ಪ್ರತಿ 10 ನಿಮಿಷಕ್ಕೊಮ್ಮೆ ಸಂಚರಿಸಲಿವೆ.
ಎಲ್ಲಿಂದ ಎಲ್ಲಿಗೆ ಎಷ್ಟು ಟಿಕೆಟ್ ದರ?
- ಎಸ್.ಜಿ. ಪಾಳ್ಯ – ಕಾಳೇನ ಅಗ್ರಹಾರ: ₹30
- ಎಸ್.ಜಿ. ಪಾಳ್ಯ – ಹುಳಿಮಾವು: ₹20
- ಎಸ್.ಜಿ. ಪಾಳ್ಯ – ಐಐಎಂಬಿ (ಬಿಳೇಕಹಳ್ಳಿ): ₹20
- ಎಸ್.ಜಿ. ಪಾಳ್ಯ – ಎನ್.ಎಸ್. ಪಾಳ್ಯ-ಜೆ.ಪಿ. ನಗರ 4ನೇ ಹಂತ: ₹10









