ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ: ಗ್ರಾಮೀಣ ಪ್ರದೇಶದ ಅರ್ಹ ಕುಟುಂಬಗಳಿಗೆ ಉದ್ಯೋಗಾವಕಾಶ ಕಲ್ಪಿಸುವ ಉದ್ದೇಶದಿಂದ ವಿಕಸಿತ ಭಾರತ–GRAM G ಯೋಜನೆಯಡಿ ಆ.15ರಿಂದ ಶಿರಹಟ್ಟಿ ತಾಲೂಕಿನ ಎಲ್ಲ ಗ್ರಾಮ ಪಂಚಾಯಿತಿಗಳಲ್ಲಿ ಜಾಬ್ ಕಾರ್ಡ್ ಮೇಳ ಹಾಗೂ ವಿಶೇಷ ಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಗುತ್ತಿದೆ ಎಂದು ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ರಾಮಣ್ಣ ದೊಡ್ಡಮನಿ ತಿಳಿಸಿದ್ದಾರೆ.
ಉದ್ಯೋಗ ಬಯಸುವ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಅಲ್ಪಸಂಖ್ಯಾತರು, ವಿಶೇಷ ಚೇತನರು, ಮಹಿಳಾ ನೇತೃತ್ವದ ಕುಟುಂಬಗಳು, ಭೂರಹಿತ ಕೂಲಿ ಕಾರ್ಮಿಕರು ಸೇರಿದಂತೆ ಅರ್ಹ ಗ್ರಾಮೀಣ ಕುಟುಂಬಗಳಿಗೆ ತ್ವರಿತವಾಗಿ ಜಾಬ್ ಕಾರ್ಡ್ ಒದಗಿಸುವುದು ಅಭಿಯಾನದ ಉದ್ದೇಶವಾಗಿದೆ. ಈ ಮೂಲಕ ಹೆಚ್ಚಿನ ಸಂಖ್ಯೆಯಲ್ಲಿ ಮಾನವ ದಿನಗಳ ಸೃಷ್ಟಿಗೂ ಆದ್ಯತೆ ನೀಡಲಾಗುತ್ತಿದೆ ಎಂದರು.
ಜಾಬ್ ಕಾರ್ಡ್, ಇ-ಕೆವೈಸಿಗೆ ಆದ್ಯತೆ
ಈಗಾಗಲೇ ಜಾಬ್ ಕಾರ್ಡ್ ಹೊಂದಿರುವ ಕುಟುಂಬಗಳ ಮಾಹಿತಿಯನ್ನು ಪರಿಶೀಲಿಸುವುದು, ಅಗತ್ಯವಿರುವವರಿಗೆ ಹೊಸ ಜಾಬ್ ಕಾರ್ಡ್ ನೀಡುವುದು, ನವೀಕರಣ, e-KYC ಪೂರ್ಣಗೊಳಿಸುವುದು ಹಾಗೂ ಉದ್ಯೋಗದ ಬೇಡಿಕೆ ಸ್ವೀಕರಿಸುವ ಕಾರ್ಯ ನಡೆಯಲಿದೆ. ಉದ್ಯೋಗಕ್ಕೆ ಅರ್ಜಿ ಸಲ್ಲಿಸುವ ಕುಟುಂಬಗಳಿಗೆ ನಿಯಮಾನುಸಾರ ಸ್ವೀಕೃತಿ ನೀಡಲು ಗ್ರಾಮ ಪಂಚಾಯಿತಿಗಳಲ್ಲಿ ವ್ಯವಸ್ಥೆ ಮಾಡಲಾಗುತ್ತಿದೆ.
ಮನೆ–ಮನೆ ಭೇಟಿ, ಗ್ರಾಮಸಭೆ, ಪೋಸ್ಟರ್ ಹಾಗೂ ಬ್ಯಾನರ್‌ಗಳ ಮೂಲಕ ಯೋಜನೆಯ ಕುರಿತು ಜಾಗೃತಿ ಮೂಡಿಸಲಾಗುವುದು. ಗ್ರಾಮೀಣ ಜನರು ಅಗತ್ಯ ದಾಖಲೆಗಳೊಂದಿಗೆ ತಮ್ಮ ಗ್ರಾಮ ಪಂಚಾಯಿತಿಯನ್ನು ಸಂಪರ್ಕಿಸಿ ಯೋಜನೆಯ ಸದುಪಯೋಗ ಪಡೆಯಬೇಕು ಎಂದು ಅವರು ಮನವಿ ಮಾಡಿದ್ದಾರೆ.
“ಉದ್ಯೋಗದ ಅವಕಾಶವನ್ನು ಅರ್ಹ ಕುಟುಂಬಗಳ ಮನೆಬಾಗಿಲಿಗೆ ತಲುಪಿಸುವುದು ನಮ್ಮ ಮುಖ್ಯ ಉದ್ದೇಶ. ಜಾಬ್ ಕಾರ್ಡ್, e-KYC ಹಾಗೂ ಉದ್ಯೋಗದ ಬೇಡಿಕೆ ಸಲ್ಲಿಕೆ ಕುರಿತು ಮಾಹಿತಿ ಅಗತ್ಯವಿದ್ದರೆ ಸಾರ್ವಜನಿಕರು ತಮ್ಮ ಗ್ರಾಮ ಪಂಚಾಯಿತಿಯನ್ನು ಸಂಪರ್ಕಿಸಬೇಕು. ಯೋಜನೆಯ ಅನುಷ್ಠಾನದಲ್ಲಿ ಜನರ ಸಹಕಾರ ಅತ್ಯಂತ ಮುಖ್ಯ.”
— ರಾಮಣ್ಣ ದೊಡ್ಡಮನಿ, ಇಒ, ತಾಪಂ ಶಿರಹಟ್ಟಿ



