ಚಿತ್ರದುರ್ಗ: ತಾಲೂಕಿನ ಪಿಳ್ಳೇಕೇರನಹಳ್ಳಿಯಲ್ಲಿ ಕ್ಷುಲ್ಲಕ ಕಾರಣಕ್ಕೆ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದಿರುವ ಘಟನೆ ನಡೆದಿದೆ.
ಗಣಪತಿ ವಿಸರ್ಜನೆ ಮುಗಿಸಿ ವಾಪಸ್ ಬರುತ್ತಿದ್ದ ವೇಳೆ ಯುವಕರ ನಡುವೆ ಮಾತಿನ ಚಕಮಕಿ ಆರಂಭವಾಗಿದ್ದು, ಬಳಿಕ ವಾಗ್ವಾದ ವಿಕೋಪಕ್ಕೆ ತಿರುಗಿ ಗುಂಪು ಘರ್ಷಣೆ ನಡೆದಿದೆ.
ಗಣಪತಿಯನ್ನು ಏಕವಚನದಲ್ಲಿ ನಿಂದಿಸಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಯುವಕರ ನಡುವೆ ಮಾತಿನ ಚಕಮಕಿ ನಡೆದಿತ್ತು ಎನ್ನಲಾಗಿದೆ. ಬಳಿಕ ಎರಡೂ ಗುಂಪುಗಳ ನಡುವೆ ಗಲಾಟೆ ತೀವ್ರಗೊಂಡಿದ್ದು, ಯುವಕರು ಪರಸ್ಪರ ಕೋಲು ಹಾಗೂ ದೊಣ್ಣೆಗಳಿಂದ ಹೊಡೆದಾಡಿಕೊಂಡಿದ್ದಾರೆ.
ಘಟನೆಯ ದೃಶ್ಯಗಳನ್ನು ಸ್ಥಳದಲ್ಲಿದ್ದವರು ಮೊಬೈಲ್‌ನಲ್ಲಿ ಸೆರೆಹಿಡಿದಿದ್ದು, ಇದೀಗ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಘಟನೆ ಸಂಬಂಧ ಚಿತ್ರದುರ್ಗ ಬಡಾವಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.



