ಬೆಂಗಳೂರು: ನೆಲಮಂಗಲ ತಾಲೂಕಿನ ಶಿವಗಂಗೆ ಬೆಟ್ಟದಲ್ಲಿ ಟ್ರೆಕ್ಕಿಂಗ್ಗೆ ತೆರಳಿ ನಾಪತ್ತೆಯಾಗಿದ್ದ ಟೆಕ್ಕಿ ಅದ್ವೈತ್ ಉಪಾಧ್ಯಾಯನಿಗಾಗಿ ಕಳೆದ ಆರು ದಿನಗಳಿಂದ ನಡೆಯುತ್ತಿದ್ದ ತೀವ್ರ ಶೋಧ ಕಾರ್ಯಾಚರಣೆಗೆ ಸದ್ಯಕ್ಕೆ ಬ್ರೇಕ್ ಬಿದ್ದಿದೆ. ಬೆಟ್ಟ, ಕಂದಕ ಹಾಗೂ ಅರಣ್ಯ ಪ್ರದೇಶಗಳಲ್ಲಿ ವ್ಯಾಪಕವಾಗಿ ಹುಡುಕಾಟ ನಡೆಸಿದರೂ ಅದ್ವೈತ್ನ ಯಾವುದೇ ಸುಳಿವು ಪತ್ತೆಯಾಗಿಲ್ಲ.
ಎನ್ಡಿಆರ್ಎಫ್ ಸಿಬ್ಬಂದಿ, ನೆಲಮಂಗಲ ಟೌನ್ ಹಾಗೂ ಡಾಬಸ್ಪೇಟೆ ಪೊಲೀಸರು, ಅರಣ್ಯ ಇಲಾಖೆ ಸಿಬ್ಬಂದಿ, ಚಿತ್ರದುರ್ಗದ ಸಾಹಸಿ ಜ್ಯೋತಿರಾಜ್ ಮತ್ತು ಸ್ಥಳೀಯರು ಜಂಟಿಯಾಗಿ ಶೋಧ ಕಾರ್ಯಾಚರಣೆ ನಡೆಸಿದ್ದರು. ಅಪಾಯಕಾರಿ ಪ್ರದೇಶಗಳಲ್ಲೂ ತಂಡಗಳು ಪರಿಶೀಲನೆ ನಡೆಸಿದರೂ ನಾಪತ್ತೆಯಾಗಿರುವ ಟೆಕ್ಕಿಯ ಕುರಿತು ಯಾವುದೇ ಮಾಹಿತಿ ಲಭ್ಯವಾಗಿಲ್ಲ.
ಹೀಗಾಗಿ ಶಿವಗಂಗೆ ಬೆಟ್ಟದಲ್ಲಿ ನಡೆಯುತ್ತಿದ್ದ ಶೋಧ ಕಾರ್ಯಾಚರಣೆಯನ್ನು ಸದ್ಯಕ್ಕೆ ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದೆ. ಇದರೊಂದಿಗೆ ಪ್ರಕರಣದ ಮುಂದಿನ ತನಿಖೆ ಇದೀಗ ಮತ್ತಷ್ಟು ಕುತೂಹಲ ಮೂಡಿಸಿದೆ.
ಕಾಡುಗೋಡಿ ಪೊಲೀಸರಿಗೆ ಪ್ರಕರಣ ವರ್ಗಾವಣೆ
ಈ ನಡುವೆ ಡಾಬಸ್ಪೇಟೆ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದ ಮಾಹಿತಿಯನ್ನು ಕಾಡುಗೋಡಿ ಪೊಲೀಸರಿಗೆ ರವಾನಿಸಿದ್ದಾರೆ. ಮುಂದಿನ ತನಿಖೆಯನ್ನು ಕಾಡುಗೋಡಿ ಪೊಲೀಸರು ಕೈಗೆತ್ತಿಕೊಳ್ಳಲಿದ್ದು, ಅದ್ವೈತ್ನ ನಾಪತ್ತೆಯ ಹಿಂದಿನ ಕಾರಣದ ಕುರಿತು ವಿವಿಧ ಆಯಾಮಗಳಲ್ಲಿ ಪರಿಶೀಲನೆ ನಡೆಸುತ್ತಿದ್ದಾರೆ.
ಪ್ರಕರಣದಲ್ಲಿ ಇದೀಗ ಹೊಸ ಅನುಮಾನವೂ ಮೂಡಿದೆ. ಪ್ರೇಯಸಿಯನ್ನು ಹೆದರಿಸುವ ಉದ್ದೇಶದಿಂದ ಅಥವಾ ಬೇರೆ ಯಾವುದಾದರೂ ಕಾರಣಕ್ಕಾಗಿ ಅದ್ವೈತ್ ಉದ್ದೇಶಪೂರ್ವಕವಾಗಿ ನಾಪತ್ತೆಯಾಗಿದ್ದಾನೆಯೇ ಎಂಬ ಶಂಕೆಯನ್ನೂ ಪೊಲೀಸರು ಪರಿಶೀಲಿಸುತ್ತಿದ್ದಾರೆ.
ಈ ಹಿನ್ನೆಲೆಯಲ್ಲಿ ಕಾಡುಗೋಡಿ ಪೊಲೀಸರು ಅದ್ವೈತ್ನ ವೈಯಕ್ತಿಕ ಹಿನ್ನೆಲೆ, ನಾಪತ್ತೆಯಾಗುವ ಮುನ್ನದ ಚಟುವಟಿಕೆಗಳು, ಕೊನೆಯದಾಗಿ ಆತ ಸಂಪರ್ಕದಲ್ಲಿದ್ದವರು ಹಾಗೂ ನಾಪತ್ತೆಯಾದ ಸಂದರ್ಭದ ಕುರಿತು ಹೆಚ್ಚಿನ ಮಾಹಿತಿ ಕಲೆಹಾಕುತ್ತಿದ್ದಾರೆ.
ಆರು ದಿನಗಳ ನಿರಂತರ ಶೋಧದ ಬಳಿಕವೂ ಯಾವುದೇ ಸುಳಿವು ಸಿಗದಿರುವುದು ಪ್ರಕರಣದ ತನಿಖೆಯನ್ನು ಮತ್ತಷ್ಟು ಸಂಕೀರ್ಣಗೊಳಿಸಿದೆ. ಇದೀಗ ಕಾಡುಗೋಡಿ ಪೊಲೀಸರ ತನಿಖೆಯಲ್ಲಿ ಅದ್ವೈತ್ ನಾಪತ್ತೆ ಪ್ರಕರಣಕ್ಕೆ ಯಾವ ತಿರುವು ಸಿಗಲಿದೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.



