ಬೆಳಗಾವಿ: ಗಣಪತಿ ವಿಸರ್ಜನೆ ವೇಳೆ ಕೆರೆಯಲ್ಲಿ ಮುಳುಗಿ 20 ವರ್ಷದ ಯುವಕ ಮೃತಪಟ್ಟಿರುವ ದಾರುಣ ಘಟನೆ ಬೆಳಗಾವಿ ತಾಲೂಕಿನ ಮಚ್ಛೆ ಗ್ರಾಮದಲ್ಲಿ ನಡೆದಿದೆ. ವಿಶ್ವೇಶ್ ನಾಯಕ್ (20) ಮೃತ ಯುವಕ ಎಂದು ಗುರುತಿಸಲಾಗಿದೆ.
ವಿಶ್ವೇಶ್ ತಮ್ಮ ಸ್ನೇಹಿತರೊಂದಿಗೆ ಗಣಪತಿ ವಿಸರ್ಜನೆಗಾಗಿ ಕೆರೆಯ ಬಳಿ ತೆರಳಿದ್ದರು. ಗಣಪತಿ ಮೂರ್ತಿಯನ್ನು ವಿಸರ್ಜನೆ ಮಾಡಿದ ಬಳಿಕ ವಾಪಸ್ ಬರುವ ಸಂದರ್ಭದಲ್ಲಿ ವಿಶ್ವೇಶ್ ನೀರಿನಲ್ಲಿ ಮುಳುಗಿದ್ದು, ಸ್ನೇಹಿತರ ಕಣ್ಣೆದುರೇ ಈ ದುರ್ಘಟನೆ ಸಂಭವಿಸಿದೆ.
ವಿಶ್ವೇಶ್ ಕೆರೆಯಲ್ಲಿ ಮುಳುಗುತ್ತಿರುವ ದೃಶ್ಯ ಅಲ್ಲಿದ್ದವರ ಮೊಬೈಲ್‌ನಲ್ಲಿ ಸೆರೆಯಾಗಿದೆ. ಸ್ನೇಹಿತರ ಜೊತೆ ಸಂಭ್ರಮದಿಂದ ಗಣಪತಿ ವಿಸರ್ಜನೆಗೆ ತೆರಳಿದ್ದ ಯುವಕ ಕೆಲವೇ ಕ್ಷಣಗಳಲ್ಲಿ ಪ್ರಾಣ ಕಳೆದುಕೊಂಡಿರುವುದು ಕುಟುಂಬಸ್ಥರು ಹಾಗೂ ಸ್ನೇಹಿತರನ್ನು ಆಘಾತಕ್ಕೀಡು ಮಾಡಿದೆ.
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆಯೇ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದಾರೆ. ಬಳಿಕ ಕೆರೆಯಲ್ಲಿ ಶೋಧ ಕಾರ್ಯಾಚರಣೆ ನಡೆಸಿ ವಿಶ್ವೇಶ್ ಅವರ ಮೃತದೇಹವನ್ನು ಹೊರತೆಗೆದಿದ್ದಾರೆ.
ಯುವಕನ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ. 20 ವರ್ಷದ ಮಗನನ್ನು ಕಳೆದುಕೊಂಡ ಕುಟುಂಬ ದುಃಖದಲ್ಲಿ ಮುಳುಗಿದೆ. ಘಟನೆ ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.



