ಬೆಂಗಳೂರು, ಆ.15: ದೇಶದ 80ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ರಾಜಧಾನಿ ಬೆಂಗಳೂರಿನ ವಿಧಾನಸೌಧದ ಮುಂಭಾಗದಲ್ಲಿ ಇಂದು ಅದ್ಧೂರಿ ‘ಫ್ರೀಡಂ ಹಬ್ಬ’ ಆಯೋಜಿಸಲಾಗಿದೆ. ಮಧ್ಯಾಹ್ನ 12 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ಸತತ 10 ಗಂಟೆಗಳ ಕಾಲ ನಡೆಯಲಿರುವ ಕಾರ್ಯಕ್ರಮದಲ್ಲಿ ಮಕ್ಕಳ ಸಾಂಸ್ಕೃತಿಕ ಪ್ರದರ್ಶನ, ಫ್ರೀಡಂ ಪರೇಡ್ ಹಾಗೂ ಸಂಗೀತ-ನೃತ್ಯ ಕಾರ್ಯಕ್ರಮಗಳು ಪ್ರಮುಖ ಆಕರ್ಷಣೆಯಾಗಲಿವೆ.
ಮಧ್ಯಾಹ್ನ 12ರಿಂದ 3 ಗಂಟೆಯವರೆಗೆ ಶಾಲಾ ಮಕ್ಕಳಿಗಾಗಿ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ವಿವಿಧ ಪ್ರತಿಭೆಗಳನ್ನು ಪ್ರದರ್ಶಿಸುವ ಮೂಲಕ ಮಕ್ಕಳು ಸ್ವಾತಂತ್ರ್ಯೋತ್ಸವದ ಸಂಭ್ರಮಕ್ಕೆ ಮೆರುಗು ನೀಡಲಿದ್ದಾರೆ.
ಮಧ್ಯಾಹ್ನ 3ರಿಂದ ಸಂಜೆ 5.30ರವರೆಗೆ ವಿಧಾನಸೌಧ ಮತ್ತು ಹೈಕೋರ್ಟ್ ನಡುವಿನ ಅಂಬೇಡ್ಕರ್ ರಸ್ತೆಯಲ್ಲಿ ‘ಫ್ರೀಡಂ ಪರೇಡ್’ ನಡೆಯಲಿದೆ. ವಿಧಾನಸೌಧದ ಮುಂಭಾಗದ ಐಪಿಒ ಸರ್ಕಲ್, ಅಂದರೆ ಗೋಪಾಲಗೌಡ ಸರ್ಕಲ್ನಿಂದ ಆರಂಭವಾಗುವ ಮೆರವಣಿಗೆ ತಿಮ್ಮಯ್ಯ ವೃತ್ತದವರೆಗೆ ಸಾಗಲಿದೆ.
ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿರುವ 15 ತಂಡಗಳು ಹಾಗೂ ವಿವಿಧ ರಾಜ್ಯಗಳ 10 ಪ್ರಮುಖ ಕಲಾತಂಡಗಳು ಪರೇಡ್ನಲ್ಲಿ ಭಾಗವಹಿಸಿ ತಮ್ಮ ಸಾಂಪ್ರದಾಯಿಕ ಕಲೆಗಳನ್ನು ಪ್ರದರ್ಶಿಸಲಿವೆ.
ಸಂಜೆ 5.30ರಿಂದ ರಾತ್ರಿ 10 ಗಂಟೆಯವರೆಗೆ ವಿಧಾನಸೌಧದ ಮುಂಭಾಗದಲ್ಲಿರುವ ಬೃಹತ್ ವೇದಿಕೆಯಲ್ಲಿ ಸಂಗೀತ ರಸಸಂಜೆ ಹಾಗೂ ನೃತ್ಯ ಕಾರ್ಯಕ್ರಮಗಳು ನಡೆಯಲಿವೆ. ಖ್ಯಾತ ಗಾಯಕರಾದ ಎಂ.ಡಿ. ಪಲ್ಲವಿ, ಸಂಜಿತ್ ಹೆಗ್ಡೆ, ರಘು ದೀಕ್ಷಿತ್ ಸೇರಿದಂತೆ 20ಕ್ಕೂ ಹೆಚ್ಚು ಕಲಾವಿದರು ಸಂಗೀತ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಕಾರ್ಯಕ್ರಮಕ್ಕೆ ಮುಂಚಿತವಾಗಿ ನೋಂದಣಿ ಮಾಡಿಕೊಂಡವರಿಗೆ ಮಾತ್ರ ಪ್ರವೇಶ ಕಲ್ಪಿಸಲಾಗಿದೆ. ಈಗಾಗಲೇ 20 ಸಾವಿರಕ್ಕೂ ಅಧಿಕ ಮಂದಿ ಆನ್ಲೈನ್ ಮೂಲಕ ನೋಂದಣಿ ಮಾಡಿಕೊಂಡಿದ್ದಾರೆ.
‘ಫ್ರೀಡಂ ಹಬ್ಬ’ದ ಹಿನ್ನೆಲೆಯಲ್ಲಿ ಭದ್ರತೆಗೂ ವಿಶೇಷ ಒತ್ತು ನೀಡಲಾಗಿದೆ. ಡಿಸಿಪಿ ಹಾಗೂ ಎಸಿಪಿ ದರ್ಜೆಯ ಅಧಿಕಾರಿಗಳು ಸೇರಿದಂತೆ 3 ಸಾವಿರಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ಭದ್ರತಾ ಕರ್ತವ್ಯಕ್ಕೆ ನಿಯೋಜಿಸಲಾಗಿದೆ.



