ಬೆಳಗಾವಿ: ನಕಲಿ ದಾಖಲೆಗಳ ಮೂಲಕ ಬೇರೆಯವರ ಆಸ್ತಿಯನ್ನು ತಮ್ಮದೆಂದು ಬಿಂಬಿಸಿಕೊಂಡು ಕಬಳಿಸಲು ಯತ್ನಿಸಿದ ಆರೋಪದ ಮೇಲೆ ಮೂವರು ಮಹಿಳೆಯರನ್ನು ಬೆಳಗಾವಿ ಮಾರ್ಕೆಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಛಾಯಾ ಅರುಣ ಕದಮ್, ಭಾಗ್ಯಶ್ರೀ ಸಂತೋಷ ಅತಿವಾಡಕರ್ ಹಾಗೂ ಜಾನ್ವಿ ವಿನಾಯಕ ಭೋಸಲೆ ಬಂಧಿತರು.
ಹೊನ್ನಾವರ ತಾಲೂಕಿನ ದುರ್ಗಕೇರಿ ಗ್ರಾಮದ ಅಶೋಕ್ ಬಾಳಪ್ಪ ಯರಗುದ್ದಿ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಈ ಕಾರ್ಯಾಚರಣೆ ನಡೆಸಿದ್ದಾರೆ.
ಬೆಳಗಾವಿಯ ಎಂ.ಎಂ. ಎಕ್ಸ್‌ಟೆನ್ಶನ್-2ರಲ್ಲಿರುವ ತಮ್ಮ ಹಾಗೂ ಸಹೋದರಿಯರಿಗೆ ಸೇರಿದ ನಿವೇಶನವನ್ನು ಕಬಳಿಸುವ ಉದ್ದೇಶದಿಂದ ಆರೋಪಿಗಳು ನಕಲಿ ದಾಖಲೆಗಳನ್ನು ಸೃಷ್ಟಿಸಿದ್ದರು. ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ತಾವೇ ಆಸ್ತಿಯ ಮೂಲ ಮಾಲೀಕರು ಎಂಬಂತೆ ದಾಖಲೆಗಳನ್ನು ಸೃಷ್ಟಿಸಿ ಆಸ್ತಿ ವರ್ಗಾವಣೆ ಮಾಡಿಕೊಳ್ಳಲು ಯತ್ನಿಸಿದ್ದರು ಎಂದು ದೂರಿನಲ್ಲಿ ಆರೋಪಿಸಲಾಗಿತ್ತು.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳ ಚಟುವಟಿಕೆಗಳ ಕುರಿತು ತನಿಖೆ ನಡೆಸಿದರು. ಶುಕ್ರವಾರ ಮೂವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ ವೇಳೆ ಆಸ್ತಿ ಕಬಳಿಸುವ ಉದ್ದೇಶದಿಂದ ವಂಚನೆ ನಡೆಸಿರುವುದು ತನಿಖೆಯಲ್ಲಿ ದೃಢಪಟ್ಟಿದೆ ಎಂದು ನಗರ ಪೊಲೀಸ್ ಆಯುಕ್ತ ಭೂಷಣ್ ಬೊರಸೆ ತಿಳಿಸಿದ್ದಾರೆ.
ಆರೋಪಿಗಳ ವಿರುದ್ಧ ಐಪಿಸಿ ಕಲಂ 416, 417, 419, 420, 461, 465, 468, 474 ಹಾಗೂ ಸಹಕಲಂ 34ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ತನಿಖೆಯ ಬಳಿಕ ಮೂವರನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಲಾಗಿದೆ. ಕಾರ್ಯಾಚರಣೆ ನಡೆಸಿದ ಮಾರ್ಕೆಟ್ ಠಾಣೆ ಪಿಐ ಜೆ.ಎಂ. ಕಾಲಿಮಿರ್ಚಿ, ಪಿಎಸ್‌ಐ ಹೆಚ್.ಎಲ್. ಕೆರೂರ ಹಾಗೂ ಸಿಬ್ಬಂದಿಯ ಕಾರ್ಯಕ್ಕೆ ಪೊಲೀಸ್ ಕಮಿಷನರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.



