ನವದೆಹಲಿ: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಸತತ ಎರಡನೇ ವರ್ಷವೂ ದೆಹಲಿಯ ಕೆಂಪುಕೋಟೆಯಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮಕ್ಕೆ ಗೈರಾಗಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಕೆಂಪುಕೋಟೆಯಲ್ಲಿ ಧ್ವಜಾರೋಹಣ ನೆರವೇರಿಸಿ, ದೇಶವನ್ನುದ್ದೇಶಿಸಿ ಭಾಷಣ ಮಾಡಿದರು. ಈ ವೇಳೆ ಕಾಂಗ್ರೆಸ್‌ನ ಪ್ರಮುಖ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧಿ ಕಾರ್ಯಕ್ರಮದಲ್ಲಿ ಭಾಗವಹಿಸದಿರುವುದು ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.
ಆಡಳಿತಾರೂಢ ಬಿಜೆಪಿ ಹಾಗೂ ಪ್ರತಿಪಕ್ಷಗಳ ನಡುವಿನ ರಾಜಕೀಯ ಬಿಕ್ಕಟ್ಟು ಮುಂದುವರಿದಿರುವ ಸಂದರ್ಭದಲ್ಲೇ ಕಾಂಗ್ರೆಸ್ ನಾಯಕರ ಗೈರುಹಾಜರಿ ನಡೆದಿದೆ. ಇತ್ತೀಚೆಗೆ ಮುಕ್ತಾಯಗೊಂಡ ಸಂಸತ್ತಿನ ಮುಂಗಾರು ಅಧಿವೇಶನದಲ್ಲೂ ಹಲವು ವಿಚಾರಗಳಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಮತ್ತು ಪ್ರತಿಪಕ್ಷಗಳ ನಡುವೆ ತೀವ್ರ ಸಂಘರ್ಷ ನಡೆದಿತ್ತು.
2024ರಲ್ಲೂ ಆಸನ ವ್ಯವಸ್ಥೆ ವಿವಾದ
2024ರ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲೂ ರಾಹುಲ್ ಗಾಂಧಿ ಅವರ ಆಸನ ವ್ಯವಸ್ಥೆ ವಿವಾದಕ್ಕೆ ಕಾರಣವಾಗಿತ್ತು. ಕೆಂಪುಕೋಟೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಗೆ ಎರಡನೇ ಸಾಲಿನ ಹಿಂದಿನ ಭಾಗದಲ್ಲಿ ಆಸನ ವ್ಯವಸ್ಥೆ ಮಾಡಲಾಗಿತ್ತು.
ಇದನ್ನು ವಿರೋಧ ಪಕ್ಷಗಳು ಅವಮಾನ ಎಂದು ಟೀಕಿಸಿದ್ದವು. ಆದರೆ, ಒಲಿಂಪಿಕ್ಸ್ ಕ್ರೀಡಾಪಟುಗಳಿಗೆ ಆಸನ ವ್ಯವಸ್ಥೆ ಕಲ್ಪಿಸುವ ಉದ್ದೇಶದಿಂದ ಆಸನ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಲಾಗಿತ್ತು ಎಂದು ರಕ್ಷಣಾ ಸಚಿವಾಲಯ ಸ್ಪಷ್ಟನೆ ನೀಡಿತ್ತು.
ವಿಪಕ್ಷ ನಾಯಕನಿಗೆ ಮುಂಭಾಗದ ಸಾಲಿನಲ್ಲಿ ಸ್ಥಾನ
ಶಿಷ್ಟಾಚಾರದ ಪ್ರಕಾರ, ಲೋಕಸಭೆಯ ವಿರೋಧ ಪಕ್ಷದ ನಾಯಕನಿಗೆ ಗಣ್ಯರು ಭಾಗವಹಿಸುವ ಪ್ರಮುಖ ಸರ್ಕಾರಿ ಕಾರ್ಯಕ್ರಮಗಳಲ್ಲಿ ಮುಂಭಾಗದ ಸಾಲಿನಲ್ಲಿ ಆಸನ ಕಲ್ಪಿಸಲಾಗುತ್ತದೆ.
ಈ ಹಿನ್ನೆಲೆಯಲ್ಲಿ ಸತತ ಎರಡನೇ ವರ್ಷ ಕೆಂಪುಕೋಟೆಯ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮಕ್ಕೆ ಕಾಂಗ್ರೆಸ್‌ನ ಪ್ರಮುಖ ನಾಯಕರು ಗೈರಾಗಿರುವುದು ರಾಜಕೀಯ ಹಾಗೂ ಸಾರ್ವಜನಿಕ ವಲಯದಲ್ಲಿ ಗಮನ ಸೆಳೆದಿದೆ.



