ಜಕಾರ್ತಾ: ಇಂಡೋನೇಷ್ಯಾದ ಫ್ಲೋರ್ಸ್ ದ್ವೀಪದಲ್ಲಿ ಶನಿವಾರ ಮುಂಜಾನೆ 7.7 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದ್ದು, ಮೃತರ ಸಂಖ್ಯೆ 40ಕ್ಕೆ ಏರಿಕೆಯಾಗಿದೆ.
ಭೂಕಂಪದ ಪರಿಣಾಮ ಹಲವು ಮನೆಗಳು ಹಾಗೂ ಕಟ್ಟಡಗಳು ಕುಸಿದು ಭಾರೀ ಹಾನಿಯಾಗಿದೆ.
ಅಮೆರಿಕದ ಭೂವೈಜ್ಞಾನಿಕ ಸಮೀಕ್ಷೆ ಪ್ರಕಾರ, ಇಂಡೋನೇಷ್ಯಾ ಸಮಯ ಬೆಳಿಗ್ಗೆ 5:58ಕ್ಕೆ ಫ್ಲೋರ್ಸ್ ಪ್ರದೇಶದಲ್ಲಿ ಭೂಮಿಯಿಂದ ಸುಮಾರು 10 ಕಿಲೋಮೀಟರ್ ಆಳದಲ್ಲಿ ಭೂಕಂಪ ಸಂಭವಿಸಿದೆ.
ಭೂಕಂಪದ ತೀವ್ರತೆಗೆ ಕಟ್ಟಡಗಳು ಕುಸಿಯುತ್ತಿದ್ದಂತೆ ಜನರು ಭಯಭೀತರಾಗಿ ರಸ್ತೆಗಳತ್ತ ಓಡಿ ಜೀವ ಉಳಿಸಿಕೊಳ್ಳುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಭೂಕಂಪದ ಬಳಿಕ ಇಂಡೋನೇಷ್ಯಾದ ಹವಾಮಾನಶಾಸ್ತ್ರ ಮತ್ತು ಭೂಭೌತಶಾಸ್ತ್ರ ಸಂಸ್ಥೆ (BMKG) ಸುನಾಮಿ ಅಲೆಗಳ ಸಾಧ್ಯತೆಯ ಬಗ್ಗೆ ಮುನ್ನೆಚ್ಚರಿಕೆ ನೀಡಿತ್ತು. ಕರಾವಳಿ ಪ್ರದೇಶದ ನಿವಾಸಿಗಳು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸೂಚಿಸಲಾಗಿತ್ತು. ಬಳಿಕ ಪರಿಸ್ಥಿತಿ ಪರಿಶೀಲಿಸಿದ ಅಧಿಕಾರಿಗಳು ಸುನಾಮಿ ಎಚ್ಚರಿಕೆಯನ್ನು ಹಿಂತೆಗೆದುಕೊಂಡರು.
ಫ್ಲೋರ್ಸ್ ದ್ವೀಪವು ಭೂಕಂಪ ಪೀಡಿತ ಪ್ರದೇಶವಾಗಿದ್ದು, 1992ರಲ್ಲಿ ಇದೇ ಭಾಗದಲ್ಲಿ 7 ತೀವ್ರತೆಯ ಭೂಕಂಪ ಸಂಭವಿಸಿ ಸುಮಾರು 2,500 ಮಂದಿ ಮೃತಪಟ್ಟಿದ್ದರು. ಈಗಿನ ಭೂಕಂಪದ ಬಳಿಕ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದ್ದು, ಹಾನಿಯ ಪ್ರಮಾಣ ಇನ್ನಷ್ಟು ಹೆಚ್ಚುವ ಸಾಧ್ಯತೆ ಇದೆ.



