HomeBengaluru Newsಶಾಲೆ ಪಕ್ಕದಲ್ಲೇ ಬಂಡೆ ಒಡೆಯಲು ಅಕ್ರಮ ಸ್ಫೋಟ? ಬೆಂಗಳೂರಿನಲ್ಲಿ 800 ಕೆಜಿಗೂ ಹೆಚ್ಚು ಜಿಲೆಟಿನ್ ಸೀಜ್

ಶಾಲೆ ಪಕ್ಕದಲ್ಲೇ ಬಂಡೆ ಒಡೆಯಲು ಅಕ್ರಮ ಸ್ಫೋಟ? ಬೆಂಗಳೂರಿನಲ್ಲಿ 800 ಕೆಜಿಗೂ ಹೆಚ್ಚು ಜಿಲೆಟಿನ್ ಸೀಜ್

For Dai;y Updates Join Our whatsapp Group

ಬೆಂಗಳೂರು: ನಗರದ ಬೆಳ್ಳಂದೂರು ಸಮೀಪದ ಭೋಗನಹಳ್ಳಿಯಲ್ಲಿ ನಿರ್ಮಾಣ ಹಂತದ ಕಟ್ಟಡ ಕಾಮಗಾರಿಯಲ್ಲಿ ಅಕ್ರಮವಾಗಿ ಜಿಲೆಟಿನ್ ಬಳಸಿ ಬಂಡೆಗಳನ್ನು ಸ್ಫೋಟಿಸಲಾಗುತ್ತಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಬೆಳ್ಳಂದೂರು ಪೊಲೀಸರು ಕಾರ್ಯಾಚರಣೆ ನಡೆಸಿ 800 ಕೆಜಿಗೂ ಹೆಚ್ಚು ಜಿಲೆಟಿನ್ ವಶಪಡಿಸಿಕೊಂಡಿದ್ದಾರೆ.

ಪ್ರಕರಣ ಸಂಬಂಧ ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ಆರಂಭಿಸಲಾಗಿದೆ.

ಭೋಗನಹಳ್ಳಿಯಲ್ಲಿ ಆದರ್ಶ ಕಂಪನಿಯ ಕಟ್ಟಡ ಕಾಮಗಾರಿ ನಡೆಯುತ್ತಿರುವ ವೇಳೆ ಸ್ಥಳದಲ್ಲಿ ದೊಡ್ಡ ಕಲ್ಲಿನ ಬಂಡೆಗಳು ಪತ್ತೆಯಾಗಿದ್ದವು. ಅವುಗಳನ್ನು ತೆರವುಗೊಳಿಸಲು ಅಗತ್ಯ ಸುರಕ್ಷತಾ ಕ್ರಮಗಳನ್ನು ಪಾಲಿಸದೇ ಜಿಲೆಟಿನ್ ಬಳಸಿ ಬ್ಲಾಸ್ಟಿಂಗ್ ನಡೆಸಲಾಗುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ನಿರ್ಮಾಣ ಸ್ಥಳದ ಸಮೀಪದಲ್ಲೇ ಶಾಲೆ ಇರುವುದರಿಂದ ಸ್ಥಳೀಯರಲ್ಲಿ ಆತಂಕ ಹೆಚ್ಚಾಗಿದೆ. ರಾತ್ರಿ 12 ಗಂಟೆಯ ಬಳಿಕ ಸ್ಫೋಟ ನಡೆಸಲಾಗುತ್ತಿದೆ ಎಂದು ಆರೋಪಿಸಿರುವ ನಿವಾಸಿಗಳು, ಮಕ್ಕಳ ಸುರಕ್ಷತೆಗೂ ಅಪಾಯ ಉಂಟಾಗುತ್ತಿದೆ ಎಂದು ಪ್ರಶ್ನಿಸಿದ್ದಾರೆ. ಈ ಕುರಿತು ಹಲವು ಬಾರಿ ಬೆಳ್ಳಂದೂರು ಠಾಣೆಗೆ ದೂರು ನೀಡಿದ್ದರೂ ಸೂಕ್ತ ಕ್ರಮವಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು.

ಪೊಲೀಸರಿಗೆ ನೀಡಿದ ದೂರಿನಲ್ಲಿ ಅರ್ಥ್‌ವರ್ಕ್ ಕೆಲಸ ಮಾಡುವ ಸತೀಶ್ ನಾಯಕ್, ಶ್ರೀನಿವಾಸ ಅರ್ಥ್ ಮೂವರ್ಸ್ ಮಾಲೀಕ ಅರುಣ್ ಕುಮಾರ್ ತಮ್ಮನ್ನು ಭೋಗನಹಳ್ಳಿಯ ವಿವಿಧ ಸರ್ವೆ ನಂಬರಿನ ಕಾಮಗಾರಿಗೆ ನೇಮಿಸಿದ್ದಾಗಿ ತಿಳಿಸಿದ್ದಾರೆ.

ಕಾಮಗಾರಿ ವೇಳೆ ದೊಡ್ಡ ಬಂಡೆಗಳು ಪತ್ತೆಯಾಗಿದ್ದರಿಂದ ಅವುಗಳನ್ನು ತೆರವುಗೊಳಿಸಲು ಕಾನೂನುಬಾಹಿರವಾಗಿ ಸ್ಫೋಟಕ ವಸ್ತುಗಳನ್ನು ಬಳಸುವಂತೆ ಒತ್ತಡ ಹೇರಲಾಗಿತ್ತು ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಇದಕ್ಕೆ ವಿರೋಧ ವ್ಯಕ್ತಪಡಿಸಿದ ಬಳಿಕ ಕೆಲಸದಿಂದ ದೂರವಿಟ್ಟು, ಹಣ ನೀಡದೆ ಪ್ರಾಣ ಬೆದರಿಕೆ ಹಾಕಲಾಗಿದೆ ಎಂದೂ ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಶ್ರೀನಿವಾಸ ಅರ್ಥ್ ಮೂವರ್ಸ್ ಮಾಲೀಕ, ಸೈಟ್ ಇನ್‌ಚಾರ್ಜ್, ಸೈಟ್ ಎಂಜಿನಿಯರ್, ಆದರ್ಶ ಡೆವಲಪರ್ಸ್‌ನ ಮಾಲೀಕರು ಹಾಗೂ ಗುತ್ತಿಗೆದಾರರು ಕಾನೂನುಬಾಹಿರವಾಗಿ ಸ್ಫೋಟಕ ವಸ್ತುಗಳನ್ನು ಸಂಗ್ರಹಿಸಿ ಬಳಸುತ್ತಿದ್ದಾರೆ ಎಂದು ದೂರುದಾರರು ಆರೋಪಿಸಿದ್ದಾರೆ.

ಸ್ಥಳೀಯರ ದೂರಿನ ಆಧಾರದಲ್ಲಿ ಎಫ್‌ಐಆರ್ ದಾಖಲಿಸಿಕೊಂಡಿರುವ ಬೆಳ್ಳಂದೂರು ಪೊಲೀಸರು ಕಾರ್ಯಾಚರಣೆ ನಡೆಸಿ 800 ಕೆಜಿಗೂ ಹೆಚ್ಚು ಜಿಲೆಟಿನ್ ವಶಪಡಿಸಿಕೊಂಡಿದ್ದಾರೆ. ನಿರ್ಮಾಣ ಸ್ಥಳದಲ್ಲಿ ಸ್ಫೋಟಕ ವಸ್ತುಗಳನ್ನು ಯಾವ ರೀತಿಯಲ್ಲಿ ಸಂಗ್ರಹಿಸಲಾಗಿತ್ತು, ಅವುಗಳ ಬಳಕೆಗೆ ಅಗತ್ಯ ಅನುಮತಿ ಇತ್ತೇ ಹಾಗೂ ನಿಜವಾಗಿಯೂ ಬ್ಲಾಸ್ಟಿಂಗ್ ನಡೆಸಲಾಗುತ್ತಿತ್ತೇ ಎಂಬ ಬಗ್ಗೆ ತನಿಖೆ ಮುಂದುವರಿದಿದೆ. ಪ್ರಕರಣಕ್ಕೆ ಸಂಬಂಧಿಸಿದ ಆರೋಪಗಳ ಸತ್ಯಾಸತ್ಯತೆ ತನಿಖೆಯ ಬಳಿಕವೇ ಸ್ಪಷ್ಟವಾಗಲಿದೆ.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img