ಸಚಿವ ಪಾಟೀಲರ ಮನೆ ಮುಂದೆ ದಿಂಗಾಲೇಶ್ವರ ಶ್ರೀಗಳ ಧರಣಿ; ಶ್ರೀಗಳು ನರಗುಂದ ಪ್ರವೇಶಿಸದಂತೆ ತಡೆಯಲು ಪೊಲೀಸರ ನಿಯೋಜನೆ

Vijayasakshi (Gadag News) :

ವಿಜಯಸಾಕ್ಷಿ ಸುದ್ದಿ, ನರಗುಂದ:

ಬಾಲೆಹೊಸೂರು ಮತ್ತು ಶಿರಹಟ್ಟಿಯ ಜ.ಫ.ದಿಂಗಾಲೇಶ್ವರ ಸ್ವಾಮೀಜಿ ಹಾಗೂ ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲರ ಮಧ್ಯದ ‌ಸಮರ‌ ಮುಂದುವರೆದಿದೆ. ಇದರ ಭಾಗವಾಗಿ ದಿಂಗಾಲೇಶ್ವರ ಶ್ರೀಗಳು ನರಗುಂದ ಪಟ್ಟಣದಲ್ಲಿರುವ ಸಚಿವ ಸಿ.ಸಿ.ಪಾಟೀಲರ ಮನೆ ಮುಂದೆ ಇಂದು(ಏ.27) ಧರಣಿ ಕೂರುತ್ತಿದ್ದಾರೆ. ಆದರೆ, ಶ್ರೀಗಳನ್ನು ನರಗುಂದ ಪ್ರವೇಶಿಸದಂತೆ ತಡೆಯಲು ಪೊಲೀಸರು ಕಣ್ಗಾವಲಿರಿಸಿದ್ದಾರೆ‌.

ಹೌದು, ಧರಣಿ ಕೂರಲು ನರಗುಂದಕ್ಕೆ ಹೋಗುವ ಶಿರಹಟ್ಟಿಯ ದಿಂಗಾಲೇಶ್ವರ ಶ್ರೀಗಳನ್ನ ತೆಡೆಯಲು ಗದಗದಿಂದ ನರಗುಂದಕ್ಕೆ ಸಂಪರ್ಕ ಕಲ್ಪಿಸುವ ಹಲವು ರಸ್ತೆಗಳಲ್ಲಿ ಪೊಲೀಸರು ನಾಕಾಬಂದಿ ಹಾಕಿದ್ದಾರೆ. ಶ್ರೀಗಳನ್ನು ತಡೆಯಲು ಡಿವೈಎಸ್ ಪಿ ವೈ.ಎಸ್.ಏಗನಗೌಡರ್, ಸಿಪಿಐ ಎಂ.ಜಿ.ಮಠಪತಿ ನೇತೃತ್ವದಲ್ಲಿ ನಾಕಾಬಂದಿ ಹಾಕಲಾಗಿದೆ.

ನರಗುಂದ ಹೊರವಲಯದ ಕಲಕೇರಿ ಸೇರಿದಂತೆ ಪಟ್ಟಣದ ಮೂರು ಭಾಗದಲ್ಲಿ ನಾಕಾಬಂದಿ ಹಾಕಿರುವ ಪೊಲೀಸರು ಕುರ್ಲಗೆರಿ, ಅಳಗವಾಡಿ ರಸ್ತೆಯಲ್ಲೂ ಪೊಲೀಸರನ್ನು ನಿಯೋಜಿಸಲಾಗಿದೆ.
ಈ ಮೂಲಕ ದಿಂಗಾಲೇಶ್ವರ ಶ್ರೀಗಳು ನರಗುಂದ ಪ್ರವೇಶಿಸಿದಂತೆ ನೋಡಿಕೊಳ್ಳಲು ಪೊಲೀಸರು ಮುಂದಾಗಿದ್ದಾರೆ‌. ಕೆಎಸ್ ಆರ್ ಪಿ ತುಕಡಿ ಜೊತೆ 30ಕ್ಕೂ ಹೆಚ್ಚು ಪೊಲೀಸರರನ್ನು ನಿಯೋಜಿಸಲಾಗಿದೆ. ಈಗಾಗಲೇ ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದಲ್ಲಿ ಕೆಲವರನ್ನು ವಶಕ್ಕೆ ಪಡೆಯಲಾಗಿದೆ ಎನ್ನಲಾಗಿದೆ.

ಫೆ‌.21ನ್ನು ಭಾವೈಕ್ಯತಾ ದಿನವನ್ನಾಗಿ ಆಚರಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಗದುಗಿನ ತೋಂಟದಾರ್ಯ ಜಾತ್ರಾ ಮಹೋತ್ಸವದಂದು ಘೋಷಿಸಿದ್ದರು. ಇದಕ್ಕೆ ದಿಂಗಾಲೇಶ್ವರ ಶ್ರೀಗಳು ಆಕ್ಷೇಪ ವ್ಯಕ್ತಪಡಿಸಿದ್ದರು. ದಿಂಗಾಲೇಶ್ವರ ಹೇಳಿಕೆ,‌ ನಡೆ‌ ಖಂಡಿಸಿ ದಿಂಗಾಲೇಶ್ವರ ಶ್ರೀಗಳ ಪೂರ್ವಾಶ್ರಮದ ಬಗ್ಗೆ ಗೊತ್ತು‌ ಎಂದು ಸಚಿವ ಸಿ.ಸಿ.ಪಾಟೀಲರು ಹೇಳಿದ್ದರು. ಸಚಿವರ ಹೇಳಿಕೆಗೆ ಕೆಂಡಾಮಂಡಲರಾಗಿದ್ದ ದಿಂಗಾಲೇಶ್ವರ ಶ್ರೀಗಳು ಸಾಬೀತು ಪಡಿಸುವಂತೆ ಒತ್ತಾಯಿಸಿ
ಸಚಿವರ ವಿರುದ್ಧ ಧರಣಿ ಕೂರಲು ಮುಂದಾಗಿದ್ದಾರೆ.

ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ FacebookTwitterYouTube ಅನುಸರಿಸಿ