ಬೆಂಗಳೂರು: ಬೆಂಗಳೂರಿನ ಚಿಕ್ಕಬಾಣವಾರದ ಗುಡ್ಡೆ ಬಸವಪುರದಲ್ಲಿ ತಂದೆ ಹಾಗೂ 5 ವರ್ಷದ ಮಗ ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ ನಡೆದಿದೆ. ಮೃತರನ್ನು ಅಭಿನವ್ (38) ಹಾಗೂ ಅವರ ಪುತ್ರ ಯದುವೀರ್ (5) ಎಂದು ಗುರುತಿಸಲಾಗಿದೆ.
ಮೇಲ್ನೋಟಕ್ಕೆ ಇಬ್ಬರ ಸಾವಿನ ಹಿಂದೆಯೂ ಕೊಲೆ ಶಂಕೆ ವ್ಯಕ್ತವಾಗಿದ್ದು, ಮೃತದೇಹಗಳ ಮೇಲೆ ಗಾಯದ ಗುರುತುಗಳು ಪತ್ತೆಯಾಗಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ಘಟನೆ ನಡೆದ ಸಂದರ್ಭದಲ್ಲಿ ಮೃತ ಅಭಿನವ್ ಅವರ ಪತ್ನಿ ಪಕ್ಕದ ಕೊಠಡಿಯಲ್ಲಿದ್ದರು ಎನ್ನಲಾಗಿದ್ದು, ಈ ವಿಚಾರವೂ ಪೊಲೀಸರ ಅನುಮಾನಕ್ಕೆ ಕಾರಣವಾಗಿದೆ. ಹೀಗಾಗಿ ಪೊಲೀಸರು ಮೃತರ ಪತ್ನಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಮಾಹಿತಿ ತಿಳಿಯುತ್ತಿದ್ದಂತೆ ಚಿಕ್ಕಬಾಣವಾರ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ತಂದೆ-ಮಗನ ಸಾವಿಗೆ ನಿಖರ ಕಾರಣವೇನು ಎಂಬುದು ಪೊಲೀಸ್ ತನಿಖೆಯಿಂದ ತಿಳಿದುಬರಬೇಕಿದೆ.
ಘಟನೆಗೆ ಸಂಬಂಧಿಸಿದಂತೆ ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದು, ಸಾವಿನ ಹಿಂದಿನ ನಿಖರ ಕಾರಣ ಹಾಗೂ ಘಟನೆಗೆ ಸಂಬಂಧಿಸಿದ ಹೆಚ್ಚಿನ ವಿವರಗಳು ತನಿಖೆಯ ಬಳಿಕ ಹೊರಬರಬೇಕಿದೆ.



