HomeKarnataka Newsಕಳಪೆ ಆಹಾರ ನೀಡುವ ಹೋಟೆಲ್ʼಗಳಿಗೆ ₹5 ಲಕ್ಷದವರೆಗೆ ದಂಡ: ಅಡುಗೆ ಕೋಣೆಯಲ್ಲಿ ಸಿಸಿಟಿವಿ ಕಡ್ಡಾಯ -...

ಕಳಪೆ ಆಹಾರ ನೀಡುವ ಹೋಟೆಲ್ʼಗಳಿಗೆ ₹5 ಲಕ್ಷದವರೆಗೆ ದಂಡ: ಅಡುಗೆ ಕೋಣೆಯಲ್ಲಿ ಸಿಸಿಟಿವಿ ಕಡ್ಡಾಯ – ಯು.ಟಿ. ಖಾದರ್ ಎಚ್ಚರಿಕೆ

For Dai;y Updates Join Our whatsapp Group

ಬೆಂಗಳೂರು: ಪಿಜಿ ಹಾಗೂ ಹಾಸ್ಟೆಲ್‌ಗಳಲ್ಲಿ ಕಳಪೆ ಆಹಾರ ನೀಡುವುದು ಕಂಡುಬಂದರೆ ಯಾವುದೇ ಕಾರಣಕ್ಕೂ ಕ್ಷಮಿಸುವುದಿಲ್ಲ. ಖಾಸಗಿ ಹಾಸ್ಟೆಲ್‌ಗಳಲ್ಲೂ ಆಹಾರ ಗುಣಮಟ್ಟ ಹಾಗೂ ಸ್ವಚ್ಛತೆ ಪರಿಶೀಲನೆ ನಡೆಸಲಾಗುವುದು ಎಂದು ಆರೋಗ್ಯ ಸಚಿವ ಯು.ಟಿ. ಖಾದರ್‌ ಎಚ್ಚರಿಕೆ ನೀಡಿದ್ದಾರೆ.

ಹೋಟೆಲ್‌ಗಳ ಮೇಲೆ ದಾಳಿ ನಡೆಸಿ ಕರ್ತವ್ಯ ಪ್ರಜ್ಞೆ ಮೆರೆದ ಆಹಾರ ಸುರಕ್ಷತಾ ಅಧಿಕಾರಿಗಳಿಗೆ ಆರೋಗ್ಯ ಸೌಧದಲ್ಲಿ ಸನ್ಮಾನ ಕಾರ್ಯಕ್ರಮ ಆಯೋಜಿಸಲಾಗಿತ್ತು. ಅಧಿಕಾರಿಗಳಿಗೆ ಗೌರವ ಸಮರ್ಪಿಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ರಾಜ್ಯದಲ್ಲಿ ಆಹಾರ ಸುರಕ್ಷತೆ ಹಾಗೂ ಗುಣಮಟ್ಟ ಕಾಪಾಡಲು ಕೈಗೊಳ್ಳಲಾಗುತ್ತಿರುವ ಕ್ರಮಗಳ ಕುರಿತು ಮಾಹಿತಿ ನೀಡಿದರು.

ಪಿಜಿಗಳಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳಬೇಕು. ಯುವಜನರು ಹಾಗೂ ವಿದ್ಯಾರ್ಥಿಗಳ ಸಮಸ್ಯೆಯನ್ನು ಬಳಸಿಕೊಂಡು ಹಣ ಗಳಿಸುವ ಪ್ರಯತ್ನ ಮಾಡಬಾರದು. ಪಿಜಿಗಳಲ್ಲಿ ಮತ್ತೆ ಕಳಪೆ ಆಹಾರ ನೀಡುವುದು ಕಂಡುಬಂದರೆ ಕ್ಷಮಿಸುವ ಪ್ರಶ್ನೆಯೇ ಇಲ್ಲ. ಖಾಸಗಿ ಹಾಸ್ಟೆಲ್‌ಗಳನ್ನೂ ಪರಿಶೀಲನೆ ನಡೆಸಲಾಗುವುದು ಎಂದು ಯು.ಟಿ. ಖಾದರ್‌ ಹೇಳಿದರು.

30 ತಂಡಗಳಿಂದ ಹೋಟೆಲ್‌ಗಳ ತಪಾಸಣೆ

ಹೋಟೆಲ್‌ಗಳಲ್ಲಿ ಆಹಾರ ಪದಾರ್ಥಗಳನ್ನು ತಯಾರಿಸುವ ಸ್ಥಳ ಹಾಗೂ ಆಹಾರ ಪದಾರ್ಥಗಳು ಎಲ್ಲಿಂದ ಸರಬರಾಜಾಗುತ್ತವೆ ಎಂಬುದರ ಬಗ್ಗೆಯೂ ತಪಾಸಣೆ ನಡೆಸಲಾಗಿದೆ. ರಾಜ್ಯದಲ್ಲಿ 30 ತಂಡಗಳನ್ನು ರಚಿಸಿ 60ಕ್ಕೂ ಹೆಚ್ಚು ತ್ರೀ-ಸ್ಟಾರ್‌, ಫೈವ್‌-ಸ್ಟಾರ್‌ ಹೋಟೆಲ್‌ಗಳು, 8 ವೇರ್‌ಹೌಸ್‌ಗಳು ಹಾಗೂ 4 ಅಂತಾರಾಷ್ಟ್ರೀಯ ರೆಸ್ಟೋರೆಂಟ್‌ಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗಿದೆ ಎಂದು ಸಚಿವರು ತಿಳಿಸಿದರು.

ಈ ವೇಳೆ 30 ಆಹಾರ ಉದ್ದಿಮೆದಾರರಿಗೆ ನೋಟಿಸ್‌ ನೀಡಲಾಗಿದ್ದು, ಪ್ರಕರಣಗಳು ವಿಚಾರಣೆಯ ಹಂತದಲ್ಲಿವೆ. ಈಗಾಗಲೇ ಕಳಪೆ ಆಹಾರದೊಂದಿಗೆ ಸಿಕ್ಕಿಬಿದ್ದಿರುವ ಹೋಟೆಲ್‌ಗಳಿಗೆ ನೋಟಿಸ್‌ ನೀಡುವುದರ ಜೊತೆಗೆ ₹5 ಲಕ್ಷದವರೆಗೆ ದಂಡ ವಿಧಿಸಲಾಗುವುದು. ದಂಡ ವಿಧಿಸಿ ಕಠಿಣ ಕ್ರಮ ಕೈಗೊಳ್ಳಲಾಗುವುದು. ಯಾವುದೇ ಕಾರಣಕ್ಕೂ ಕ್ಷಮಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

ರೈಲ್ವೆ ಕ್ಯಾಂಟೀನ್‌, ಮದುವೆ ಮನೆಗಳಲ್ಲೂ ತಪಾಸಣೆ

ಪಿಜಿ ಹಾಗೂ ಖಾಸಗಿ ಹಾಸ್ಟೆಲ್‌ಗಳ ಜೊತೆಗೆ ಬಸ್‌ ನಿಲ್ದಾಣಗಳಲ್ಲಿರುವ ಹೋಟೆಲ್‌ಗಳು, ಮದುವೆ ಮನೆಗಳು ಹಾಗೂ ರೈಲ್ವೆ ಕ್ಯಾಂಟೀನ್‌ಗಳಲ್ಲೂ ಆಹಾರದ ಗುಣಮಟ್ಟ ಪರಿಶೀಲಿಸಲಾಗುವುದು. ವಿಮಾನಗಳಲ್ಲಿ ಪ್ರಯಾಣಿಕರಿಗೆ ನೀಡುವ ಆಹಾರದ ಬಗ್ಗೆಯೂ ಪರಿಶೀಲನೆ ನಡೆಸಲಾಗುವುದು. ಇದಕ್ಕಾಗಿ ರಾಷ್ಟ್ರೀಯ ಮಟ್ಟದ ಪ್ರಾಕ್ಟೀಸ್‌ ತಂಡವನ್ನು ರಚಿಸುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ ಎಂದು ಖಾದರ್‌ ಹೇಳಿದರು.

ಆಹಾರ ಸುರಕ್ಷತಾ ನಿಯಮ ಬದಲಾವಣೆಗೆ ಕೇಂದ್ರಕ್ಕೆ ಮನವಿ

ವಿದೇಶಿ ಕಂಪನಿಗಳ ಚಾಕೊಲೇಟ್‌ಗಳು ಸೇರಿದಂತೆ ಹಲವು ಆಹಾರ ಉತ್ಪನ್ನಗಳು ಭಾರತಕ್ಕೆ ಬರುತ್ತಿವೆ. ಅವುಗಳ ಸಕ್ಕರೆ ಪ್ರಮಾಣ ಸೇರಿದಂತೆ ಗುಣಮಟ್ಟದಲ್ಲಿ ವ್ಯತ್ಯಾಸ ಕಂಡುಬರುತ್ತಿದೆ. ಕೇಂದ್ರದ ಆಹಾರ ಸುರಕ್ಷತಾ ಕಾಯ್ದೆ ಹಾಗೂ ನಿಯಮಗಳಲ್ಲಿ ಅಗತ್ಯ ಬದಲಾವಣೆ ಮಾಡಬೇಕು. ಈ ಕುರಿತು ಕೇಂದ್ರ ಆಹಾರ ಸಚಿವರಿಗೆ ಮಾಹಿತಿ ನೀಡಲಾಗುವುದು ಎಂದು ಸಚಿವರು ತಿಳಿಸಿದರು.

ಕೂಲ್‌ಡ್ರಿಂಕ್ಸ್‌ಗಳು ಬೇರೆ ದೇಶಗಳಲ್ಲಿ ಒಂದು ರೀತಿಯ ಗುಣಮಟ್ಟ ಹೊಂದಿದ್ದು, ಭಾರತಕ್ಕೆ ಬಂದಾಗ ಅದರ ರುಚಿ ಹಾಗೂ ಗುಣಮಟ್ಟದಲ್ಲಿ ವ್ಯತ್ಯಾಸ ಕಂಡುಬರುತ್ತಿದೆ. ಬೇರೆ ದೇಶಗಳಲ್ಲಿ ಇರುವ ಗುಣಮಟ್ಟವೇ ಭಾರತದಲ್ಲಿಯೂ ಇರಬೇಕು. ಈ ಕುರಿತು ಚರ್ಚಿಸಲು ಅಂತಾರಾಷ್ಟ್ರೀಯ ಆಲ್‌ ಇಂಡಿಯಾ ಫುಡ್‌ ಸೇಫ್ಟಿ ಕಾನ್ಕ್ಲೇವ್‌ ಆಯೋಜಿಸಲಾಗುವುದು ಎಂದು ಹೇಳಿದರು.

ಹೋಟೆಲ್‌ಗಳ ಮುಂದೆ ಕ್ಯೂಆರ್‌ ಕೋಡ್‌

ಹೋಟೆಲ್‌ಗಳಲ್ಲಿ ಕಂಡುಬರುವ ಸಮಸ್ಯೆಗಳ ಕುರಿತು ಸಾರ್ವಜನಿಕರು ಮುಕ್ತವಾಗಿ ದೂರು ನೀಡಲು ಪ್ರತಿ ಹೋಟೆಲ್‌ ಹಾಗೂ ಮೆಡಿಕಲ್‌ ಶಾಪ್‌ಗಳ ಮುಂದೆ ಕ್ಯೂಆರ್‌ ಕೋಡ್‌ ಅಳವಡಿಸಲು ನಿರ್ಧರಿಸಲಾಗಿದೆ. ಮುಂದಿನ ದಿನಗಳಲ್ಲಿ ಹೋಟೆಲ್‌ಗಳಿಗಾಗಿ ಟೋಲ್‌ ಫ್ರೀ ನಂಬರ್‌ ಕೂಡ ಬಿಡುಗಡೆ ಮಾಡಲಾಗುವುದು ಎಂದು ಯು.ಟಿ. ಖಾದರ್‌ ಹೇಳಿದರು. ಈ ಸಂದರ್ಭದಲ್ಲಿ ಆಹಾರ ಸುರಕ್ಷತೆ ಮತ್ತು ಔಷಧಿ ನಿಯಂತ್ರಣ ಇಲಾಖೆಯ ವತಿಯಿಂದ ಕ್ಯೂಆರ್‌ ಕೋಡ್‌ ವ್ಯವಸ್ಥೆಯನ್ನು ಬಿಡುಗಡೆ ಮಾಡಲಾಯಿತು.

ಪಿಜಿಗಳಿಗೆ ಪ್ರತ್ಯೇಕ ಮಾರ್ಗಸೂಚಿ

ಅಡುಗೆ ಹಾಗೂ ಸ್ವಚ್ಛತೆಗೆ ಸಂಬಂಧಿಸಿದಂತೆ ಪಿಜಿಗಳಿಗೆ ಪ್ರತ್ಯೇಕ ಮಾರ್ಗಸೂಚಿ ರೂಪಿಸಲಾಗುವುದು. ಹೋಟೆಲ್‌ಗಳ ಅಡುಗೆ ಕೋಣೆಗಳಲ್ಲಿ ಸಿಸಿಟಿವಿ ಅಳವಡಿಸುವುದನ್ನು ಕಡ್ಡಾಯಗೊಳಿಸಲಾಗುವುದು. ಈ ಕುರಿತು ಶೀಘ್ರದಲ್ಲೇ ಸೂಚನೆ ನೀಡಲಾಗುವುದು ಎಂದು ಸಚಿವ ಯು.ಟಿ. ಖಾದರ್‌ ತಿಳಿಸಿದರು.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img