HomeKarnataka Newsಆಗಸ್ಟ್ 28ರೊಳಗೆ ಸರ್ಕಾರಿ ಶಾಲಾ ಮಕ್ಕಳಿಗೆ ಬಾಕಿ ಶೂ, ಸಾಕ್ಸ್ ವಿತರಣೆ; ಸಚಿವ ಮಧು ಬಂಗಾರಪ್ಪ...

ಆಗಸ್ಟ್ 28ರೊಳಗೆ ಸರ್ಕಾರಿ ಶಾಲಾ ಮಕ್ಕಳಿಗೆ ಬಾಕಿ ಶೂ, ಸಾಕ್ಸ್ ವಿತರಣೆ; ಸಚಿವ ಮಧು ಬಂಗಾರಪ್ಪ ಭರವಸೆ

For Dai;y Updates Join Our whatsapp Group

ಬೆಂಗಳೂರು: ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ ಮಕ್ಕಳಿಗೆ ಬಾಕಿ ಇರುವ ಶೂ ಮತ್ತು ಸಾಕ್ಸ್‌ಗಳನ್ನು ಆಗಸ್ಟ್ 28ರೊಳಗೆ ವಿತರಣೆ ಮಾಡುವುದಾಗಿ ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಭರವಸೆ ನೀಡಿದ್ದಾರೆ.

ವಿಧಾನ ಪರಿಷತ್‌ನ ಪ್ರಶ್ನೋತ್ತರ ಕಲಾಪದಲ್ಲಿ ಕಾಂಗ್ರೆಸ್ ಸದಸ್ಯೆ ಬಲ್ಕಿಸ್ ಬಾನು ಅವರು ಶೂ ಮತ್ತು ಸಾಕ್ಸ್ ವಿತರಣೆಯಲ್ಲಿ ಆಗಿರುವ ವಿಳಂಬದ ಬಗ್ಗೆ ಪ್ರಶ್ನೆ ಕೇಳಿದರು. ಶಾಲೆಗಳಿಗೆ ಮಕ್ಕಳ ಹಾಜರಾತಿ ಹೆಚ್ಚಿಸುವ ಉದ್ದೇಶದಿಂದ ಸರ್ಕಾರ ಶೂ ಮತ್ತು ಸಾಕ್ಸ್ ವಿತರಿಸುತ್ತಿದೆ. ಆದರೆ ಇದುವರೆಗೆ ಶೇ.100ರಷ್ಟು ವಿತರಣೆ ಪೂರ್ಣಗೊಂಡಿಲ್ಲ. ಸುಮಾರು 16 ಲಕ್ಷ ವಿದ್ಯಾರ್ಥಿಗಳಿಗೆ ಇನ್ನೂ ಶೂ ಮತ್ತು ಸಾಕ್ಸ್ ವಿತರಣೆ ಆಗಿಲ್ಲ ಎಂದು ಅವರು ಗಮನ ಸೆಳೆದರು.

ಟೆಂಡರ್ ಪಡೆದಿರುವ ಸಂಸ್ಥೆಗಳು ಸಮಯಕ್ಕೆ ಸರಿಯಾಗಿ ಶೂ ಮತ್ತು ಸಾಕ್ಸ್ ಪೂರೈಕೆ ಮಾಡಿಲ್ಲ. ಜೂನ್‌ನಲ್ಲೇ ಶಾಲೆಗಳು ಆರಂಭವಾಗಿದ್ದರೂ ಇನ್ನೂ ಸಂಪೂರ್ಣ ವಿತರಣೆ ಆಗಿಲ್ಲ. ಹೀಗಾಗಿ ಟೆಂಡರ್‌ದಾರರ ವಿರುದ್ಧ ಕ್ರಮ ಕೈಗೊಳ್ಳಬೇಕು. ಅಲ್ಲದೆ, ಅಗತ್ಯ ಇಂಡೆಂಟ್ ನೀಡದ ಅಧಿಕಾರಿಗಳ ವಿರುದ್ಧವೂ ಕ್ರಮ ಕೈಗೊಳ್ಳಬೇಕು ಎಂದು ಬಲ್ಕಿಸ್ ಬಾನು ಆಗ್ರಹಿಸಿದರು.

ಇದಕ್ಕೆ ಉತ್ತರ ನೀಡಿದ ಸಚಿವ ಮಧು ಬಂಗಾರಪ್ಪ, ಹಿಂದಿನ ಸರ್ಕಾರಗಳ ಅವಧಿಯಲ್ಲಿ ಜನವರಿ ತಿಂಗಳಾದರೂ ಶೂ ಮತ್ತು ಸಾಕ್ಸ್ ವಿತರಣೆ ಆಗುತ್ತಿರಲಿಲ್ಲ. ಜೊತೆಗೆ ಗುಣಮಟ್ಟದ ಶೂ ಮತ್ತು ಸಾಕ್ಸ್ ಕೂಡ ನೀಡಲಾಗುತ್ತಿರಲಿಲ್ಲ ಎಂದು ಹೇಳಿದರು.

ತಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಗುಣಮಟ್ಟದ ಶೂ ಮತ್ತು ಸಾಕ್ಸ್ ವಿತರಿಸಲು ಕ್ರಮ ಕೈಗೊಳ್ಳಲಾಗಿದೆ. ಈ ಬಾರಿ ರಾಜ್ಯ ಮಟ್ಟದಲ್ಲಿ ಟೆಂಡರ್ ಪ್ರಕ್ರಿಯೆ ನಡೆಸಲಾಗಿದೆ. ಟೆಂಡರ್ ಪಡೆದವರು ಪೂರೈಕೆಯಲ್ಲಿ ವಿಳಂಬ ಮಾಡಿರುವುದರಿಂದ ಅವರಿಗೆ ದಂಡ ವಿಧಿಸಲಾಗಿದೆ ಎಂದು ಸಚಿವರು ತಿಳಿಸಿದರು.

ರಾಜ್ಯ ಮಟ್ಟದಲ್ಲಿ ಟೆಂಡರ್ ಪ್ರಕ್ರಿಯೆ ನಡೆಸಿರುವುದರಿಂದ ಸ್ವಲ್ಪ ಸಮಯ ವಿಳಂಬವಾಗಿದೆ. ಶಾಲಾ ಹಂತದಲ್ಲಿ ಮಕ್ಕಳ ಶೂ ಸೈಜ್‌ಗಳ ಮಾಹಿತಿ ನೀಡುವುದು ತಡವಾದಾಗಲೂ ಸಮಸ್ಯೆ ಉಂಟಾಗುತ್ತದೆ. ಕೆಲವೆಡೆ ಇಂಡೆಂಟ್ ನೀಡುವಲ್ಲಿಯೂ ತಪ್ಪುಗಳಾಗಿವೆ. ಹೀಗಾಗಿ ವಿತರಣೆಯಲ್ಲಿ ವಿಳಂಬವಾಗಿದೆ ಎಂದು ಸಚಿವರು ವಿವರಿಸಿದರು.

ಆದರೆ ಆಗಸ್ಟ್ 28ರೊಳಗೆ ರಾಜ್ಯದ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಬಾಕಿ ಇರುವ ಶೂ ಮತ್ತು ಸಾಕ್ಸ್‌ಗಳನ್ನು ವಿತರಿಸಲಾಗುವುದು ಎಂದು ಸಚಿವರು ಸ್ಪಷ್ಟ ಭರವಸೆ ನೀಡಿದರು.

ಮುಂದಿನ ವರ್ಷದಿಂದ ಇಂತಹ ಸಮಸ್ಯೆಗಳು ಎದುರಾಗದಂತೆ ಮುಂಚಿತವಾಗಿಯೇ ಶೂ ಮತ್ತು ಸಾಕ್ಸ್ ವಿತರಿಸಲು ಕ್ರಮ ಕೈಗೊಳ್ಳಲಾಗುವುದು. ಈ ಯೋಜನೆಗೆ ಸಂಬಂಧಿಸಿದಂತೆ ₹104 ಕೋಟಿ ಹಣ ಬಾಕಿ ಇದ್ದು, ಆದಷ್ಟು ಬೇಗ ಶೂ ಮತ್ತು ಸಾಕ್ಸ್ ವಿತರಣೆ ಪೂರ್ಣಗೊಳಿಸಲಾಗುವುದು ಎಂದು ಮಧು ಬಂಗಾರಪ್ಪ ಹೇಳಿದರು.

ಶೂ ಮತ್ತು ಸಾಕ್ಸ್ ವಿತರಣೆಯ ಮೇಲ್ವಿಚಾರಣೆಗಾಗಿ ನೋಡೆಲ್ ಅಧಿಕಾರಿಯನ್ನು ನೇಮಿಸಿ, ವಿತರಣೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಸರಿಪಡಿಸಲಾಗುವುದು ಎಂದು ಸಚಿವರು ಭರವಸೆ ನೀಡಿದರು.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img