ಬೆಂಗಳೂರು: ಬಿಎಂಟಿಸಿ ಬಸ್ನ ಬಿಡಿ ಭಾಗಗಳ ಖರೀದಿಯಲ್ಲಿ ಅಕ್ರಮವಾಗಿದ್ದು, ಇದರ ತನಿಖೆಗೆ ಸಮಿತಿ ರಚನೆ ಮಾಡಲಾಗಿದೆ ಎಂದು ಸಾರಿಗೆ ಸಚಿವ ಬೈರತಿ ಸುರೇಶ್ ತಿಳಿಸಿದ್ದಾರೆ.
ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದ ವೇಳೆ ಕಾಂಗ್ರೆಸ್ ಸದಸ್ಯ ಡಾ.ಗೋವಿಂದ್ ರಾಜ್ ಈ ಬಗ್ಗೆ ಪ್ರಶ್ನೆ ಕೇಳಿದ್ದರು. ಬಿಎಂಟಿಸಿ ಬಸ್ ಬಿಡಿ ಭಾಗ ಖರೀದಿಯಲ್ಲಿ ಅಕ್ರಮವಾಗಿದ್ದು, ಎಷ್ಟು ಹಣ ಅಕ್ರಮವಾಗಿದೆ, ಅಕ್ರಮ ತನಿಖೆಗೆ ಸಮಿತಿ ರಚನೆಯಾಗಿದೆಯೇ, ಅಕ್ರಮದಲ್ಲಿ ಭಾಗಿಯಾದವರ ಮೇಲೆ ಯಾವ ಕ್ರಮ ಕೈಗೊಳ್ಳಲಾಗಿದೆ ಹಾಗೂ ನಕಲಿ ಬಿಲ್ ಸೃಷ್ಟಿಸಿ ಅಕ್ರಮ ಎಸಗಿದ ಗುತ್ತಿಗೆದಾರರ ಮೇಲೆ ಕ್ರಿಮಿನಲ್ ಕೇಸ್ ದಾಖಲಿಸಲಾಗಿದೆಯೇ ಎಂದು ಪ್ರಶ್ನಿಸಿದ್ದರು.
ಇದಕ್ಕೆ ಉತ್ತರ ನೀಡಿದ ಸಚಿವ ಬೈರತಿ ಸುರೇಶ್, ಅಕ್ರಮದ ಬಗ್ಗೆ ಮಾಹಿತಿ ಸ್ವೀಕಾರವಾದ ಬೆನ್ನಲ್ಲೇ ಮಾರ್ಚ್ 27ರಂದು 5 ಅಧಿಕಾರಿಗಳ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ ಎಂದು ತಿಳಿಸಿದರು. ಸಮಿತಿ ನೀಡಿದ ಪ್ರಾಥಮಿಕ ವರದಿ ಅನ್ವಯ 8 ಜನ ಅಧಿಕಾರಿ, ಸಿಬ್ಬಂದಿಗಳನ್ನು ಅಮಾನತು ಮಾಡಲಾಗಿದೆ ಎಂದ ಅವರು, ತನಿಖಾ ಸಮಿತಿ ಅಕ್ಟೋಬರ್ ಅಂತ್ಯದವರೆಗೆ ಅಂತಿಮ ವರದಿ ನೀಡಲಿದ್ದು, ವರದಿ ಬಳಿಕ ನಿಯಮಾನುಸಾರ ಕ್ರಮ ಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದರು.



