ನವದೆಹಲಿ: ದೆಹಲಿಯ ಹೊರವಲಯದ ಟಿಕ್ರಿ ಕಲಾನ್ ಮೆಟ್ರೋ ನಿಲ್ದಾಣದ ಸಮೀಪದ ಸಿಎನ್ಜಿ ಸ್ಟೇಷನ್ನಲ್ಲಿ ಭಾರಿ ಸ್ಫೋಟ ಸಂಭವಿಸಿದ್ದು, ಮೂವರು ಮೃತಪಟ್ಟಿದ್ದಾರೆ. ಘಟನೆಯಲ್ಲಿ ಮೂವರು ಗಾಯಗೊಂಡಿದ್ದಾರೆ.
ಮಧ್ಯಾಹ್ನ 3.37ರ ಸುಮಾರಿಗೆ ಸಿಎನ್ಜಿ ಪಂಪ್ ಸ್ಟೇಷನ್ನಲ್ಲಿ ಬಸ್ಗೆ ಇಂಧನ ತುಂಬಿಸುವ ವೇಳೆ ಸ್ಫೋಟ ಸಂಭವಿಸಿದೆ ಎನ್ನಲಾಗಿದೆ. ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಿದರು.
ಸ್ಫೋಟದ ತೀವ್ರತೆಗೆ ಸಿಎನ್ಜಿ ಸ್ಟೇಷನ್ನಲ್ಲಿ ಬೆಂಕಿಯ ಜ್ವಾಲೆಗಳು ಮುಗಿಲೆತ್ತರಕ್ಕೆ ಚಿಮ್ಮಿದ್ದು, ದಟ್ಟ ಹೊಗೆ ಆವರಿಸಿತ್ತು. ಘಟನೆಯ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.
ಮೃತರಲ್ಲಿ ಬಾಬಾ ಹರಿದಾಸ್ ಕಾಲೋನಿ ನಿವಾಸಿ ಮನೀಶ್ (25) ಎಂಬುವರನ್ನು ಗುರುತಿಸಲಾಗಿದೆ. ಬಸ್ಗೆ ಸಿಎನ್ಜಿ ತುಂಬಿಸುವ ವೇಳೆ ಸ್ಫೋಟ ಸಂಭವಿಸಿದ್ದು, ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
ಸ್ಫೋಟಕ್ಕೆ ನಿಖರ ಕಾರಣವೇನು ಎಂಬುದು ಇನ್ನೂ ತಿಳಿದುಬಂದಿಲ್ಲ. ಪೊಲೀಸರು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಘಟನೆಯ ಕುರಿತು ತನಿಖೆ ಕೈಗೊಂಡಿದ್ದಾರೆ.



