ಚೆನ್ನೈ: ತಮಿಳುನಾಡಿನ ಸರ್ಕಾರಿ ಕಾರ್ಯಕ್ರಮಗಳಲ್ಲಿ ರಾಷ್ಟ್ರಗೀತೆಗೆ ಮೊದಲು ತಮಿಳು ರಾಜ್ಯಗೀತೆ ಹಾಡಲು ಮದ್ರಾಸ್ ಹೈಕೋರ್ಟ್ ಅನುಮತಿ ನೀಡಿದೆ.
ಕೇಂದ್ರ ಗೃಹ ಸಚಿವಾಲಯದ ಸುತ್ತೋಲೆಯಲ್ಲಿ ರಾಜ್ಯಗೀತೆಯನ್ನು ಕೊನೆಯ ಸ್ಥಾನಕ್ಕೆ ತಳ್ಳುವ ಯಾವುದೇ ಉದ್ದೇಶವಿಲ್ಲ ಎಂದು ನ್ಯಾಯಾಲಯಕ್ಕೆ ಸ್ಪಷ್ಟಪಡಿಸಲಾಗಿದೆ.
ಚೆನ್ನೈನ ಅನ್ಯಾ ರಾಧಾಕೃಷ್ಣನ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ವೇಳೆ ಈ ವಿಚಾರ ಸ್ಪಷ್ಟವಾಗಿದೆ. ತಮಿಳುನಾಡಿನಲ್ಲಿ ಸರ್ಕಾರಿ ಕಾರ್ಯಕ್ರಮಗಳನ್ನು ರಾಜ್ಯಗೀತೆಯೊಂದಿಗೆ ಆರಂಭಿಸಿ, ರಾಷ್ಟ್ರಗೀತೆಯೊಂದಿಗೆ ಮುಕ್ತಾಯಗೊಳಿಸುವುದು ದೀರ್ಘಕಾಲದ ಸಂಪ್ರದಾಯವಾಗಿದೆ.
ಜನವರಿ 28ರಂದು ಕೇಂದ್ರ ಗೃಹ ಸಚಿವಾಲಯ ಹೊರಡಿಸಿದ್ದ ಸುತ್ತೋಲೆಯಲ್ಲಿ ಸರ್ಕಾರಿ ಕಾರ್ಯಕ್ರಮಗಳನ್ನು ‘ವಂದೇ ಮಾತರಂ’ನೊಂದಿಗೆ ಆರಂಭಿಸಬೇಕು ಎಂದು ಸೂಚಿಸಲಾಗಿತ್ತು. ಇದನ್ನು ಪ್ರಶ್ನಿಸಿ, ಸುತ್ತೋಲೆಯನ್ನು ರದ್ದುಗೊಳಿಸುವಂತೆ ಅರ್ಜಿದಾರರು ಮನವಿ ಮಾಡಿದ್ದರು.
ವಿಚಾರಣೆ ವೇಳೆ ಕೇಂದ್ರ ಸರ್ಕಾರದ ಪರ ವಕೀಲರು ಜುಲೈ 9ರಂದು ಕೇಂದ್ರ ಗೃಹ ಸಚಿವಾಲಯ ಹೊರಡಿಸಿರುವ ಹೊಸ ಅಧಿಸೂಚನೆಯನ್ನು ನ್ಯಾಯಾಲಯದ ಗಮನಕ್ಕೆ ತಂದರು. ಈ ಅಧಿಸೂಚನೆಯಂತೆ ‘ವಂದೇ ಮಾತರಂ’ ಮತ್ತು ರಾಷ್ಟ್ರಗೀತೆಯನ್ನು ಕ್ರಮವಾಗಿ ಹಾಡಬೇಕು ಹಾಗೂ ‘ವಂದೇ ಮಾತರಂ’ ರಾಷ್ಟ್ರಗೀತೆಗೆ ಮೊದಲು ಇರಬೇಕು ಎಂದು ತಿಳಿಸಲಾಗಿದೆ.
ಆದರೆ, ಹೊಸ ಅಧಿಸೂಚನೆಯಲ್ಲಿ ರಾಜ್ಯಗೀತೆಗಳ ಕುರಿತು ಯಾವುದೇ ನಿರ್ಬಂಧವಿಲ್ಲ. ರಾಜ್ಯಗೀತೆಯನ್ನು ಕೊನೆಯಲ್ಲಿ ಹಾಡಬೇಕು ಎಂಬ ಸೂಚನೆಯೂ ಇಲ್ಲ ಎಂದು ಕೇಂದ್ರ ಸರ್ಕಾರದ ಪರ ವಕೀಲರು ಸ್ಪಷ್ಟಪಡಿಸಿದರು.
ಹೀಗಾಗಿ ತಮಿಳುನಾಡಿನ ಸರ್ಕಾರಿ ಕಾರ್ಯಕ್ರಮಗಳಲ್ಲಿ ಮೊದಲು ತಮಿಳು ರಾಜ್ಯಗೀತೆ, ಬಳಿಕ ರಾಷ್ಟ್ರಗೀತೆ ಹಾಡುವ ಸಂಪ್ರದಾಯ ಮುಂದುವರಿಸಲು ಅವಕಾಶವಿದೆ ಎಂಬುದು ಸ್ಪಷ್ಟವಾಗಿದೆ.



