ವಿಜಯಸಾಕ್ಷಿ ಸುದ್ದಿ, ಧಾರವಾಡ: ಶಿಕ್ಷಣ ಪ್ರತಿಯೊಬ್ಬ ಮನುಷ್ಯನ ಮೂಲಭೂತ ಹಕ್ಕಾಗಿದ್ದು, ಮಹಿಳಾ ಶಿಕ್ಷಣದಿಂದ ಕುಟುಂಬ, ಸಮಾಜ ಹಾಗೂ ದೇಶದ ಪ್ರಗತಿ ಸಾಧ್ಯ ಎಂದು ಕರ್ನಾಟಕ ವಿದ್ಯಾವರ್ಧಕ ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಹೇಳಿದರು.
ನಗರದ ಶ್ರೀಮತಿ ಕಲ್ಲವ್ವ ಶಿವಪ್ಪಣ್ಣ ಜಿಗಳೂರ ಹಾಗೂ ಸುಶೀಲ ಮುರಿಗೆಪ್ಪ ಶೇಷಗಿರಿ ಪದವಿ ಮಹಾವಿದ್ಯಾಲಯದಲ್ಲಿ ಕರ್ನಾಟಕ ವಿದ್ಯಾವರ್ಧಕ ಸಂಘದ ಶಿಕ್ಷಣ ಮಂಟಪದ ವತಿಯಿಂದ ಆಯೋಜಿಸಿದ್ದ ‘ಮಹಿಳೆ: ಶಿಕ್ಷಣ ಹಾಗೂ ಆರೋಗ್ಯ’ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
“ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ. ಶಿಕ್ಷಿತ ತಾಯಿ ಮಕ್ಕಳ ಭವಿಷ್ಯಕ್ಕೆ ಭದ್ರ ಬುನಾದಿ ಹಾಕುವುದರ ಜತೆಗೆ ಅವರ ಆರೋಗ್ಯ ಹಾಗೂ ಶಿಕ್ಷಣದ ಬಗ್ಗೆ ಸೂಕ್ತ ಕಾಳಜಿ ವಹಿಸಬಲ್ಲಳು. ಒಬ್ಬ ಪುರುಷ ಶಿಕ್ಷಣ ಪಡೆದರೆ ಒಬ್ಬ ವ್ಯಕ್ತಿ ಕಲಿತಂತಾಗುತ್ತದೆ; ಆದರೆ ಒಬ್ಬ ಮಹಿಳೆ ಶಿಕ್ಷಣ ಪಡೆದರೆ ಇಡೀ ಕುಟುಂಬವೇ ಸುಶಿಕ್ಷಿತವಾಗುತ್ತದೆ” ಎಂದು ಶಂಕರ ಹಲಗತ್ತಿ ಹೇಳಿದರು.
ಕೇವಲ ಪದವಿ ಪಡೆಯುವುದೇ ಶಿಕ್ಷಣದ ಅಂತಿಮ ಗುರಿಯಲ್ಲ. ಶಿಕ್ಷಣವೆಂದರೆ ವ್ಯಕ್ತಿಯೊಳಗಿನ ಅರಿವಿನ ವಿಸ್ತರಣೆ ಹಾಗೂ ಸಮಾಜದಲ್ಲಿ ಜವಾಬ್ದಾರಿಯುತವಾಗಿ ಬದುಕುವ ಕಲಿಕೆಯಾಗಬೇಕು. ಮಹಿಳಾ ಶಿಕ್ಷಣವು ಕುಟುಂಬದ ಅಭಿವೃದ್ಧಿಗೆ ಮಾತ್ರವಲ್ಲದೆ ಇಡೀ ಸಮಾಜದ ಪ್ರಗತಿಗೂ ಕಾರಣವಾಗುತ್ತದೆ ಎಂದರು.
ಪ್ರಸೂತಿ ಹಾಗೂ ಹೆರಿಗೆ ತಜ್ಞೆ ಡಾ. ಗೀತಾ ಭರತ್ ಉತ್ತೂರ ‘ಮಹಿಳೆ: ಶಿಕ್ಷಣ ಹಾಗೂ ಆರೋಗ್ಯ’ ವಿಷಯದ ಕುರಿತು ಉಪನ್ಯಾಸ ನೀಡಿ, ಕುಟುಂಬ ನಿರ್ವಹಣೆಯ ಒತ್ತಡದಲ್ಲಿ ಮಹಿಳೆಯರು ತಮ್ಮ ಆರೋಗ್ಯವನ್ನು ನಿರ್ಲಕ್ಷಿಸುತ್ತಿದ್ದಾರೆ. ಆರೋಗ್ಯವಾಗಿದ್ದಾಗ ಮಾತ್ರ ಜೀವನದಲ್ಲಿ ಸಾಧನೆ ಮಾಡಲು ಸಾಧ್ಯ ಎಂದರು.
“ಮಹಿಳೆಯರು ತಮ್ಮ ಆರೋಗ್ಯವನ್ನು ನಿರ್ಲಕ್ಷಿಸಬಾರದು. ರಕ್ತಹೀನತೆ, ಖಿನ್ನತೆ, ಸುಸ್ತು, ಥೈರಾಯ್ಡ್ ಸಮಸ್ಯೆ ಹಾಗೂ ಋತುಚಕ್ರದ ಅಸಮತೆಯಂತಹ ಸಮಸ್ಯೆಗಳು ಕಂಡುಬಂದರೆ ನಿರ್ಲಕ್ಷಿಸದೆ ಸೂಕ್ತ ಚಿಕಿತ್ಸೆ ಪಡೆಯಬೇಕು. ಸಮತೋಲನ ಆಹಾರ, ನಿಯಮಿತ ದೈಹಿಕ ಚಟುವಟಿಕೆ ಹಾಗೂ ಕಾಲಕಾಲಕ್ಕೆ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವುದು ಅಗತ್ಯ” ಎಂದು ಸಲಹೆ ನೀಡಿದರು.
ವೇದಿಕೆಯಲ್ಲಿ ಆಡಳಿತ ಮಂಡಳಿ ಸದಸ್ಯ ಡಾ. ಜೆ.ಎಂ. ನಾಗಯ್ಯ ಹಾಗೂ ಆಡಳಿತಾಧಿಕಾರಿ ಎಸ್.ಕೆ. ಹೊಸಂಗಡಿ ಮಾತನಾಡಿದರು.
ಕಾಲೇಜಿನ ಪ್ರಾಚಾರ್ಯೆ ಪ್ರೊ. ರಾಜೇಶ್ವರಿ ಶೆಟ್ಟರ ಸ್ವಾಗತಿಸಿದರು. ಕ.ವಿ.ವ. ಸಂಘದ ಶಿಕ್ಷಣ ಮಂಟಪದ ಸಂಚಾಲಕ ವೀರಣ್ಣ ಒಡ್ಡೀನ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಅಶ್ವಿನಿ ಪಾಟೀಲ ಪರಿಚಯಿಸಿದರು. ಚೇತನ ಎಂ.ವ್ಹಿ. ನಿರೂಪಿಸಿದರು. ಡಾ. ದತ್ತಾ ಕಾಮಕರ ವಂದಿಸಿದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿಯರು, ಉಪನ್ಯಾಸಕರು, ವಿಜಯಕುಮಾರ ಗಿಡ್ನವರ ದಂಪತಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.



