HomeKarnataka Newsಯುವತಿಗೆ ಬ್ಲ್ಯಾಕ್ ಮೇಲ್ ಮಾಡಿ ಆತ್ಮಹತ್ಯೆಗೆ ಪ್ರಚೋದನೆ: ಆರೋಪಿಯ ಅರ್ಜಿ ವಜಾಗೊಳಿಸಿದ ಹೈಕೋರ್ಟ್

ಯುವತಿಗೆ ಬ್ಲ್ಯಾಕ್ ಮೇಲ್ ಮಾಡಿ ಆತ್ಮಹತ್ಯೆಗೆ ಪ್ರಚೋದನೆ: ಆರೋಪಿಯ ಅರ್ಜಿ ವಜಾಗೊಳಿಸಿದ ಹೈಕೋರ್ಟ್

For Dai;y Updates Join Our whatsapp Group

ಬೆಂಗಳೂರು: ಪ್ರೀತಿಯ ನಾಟಕವಾಡಿ, ಯುವತಿಯ ಮದುವೆಗೆ ನಿರಂತರವಾಗಿ ಅಡ್ಡಿಪಡಿಸಿ, ಬ್ಲ್ಯಾಕ್‌ಮೇಲ್ ಮಾಡುವ ಮೂಲಕ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪ ಎದುರಿಸುತ್ತಿರುವ ವ್ಯಕ್ತಿಯೊಬ್ಬನ ವಿರುದ್ಧದ ಕ್ರಿಮಿನಲ್ ಪ್ರಕರಣವನ್ನು ರದ್ದುಗೊಳಿಸಲು ಹೈಕೋರ್ಟ್ ನಿರಾಕರಿಸಿದೆ.

ಅರ್ಜಿದಾರರು ಪೂರ್ಣ ಪ್ರಮಾಣದ ವಿಚಾರಣೆ ಎದುರಿಸಿ ತಮ್ಮ ಮೇಲಿನ ಆರೋಪದಿಂದ ಮುಕ್ತರಾಗಬೇಕು ಎಂದು ನ್ಯಾಯಪೀಠ ಹೇಳಿದೆ. ತಮ್ಮ ವಿರುದ್ಧದ ಪ್ರಕರಣ ರದ್ದು ಕೋರಿ ಜೆ.ನವೀನ್ ಎಂಬವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಪೀಠ ಈ ಆದೇಶ ನೀಡಿ, ಅರ್ಜಿ ವಜಾಗೊಳಿಸಿದೆ.

ಅರ್ಜಿದಾರರು ಮೃತ ಸಂತ್ರಸ್ತೆಗೆ ಲೈಂಗಿಕ ಕಿರುಕುಳ ನೀಡಿರುವುದು, ಪದೇ ಪದೆ ಹಿಂಬಾಲಿಸಿರುವುದು ಮತ್ತು ಖಾಸಗಿಯಾಗಿ ತೆಗೆದುಕೊಂಡ ಫೋಟೋಗಳನ್ನು ಬಹಿರಂಗಪಡಿಸುವುದಾಗಿ ಬೆದರಿಕೆ ಹಾಕಿದ್ದಾರೆ ಎಂಬುದು ತನಿಖೆಯಲ್ಲಿ ಗೊತ್ತಾಗಿದೆ ಎಂದು ಪೀಠ ಹೇಳಿದೆ. ಆಕೆಗೆ ಆಗಬಹುದಾದಂತಹ ವೈವಾಹಿಕ ಸಂಬಂಧಗಳನ್ನು ತಪ್ಪಿಸಿರುವುದು, ಭಾವಿ ಪತಿಯಾಗಬೇಕಾದವರಿಗೆ ಸಂತ್ರಸ್ತೆಯ ಬಗ್ಗೆ ಅಪಪ್ರಚಾರ ಮಾಡಿ ವಿವಾಹ ಸಂಬಂಧ ಬೆಳೆಯದಂತೆ ನೋಡಿಕೊಂಡಿದ್ದಾರೆ ಎಂಬ ಅಂಶಗಳೂ ಬಯಲಾಗಿವೆ ಎಂದು ಪೀಠ ತಿಳಿಸಿದೆ.

2025ರ ಜುಲೈ 5ರಂದು ಯುವತಿ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದರು ಎಂದೂ ಆ ಸಂದರ್ಭದಲ್ಲಿ ದೂರು ದಾಖಲಾಗಿ, ಹಿರಿಯರು ರಾಜಿ ಮಾಡಿಸಿ ಅದನ್ನು ಹಿಂಪಡೆದುಕೊಂಡಿದ್ದರು ಎಂದೂ ಪೀಠ ಉಲ್ಲೇಖಿಸಿದೆ. ಆದರೂ ಅರ್ಜಿದಾರ ತನ್ನ ಚಾಳಿ ಮುಂದುವರೆಸಿ, ಮದುವೆಗಳನ್ನು ಮುರಿಯುತ್ತಾ ಬಂದಿರುವುದು ತನಿಖೆಯಿಂದ ದೃಢಪಟ್ಟಿದೆ ಎಂದು ಪೀಠ ತಿಳಿಸಿದೆ.

ಆರೋಪಿ ಅರ್ಜಿದಾರ ಮೃತಳನ್ನು ಹಂತ-ಹಂತವಾಗಿ ಮೂಲೆಗುಂಪು ಮಾಡುವುದಕ್ಕೆ ಪ್ರಯತ್ನಿಸಿದ್ದಾರೆ, ಆಕೆಯ ಗೌಪ್ಯತೆಗೆ ಧಕ್ಕೆಯಾಗುವಂತೆ ಮಾಡಿದ್ದಾರೆ, ಕೆಲಸದ ಸ್ಥಳದಲ್ಲಿ ಕಿರುಕುಳ ನೀಡಿದ್ದಾರೆ, ಸ್ವತಂತ್ರವಾಗಿ ಜೀವನ ನಡೆಸಲು ಅವಕಾಶ ನೀಡಿಲ್ಲ ಎಂದ ನ್ಯಾಯಪೀಠ, ಈ ಎಲ್ಲ ಅಂಶಗಳು ಪ್ರಚೋದನೆಯ ಆರೋಪಗಳಾಗಿದ್ದು, ಸಾಬೀತಾಗಲು ಸಾಕ್ಷ್ಯಾಧಾರಗಳಿವೆ ಎಂದಿತು. ಇಬ್ಬರ ನಡುವಿನ ಘಟನೆ ಭಾವಾವೇಶದ ಕ್ಷಣಿಕ ಮಾತಿನ ಜಗಳವಲ್ಲ, ಬದಲಿಗೆ ನಿರಂತರವಾದ ಕಿರುಕುಳ, ಬ್ಲ್ಯಾಕ್‌ಮೇಲ್ ಮತ್ತು ಮಾನಸಿಕ ಹಿಂಸೆ ಮುಂದುವರೆದಿದೆ ಎಂದು ಪೀಠ ಹೇಳಿದೆ.

ಪ್ರಕರಣದ ಹಿನ್ನೆಲೆ: ಮೈಸೂರಿನಲ್ಲಿ ನರ್ಸಿಂಗ್ ವ್ಯಾಸಂಗ ಮಾಡುತ್ತಿದ್ದ ಸಂದರ್ಭದಲ್ಲಿ ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನ ಆರೋಪಿ ನವೀನ್ ಪರಿಚಯವಾಗಿದ್ದ ಸಂತ್ರಸ್ತೆ ಭಾವನಾ (22). ಈ ಪರಿಚಯ ಕ್ರಮೇಣ ಬೆಳೆದು, ನವೀನ್ ತಾನು ಮದುವೆಯಾಗಿರುವುದನ್ನು ಮುಚ್ಚಿಟ್ಟು ಭಾವನಾ ಅವರನ್ನು ಬಲವಂತವಾಗಿ ಪ್ರೀತಿಸುವಂತೆ ಹಾಗೂ ಮದುವೆಯಾಗುವಂತೆ ಪೀಡಿಸಲು ಶುರು ಮಾಡಿದ್ದ ಎಂದೂ, ಆಕೆಯೊಂದಿಗೆ ತೆಗೆಸಿಕೊಂಡಿದ್ದ ಖಾಸಗಿ ಫೋಟೋಗಳನ್ನು ಇಟ್ಟುಕೊಂಡು ಬೆದರಿಕೆ ಹಾಕಿದ್ದ ಎಂದೂ ಆರೋಪಿಸಲಾಗಿದೆ.

ಭಾವನಾ ಅವರ ಮದುವೆ ನಿಶ್ಚಯವಾದಾಗಲೆಲ್ಲಾ ಆತ ಬಂದು ಭಾವಿ ಪತಿಯ ಬಳಿ ಸಂಬಂಧದ ಬಗ್ಗೆ ಹೇಳಿ ಮದುವೆ ಮುರಿಯುತ್ತಿದ್ದ. ಇದೇ ಕಾರಣದಿಂದ ನಿಶ್ಚಯವಾಗಿದ್ದ ಮದುವೆಯೂ ಮುರಿದುಹೋಗಿತ್ತು. ಈ ಬೆಳವಣಿಗೆಗಳ ಬಳಿಕ ಭಾವನಾ 2025ರ ಜುಲೈ 29ರಂದು ಮನೆಯಲ್ಲಿ ಮೃತಪಟ್ಟಿದ್ದರು. ಈ ಸಂಬಂಧ ಭಾವನಾ ತಾಯಿ ನೆಲಮಂಗಲ ಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ದೂರಿನ ಸಂಬಂಧ ಪೊಲೀಸರು ತನಿಖೆ ನಡೆಸಿ ದೋಷಾರೋಪಪಟ್ಟಿಯನ್ನು ವಿಚಾರಣಾ ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಪ್ರಕರಣದಿಂದ ಬಿಡುಗಡೆ ಕೋರಿ ನವೀನ್ ಹೈಕೋರ್ಟ್ ಮೆಟ್ಟಿಲೇರಿದ್ದ. ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಪ್ರಚೋದನೆ ನೀಡುವಂತಹ ನೇರ ಅಂಶಗಳಿಲ್ಲ, ಮೃತರ ಸಾವಿಗೂ ಅರ್ಜಿದಾರರಿಗೂ ನೇರ ಸಂಬಂಧವಿಲ್ಲ ಎಂದು ವಾದಿಸಿ ಅರ್ಜಿ ವಜಾಗೊಳಿಸಬೇಕು ಎಂದು ಕೋರಿದ್ದರು.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img