ನವದೆಹಲಿ: ಯುವಜನತೆ, ಅದರಲ್ಲೂ ಮುಖ್ಯವಾಗಿ Gen Z ಮತದಾರರೊಂದಿಗೆ ನೇರ ಸಂಪರ್ಕ ಸಾಧಿಸುವ ಉದ್ದೇಶದಿಂದ ಬಿಜೆಪಿ ವಿಶೇಷ ತಂಡವೊಂದನ್ನು ರಚಿಸಿದೆ.
ಪಕ್ಷದ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬೀನ್ ನೇತೃತ್ವದಲ್ಲಿ ರೂಪಿಸಲಾಗಿರುವ ಈ ತಂಡದಲ್ಲಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳಾದ ಸ್ಮೃತಿ ಇರಾನಿ ಮತ್ತು ವಿನೋದ್ ತಾವಡೆ ಸೇರಿದಂತೆ ಹಲವು ಪ್ರಮುಖ ನಾಯಕರು ಸ್ಥಾನ ಪಡೆದಿದ್ದಾರೆ. ಗುಜರಾತ್ ಸಚಿವ ಹರ್ಷ್ ಸಾಂಘ್ವಿ ಹಾಗೂ ಛತ್ತೀಸ್ಗಢ ಸಚಿವ ಒ.ಪಿ. ಚೌಧರಿ ಕೂಡ ತಂಡದ ಭಾಗವಾಗಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ದೇಶದಾದ್ಯಂತ ಯುವಜನರೊಂದಿಗೆ ನೇರ ಹಾಗೂ ನಿರಂತರ ಸಂವಾದ ನಡೆಸುವುದು ಈ ಕಾರ್ಯಕ್ರಮದ ಪ್ರಮುಖ ಉದ್ದೇಶವಾಗಿದೆ. Gen Z ಯುವಕರ ಆಕಾಂಕ್ಷೆ, ಸಮಸ್ಯೆ ಮತ್ತು ನಿರೀಕ್ಷೆಗಳನ್ನು ನೇರವಾಗಿ ಅರಿಯುವುದು ಕಾರ್ಯಕ್ರಮದ ಗುರಿಯಾಗಿದ್ದು, ಬಿಜೆಪಿ ನಾಯಕರೊಂದಿಗೆ ನೇರವಾಗಿ ಸಂವಾದ ನಡೆಸಿ ತಮ್ಮ ಅಭಿಪ್ರಾಯ ಹಾಗೂ ಪ್ರಶ್ನೆಗಳನ್ನು ಮಂಡಿಸಲು ಯುವಜನರಿಗೆ ವೇದಿಕೆ ಕಲ್ಪಿಸುವ ಉದ್ದೇಶವನ್ನೂ ಪಕ್ಷ ಹೊಂದಿದೆ.
ಸಂವಾದ, ಚರ್ಚೆ ಸೇರಿದಂತೆ ವಿವಿಧ ಕಾರ್ಯಕ್ರಮಗಳ ಮೂಲಕ ಯುವ ಮತದಾರರನ್ನು ತಲುಪಲು ಬಿಜೆಪಿ ಮುಂದಾಗಿದೆ. ಹೊಸ ತಲೆಮಾರಿನೊಂದಿಗೆ ಪಕ್ಷದ ಸಂಪರ್ಕ ಬಲಪಡಿಸುವುದು ಹಾಗೂ ಯುವಜನರ ರಾಜಕೀಯ ಭಾಗವಹಿಸುವಿಕೆ ಹೆಚ್ಚಿಸುವುದು ಈ ಅಭಿಯಾನದ ಉದ್ದೇಶವಾಗಿದೆ.
Gen Z ಸಂಪರ್ಕ ಅಭಿಯಾನದ ನಿಖರ ವೇಳಾಪಟ್ಟಿ, ಕಾರ್ಯಕ್ರಮಗಳ ಸ್ವರೂಪ ಹಾಗೂ ಸ್ಥಳಗಳ ವಿವರಗಳನ್ನು ಶೀಘ್ರದಲ್ಲೇ ಪ್ರಕಟಿಸುವ ನಿರೀಕ್ಷೆಯಿದೆ. ಮುಂಬರುವ ಚುನಾವಣಾ ಸವಾಲುಗಳ ಹಿನ್ನೆಲೆಯಲ್ಲಿ ಯುವ ಮತದಾರರತ್ತ ಬಿಜೆಪಿ ಹೆಚ್ಚಿನ ಗಮನ ಹರಿಸುತ್ತಿರುವುದರ ಸೂಚನೆ ಇದಾಗಿದೆ.
ಇದೇ ವೇಳೆ, ನಿತಿನ್ ನಬೀನ್ ಅವರು ಶನಿವಾರ (ಆ.22) ಬಿಜೆಪಿಯ ನೂತನ ರಾಷ್ಟ್ರೀಯ ಪದಾಧಿಕಾರಿಗಳ ಮೊದಲ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಪಕ್ಷದ ಸಂಘಟನೆಯನ್ನು ಮತ್ತಷ್ಟು ಚುರುಕುಗೊಳಿಸುವುದು ಮತ್ತು ಚುನಾವಣಾ ಸಿದ್ಧತೆಗಳ ಕುರಿತು ಸಭೆಯಲ್ಲಿ ಚರ್ಚೆ ನಡೆದಿದೆ.



