ವಿಜಯಸಾಕ್ಷಿ ಸುದ್ದಿ, ಗಜೇಂದ್ರಗಡ: ರಾಜ್ಯ ವಿಧಾನಸಭೆಯ ೧೮ನೇ ಸಭಾಧ್ಯಕ್ಷರಾಗಿ ಆಯ್ಕೆಯಾದ ಬಳಿಕ ಮೊದಲ ಬಾರಿಗೆ ಗಜೇಂದ್ರಗಡ ಪಟ್ಟಣಕ್ಕೆ ಆಗಮಿಸಿದ ನೂತನ ವಿಧಾನಸಭಾಧ್ಯಕ್ಷ ಜಿ.ಎಸ್. ಪಾಟೀಲ ಅವರಿಗೆ ಶನಿವಾರ ಅಭಿಮಾನಿಗಳು ಹಾಗೂ ಸಾರ್ವಜನಿಕರು ಅದ್ಧೂರಿ ಸ್ವಾಗತ ನೀಡಿ, ಭವ್ಯ ಮೆರವಣಿಗೆ ನಡೆಸಿದರು. ಈ ವೇಳೆ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಯಾರೂ ಆತಂಕಪಡಬೇಕಿಲ್ಲ ಎಂದು ಜಿ.ಎಸ್. ಪಾಟೀಲ ಅಭಯ ನೀಡಿದರು.
ಯಲಬುರ್ಗಾ ಮಾರ್ಗವಾಗಿ ಪಟ್ಟಣಕ್ಕೆ ಆಗಮಿಸುವ ಮುನ್ನ ಹಿರೇಕೊಪ್ಪ, ರಾಮಾಪೂರ ಹಾಗೂ ಉಣಚಗೇರಿ ಗ್ರಾಮಗಳಲ್ಲಿ ಜಿ.ಎಸ್. ಪಾಟೀಲ ಅವರಿಗೆ ಸ್ವಾಗತ ಕೋರಲಾಯಿತು. ಬಳಿಕ ಚೆನ್ನಮ್ಮ ವೃತ್ತಕ್ಕೆ ಆಗಮಿಸುತ್ತಿದ್ದಂತೆ ನೂರಾರು ಸಂಖ್ಯೆಯಲ್ಲಿ ಸೇರಿದ್ದ ಅಭಿಮಾನಿಗಳು ಜೈಕಾರ ಹಾಕಿ, ಪುಷ್ಪವೃಷ್ಟಿ ಮಾಡಿ, ಹಾರ ಹಾಗೂ ಶಾಲು ಹೊದಿಸಿ ಅಭಿನಂದಿಸಿದರು. ಅಲ್ಲಿಂದ ಕಾಲಕಾಲೇಶ್ವರ ವೃತ್ತದವರೆಗೆ ಭವ್ಯ ಮೆರವಣಿಗೆ ನಡೆಯಿತು.
ಮೆರವಣಿಗೆಯುದ್ದಕ್ಕೂ ರಸ್ತೆ ಬದಿಯಲ್ಲಿ ನಿಂತಿದ್ದ ಸಾರ್ವಜನಿಕರಿಗೆ ಕೈಮುಗಿದು ಅಭಿನಂದನೆ ಸ್ವೀಕರಿಸಿದ ಅವರು, ಈದ್ಗಾ ಮೈದಾನದ ಬಳಿ ಅಂಜುಮನ್ ಇಸ್ಲಾಂ ಕಮಿಟಿ ಹಾಗೂ ಎಸ್ಬಿಐ ಬಳಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ತಾಲೂಕು ಘಟಕದ ಪದಾಧಿಕಾರಿಗಳಿಂದ ಸನ್ಮಾನ ಸ್ವೀಕರಿಸಿದರು. ಕಾಲಕಾಲೇಶ್ವರ ವೃತ್ತದಲ್ಲಿ ಅಭಿಮಾನಿಗಳು ಬೃಹತ್ ಸೇಬಿನ ಹಾರ ಹಾಕಿ ಗೌರವಿಸಿದರು.
ನಂತರ ಕಾಲಕಾಲೇಶ್ವರ ವೃತ್ತದಲ್ಲಿ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿದ ಜಿ.ಎಸ್. ಪಾಟೀಲ, ವಿಧಾನಸಭಾಧ್ಯಕ್ಷರ ಪೀಠ ಪಕ್ಷಾತೀತವಾಗಿದೆ. ಆದರೆ ಕ್ಷೇತ್ರದ ಜನರ ಆಶೋತ್ತರಗಳು, ವೈಯಕ್ತಿಕ ಕೆಲಸಗಳು ಹಾಗೂ ಗ್ರಾಮದ ಅಭಿವೃದ್ಧಿ ವಿಚಾರದಲ್ಲಿ ಯಾರೂ ಹಿಂಜರಿಯಬೇಕಿಲ್ಲ. ತಮಗೆ ದೊರೆತಿರುವ ಉನ್ನತ ಸ್ಥಾನವನ್ನು ಕ್ಷೇತ್ರದ ಸರ್ವಜನಾಂಗದ ಕಲ್ಯಾಣಕ್ಕೆ ಬಳಸುವುದಾಗಿ ಹೇಳಿದರು.
ಕ್ಷೇತ್ರದ ಜನರು ತಮ್ಮ ಮೇಲೆ ಇಟ್ಟಿರುವ ಪ್ರೀತಿ, ವಿಶ್ವಾಸ ಹಾಗೂ ಬೆಂಬಲಕ್ಕಿಂತ ದೊಡ್ಡ ಹುದ್ದೆ ಮತ್ತೊಂದಿಲ್ಲ. ತಮಗೆ ಉನ್ನತ ಸ್ಥಾನ ದೊರೆಯಲಿ ಎಂದು ಕಾಲಕಾಲೇಶ್ವರ ದೇವರು, ಪುಟ್ಟರಾಜರ ಮಠ ಸೇರಿದಂತೆ ವಿವಿಧ ಗ್ರಾಮಗಳ ಗ್ರಾಮ ದೇವತೆಗಳಿಗೆ ಪೂಜೆ, ಪುನಸ್ಕಾರ, ದೀಡ್ ನಮಸ್ಕಾರ ಸಲ್ಲಿಸಿ, ತುಮಕೂರಿನಿಂದ ಬೆಂಗಳೂರಿನವರೆಗೆ ಪಾದಯಾತ್ರೆ ನಡೆಸಿದ್ದನ್ನು ಸ್ಮರಿಸಿದರು.
ನನ್ನನ್ನು ರಾಜ್ಯ ವಿಧಾನಸಭೆಯ ಸಭಾಧ್ಯಕ್ಷ ಸ್ಥಾನದಲ್ಲಿ ಕೂರಿಸಿರುವುದಕ್ಕೆ ಕ್ಷೇತ್ರದ ಜನರೇ ಕಾರಣ. ನಿಮ್ಮ ಪ್ರೀತಿ, ವಿಶ್ವಾಸ ಮತ್ತು ಆಶೀರ್ವಾದಕ್ಕೆ ನಾನು ಆಭಾರಿಯಾಗಿದ್ದೇನೆ. ನಿಮ್ಮ ಋಣ ತೀರಿಸುವ ಅವಕಾಶ ನನಗೆ ದೊರೆತಿದೆ ಎಂದು ಭಾವುಕರಾಗಿ ಹೇಳಿದರು.
ತಮ್ಮ ಭಾಷಣದ ಬಳಿಕ ಜಿ.ಎಸ್. ಪಾಟೀಲ ಅವರು ಕಾಲಕಾಲೇಶ್ವರ ವೃತ್ತದಲ್ಲಿನ ಕಾಲಕಾಲೇಶ್ವರ ದೇವರಿಗೆ ಹೂವಿನ ಹಾರ ಹಾಕಿ ನಮಸ್ಕರಿಸಿದರು.
ಮುಖಂಡ ಎಚ್.ಎಸ್. ಸೋಂಪುರ ಮಾತನಾಡಿ, ಜಿ.ಎಸ್. ಪಾಟೀಲ ಅವರನ್ನು ಸಚಿವ ಸ್ಥಾನದಲ್ಲಿ ನೋಡಬೇಕೆಂಬುದು ಅಭಿಮಾನಿಗಳ ಕನಸಾಗಿತ್ತು. ಆದರೆ ಕಾಲಕಾಲೇಶ್ವರನ ಆಶೀರ್ವಾದದಿಂದ ರಾಜ್ಯದ ಉನ್ನತ ಹುದ್ದೆಯಾದ ವಿಧಾನಸಭಾಧ್ಯಕ್ಷ ಸ್ಥಾನ ಅಲಂಕರಿಸಿದ್ದಾರೆ. ಸರಳ ವ್ಯಕ್ತಿತ್ವದ ಜಿ.ಎಸ್. ಪಾಟೀಲ ಅವರು ಸಭಾಧ್ಯಕ್ಷರಾಗಿ ಆಯ್ಕೆಯಾಗಿರುವುದು ರೋಣ ಕ್ಷೇತ್ರದ ಜನತೆಗೆ ಹೆಮ್ಮೆಯ ಸಂಗತಿಯಾಗಿದೆ ಎಂದರು.
ಸ್ವಾಗತ ಕಾರ್ಯಕ್ರಮದಲ್ಲಿ ಶಿವರಾಜ ಘೋರ್ಪಡೆ, ಅಶೋಕ ಬಾಗಮಾರ, ಸಿದ್ದಪ್ಪ ಬಂಡಿ, ಎ.ಡಿ. ಕೋಲಕಾರ, ಐ.ಎಸ್. ಪಾಟೀಲ, ಎಂ.ಎಚ್. ಕೋಲಕಾರ, ಮುರ್ತುಜಾ ಡಾಲಾಯತ್, ಶಶಿಧರ ಹೂಗಾರ, ಶ್ರೀಧರ ಬಿದರಳ್ಳಿ, ರಫೀಕ್ ತೋರಗಲ್, ಶರಣಪ್ಪ ಬೆಟಗೇರಿ, ಮಿಥುನ ಪಾಟೀಲ, ಅಕ್ಷಯ ಪಾಟೀಲ, ಸುಭಾಸ ಮ್ಯಾಗೇರಿ, ರಾಜು ಸಾಂಗ್ಲೀಕರ, ಅಪ್ಪು ಮತ್ತಿಕಟ್ಟಿ, ಅರಿಹಂತ ಬಾಗಮಾರ, ವೆಂಕಟೇಶ ಮುದಗಲ್, ಅಂದಪ್ಪ ಬಿಚ್ಚೂರ, ಶ್ರೀಕಾಂತ ಅವಧೂತ, ಮಾಬುಸಾಬ ಮ್ಯಾಗೇರಿ, ಚಿದಾನಂದ ಪಾಟೀಲ, ಸಂಗಪ್ಪ ತೇಜಿ, ಅರ್ಜುನ ರಾಠೋಡ, ಇಸ್ಮಾಯಿಲ್ ಹೊರಪೇಟಿ, ಮುತ್ತಣ್ಣ ಕೊಪ್ಪಳ, ಮಲ್ಲಿಕಾರ್ಜುನ ಗಾರಗಿ, ಶ್ರೀಧರ ಗಂಜಿಗೌಡರ, ಅಂದಪ್ಪ ರಾಠೋಡ, ಸಿದ್ದಪ್ಪ ಚೋಳಿನ, ಅಲ್ಲಾಭಕ್ಷಿ , ಪರಶುರಾಮ ಕಲಾಲ, ಸಿದ್ದು ಗೊಂಗಡಶೆಟ್ಟಿಮಠ, ಬಾಲಚಂದ್ರ ವಾಲ್ಮೀಕಿ, ಆರ್.ಎಂ. ಜಾಧವ, ಐ.ಎಚ್. ಬಾಗವಾನ, ತುಳಸಿನಾಥ ಮಾಳೊತ್ತರ ಸೇರಿದಂತೆ ಗಜೇಂದ್ರಗಡ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಜನರು ಪಾಲ್ಗೊಂಡಿದ್ದರು.
ಮೆರವಣಿಗೆಯ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಸುಗಮ ಸಂಚಾರಕ್ಕೆ ಪೊಲೀಸರು ಮುಂಜಾಗ್ರತಾ ಕ್ರಮ ಕೈಗೊಂಡಿದ್ದರು. ಡಿವೈಎಸ್ಪಿ ಪ್ರಭುಗೌಡ ಕೆ., ಸಿಪಿಐ ವಿಜಯಕುಮಾರ, ಪಿಎಸ್ಐ ಪ್ರಕಾಶ ಡಿ. ಸೇರಿದಂತೆ ಪೊಲೀಸ್ ಸಿಬ್ಬಂದಿ ಬಂದೋಬಸ್ತ್ ವ್ಯವಸ್ಥೆ ಮಾಡಿದ್ದರು.
ನನ್ನ ಪೀಠ ಪಕ್ಷಾತೀತವಾಗಿದೆ. ಆದರೆ ನಿಮ್ಮ ಆಶೋತ್ತರಗಳಿಗೆ, ವೈಯಕ್ತಿಕ ಕೆಲಸ ಕಾರ್ಯಗಳಿಗೆ ಹಾಗೂ ಗ್ರಾಮದ ಅಭಿವೃದ್ಧಿಗೆ ಚಿಂತಿಸಬೇಡಿ. ನೀವು ನನಗೆ ಹೆಚ್ಚಿನ ಶಕ್ತಿಯನ್ನು ನೀಡಿದ್ದೀರಿ. ಕ್ಷೇತ್ರದ ಕೆಲಸಗಳು ಅಲ್ಲಿಯೇ ನಿಂತಿವೆ ಎಂದು ಯಾರೂ ಹಿಂಜರಿಯಬೇಡಿ. ನಿಮ್ಮ ಪ್ರೀತಿ, ವಿಶ್ವಾಸ ಹೀಗೆಯೇ ಇರಲಿ. ಕ್ಷೇತ್ರದ ಸರ್ವಜನಾಂಗದ ಕಲ್ಯಾಣಕ್ಕಾಗಿ ಈ ಪೀಠದಿಂದ ಕೆಲಸ ಮಾಡುವ ಶಕ್ತಿಯನ್ನು ಕಾಲಕಾಲೇಶ್ವರ ನೀಡಲಿ.
ಜಿ.ಎಸ್. ಪಾಟೀಲ, ನೂತನ ವಿಧಾನಸಭಾಧ್ಯಕ್ಷರು

