ರಾಯಚೂರು: ಆಸ್ಪತ್ರೆ ಸಿಬ್ಬಂದಿ ಹಾಗೂ ವೈದ್ಯರ ನಿರ್ಲಕ್ಷ್ಯದಿಂದ ಹೆರಿಗೆ ವೇಳೆ ಅವಳಿ ಗಂಡು ಮಕ್ಕಳು ಮೃತಪಟ್ಟಿದ್ದಾರೆ ಎಂದು ಪೋಷಕರು ಆರೋಪಿಸಿರುವ ಘಟನೆ ರಾಯಚೂರಿನ ರಿಮ್ಸ್ ಬೋಧಕ ಆಸ್ಪತ್ರೆಯಲ್ಲಿ ನಡೆದಿದೆ.
ಮಾನವಿ ತಾಲೂಕಿನ ಚನ್ನಬಸವ ಹಾಗೂ ಕಾವೇರಿ ದಂಪತಿಯ ಅವಳಿ ಮಕ್ಕಳು ಮೃತಪಟ್ಟಿದ್ದಾರೆ. ಕಾವೇರಿ ಅವರಿಗೆ ಹೆರಿಗೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಮೊದಲು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿತ್ತು. ಬಳಿಕ ಮಾನ್ವಿಯ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದ ಹಿನ್ನೆಲೆಯಲ್ಲಿ ಅಲ್ಲಿನ ವೈದ್ಯರು ಕಾವೇರಿ ಅವರನ್ನು ರಾಯಚೂರಿನ ರಿಮ್ಸ್ ಆಸ್ಪತ್ರೆಗೆ ರೆಫರ್ ಮಾಡಿದ್ದರು.
ರಾತ್ರಿ 8.30ರ ಸುಮಾರಿಗೆ ರಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದ ಕಾವೇರಿ ಅವರು ತೀವ್ರ ಹೆರಿಗೆ ನೋವಿನಿಂದ ಬಳಲುತ್ತಿದ್ದರು ಎನ್ನಲಾಗಿದೆ. ಈ ವೇಳೆ ಕುಟುಂಬಸ್ಥರು ಸಿಸೇರಿಯನ್ ಮಾಡುವಂತೆ ವೈದ್ಯರಲ್ಲಿ ಮನವಿ ಮಾಡಿದ್ದರು. ಆದರೆ, ವೈದ್ಯರು ಹಾಗೂ ಸಿಬ್ಬಂದಿ ನಾರ್ಮಲ್ ಡೆಲಿವರಿ ಆಗಲಿದೆ ಎಂದು ತಿಳಿಸಿ ಸಿಸೇರಿಯನ್ ಮಾಡದೆ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಮಧ್ಯರಾತ್ರಿ 3.30ರ ಸುಮಾರಿಗೆ ಕಾವೇರಿ ಅವರ ಆರೋಗ್ಯ ಸ್ಥಿತಿ ಗಂಭೀರವಾಗುತ್ತಿದ್ದಂತೆ ಕುಟುಂಬಸ್ಥರು ಆತಂಕಗೊಂಡಿದ್ದಾರೆ. “ಮಕ್ಕಳು ಹೋದರೂ ಪರವಾಗಿಲ್ಲ, ತಾಯಿಯ ಜೀವ ಉಳಿಸಿ” ಎಂದು ವೈದ್ಯರಲ್ಲಿ ಮನವಿ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಆದರೆ, ಅಂತಿಮವಾಗಿ ಹೆರಿಗೆ ವೇಳೆ ಅವಳಿ ಗಂಡು ಮಕ್ಕಳು ಮೃತಪಟ್ಟಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಇನ್ನು ಕುಟುಂಬಸ್ಥರ ಆರೋಪವನ್ನು ರಿಮ್ಸ್ ಆಸ್ಪತ್ರೆಯ ಸ್ತ್ರೀರೋಗ ತಜ್ಞೆ ಡಾ. ರಾಧಾ ಸಂಗಾವಿ ನಿರಾಕರಿಸಿದ್ದಾರೆ. “ನಮ್ಮ ಸಿಬ್ಬಂದಿಯ ಕಡೆಯಿಂದ ಯಾವುದೇ ಲೋಪವಾಗಿಲ್ಲ. ಮಾನ್ವಿಯಿಂದ ರೆಫರ್ ಆಗಿ ಬರುವಾಗಲೇ ಕಾವೇರಿ ಅವರ ರಕ್ತದೊತ್ತಡ ಹೆಚ್ಚಾಗಿತ್ತು. ಅಲ್ಲದೆ, ಗರ್ಭದಲ್ಲೇ ಮಕ್ಕಳು ಮೃತಪಟ್ಟಿದ್ದರು. ತಾಯಿಗೆ ಫಿಟ್ಸ್ ಬಾರದಂತೆ ತುರ್ತು ಚಿಕಿತ್ಸೆ ನೀಡಿ, ಗರ್ಭದಲ್ಲೇ ಮೃತಪಟ್ಟಿದ್ದ ಮಕ್ಕಳನ್ನು ಹೊರತೆಗೆಯಲಾಗಿದೆ. ಸದ್ಯ ತಾಯಿಯ ಆರೋಗ್ಯ ಸ್ಥಿರವಾಗಿದ್ದು, ಚಿಕಿತ್ಸೆ ಮುಂದುವರಿದಿದೆ” ಎಂದು ಅವರು ತಿಳಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಪೋಷಕರು ಹಾಗೂ ಆಸ್ಪತ್ರೆ ವೈದ್ಯರ ನಡುವೆ ವಿಭಿನ್ನ ಹೇಳಿಕೆಗಳು ಕೇಳಿಬಂದಿದ್ದು, ಅವಳಿ ಮಕ್ಕಳ ಸಾವಿನ ನಿಖರ ಕಾರಣದ ಕುರಿತು ತನಿಖೆ ನಡೆಸುವಂತೆ ಕುಟುಂಬಸ್ಥರು ಒತ್ತಾಯಿಸಿದ್ದಾರೆ.



