HomeBengaluru Newsಮಡಿವಾಳದಲ್ಲಿ ಮೆಡಿಕಲ್ ಶಾಪ್ ಮಾಲೀಕನ ಭೀಕರ ಕೊಲೆ: ಶಬ್ಬೀರ್ ಹತ್ಯೆಗೆ ಪ್ರತೀಕಾರದ ಶಂಕೆ!?

ಮಡಿವಾಳದಲ್ಲಿ ಮೆಡಿಕಲ್ ಶಾಪ್ ಮಾಲೀಕನ ಭೀಕರ ಕೊಲೆ: ಶಬ್ಬೀರ್ ಹತ್ಯೆಗೆ ಪ್ರತೀಕಾರದ ಶಂಕೆ!?

For Dai;y Updates Join Our whatsapp Group

ಬೆಂಗಳೂರು: ಬೆಂಗಳೂರಿನಲ್ಲಿ ಮತ್ತೆ ರೌಡಿಗಳ ಅಟ್ಟಹಾಸದ ಆರೋಪ ಕೇಳಿಬಂದಿದ್ದು, ಮಡಿವಾಳದ ಅಂಡರ್‌ಪಾಸ್‌ ಸಮೀಪ ಮೆಡಿಕಲ್ ಶಾಪ್ ನಡೆಸುತ್ತಿದ್ದ ವ್ಯಕ್ತಿಯನ್ನು ಜನರ ಎದುರಲ್ಲೇ ಭೀಕರವಾಗಿ ಹತ್ಯೆ ಮಾಡಿರುವ ಘಟನೆ ನಡೆದಿದೆ.

ಮಂಗಮ್ಮನ ಪಾಳ್ಯದ ನಿವಾಸಿ ಸುಹೇಲ್ ಮೃತ ವ್ಯಕ್ತಿ.

ನಿನ್ನೆ ರಾತ್ರಿ ಸುಮಾರು 10 ಗಂಟೆಗೆ ಸುಹೇಲ್ ಮಡಿವಾಳದಿಂದ ಕೊರಮಂಗಲದ ಕಡೆಗೆ ತೆರಳುತ್ತಿದ್ದ ವೇಳೆ, ಮುಖ್ಯ ರಸ್ತೆಯಲ್ಲಿ ಟ್ರಾಫಿಕ್ ಜಾಮ್‌ನಿಂದ ಬೈಕ್ ನಿಲ್ಲಿಸಿಕೊಂಡಿದ್ದರು. ಈ ವೇಳೆ ಎರಡು ಬೈಕ್‌ಗಳಲ್ಲಿ ಬಂದ ನಾಲ್ವರು ದುಷ್ಕರ್ಮಿಗಳು ಎರಡು ತಲ್ವಾರ್‌ಗಳಿಂದ ಸುಹೇಲ್ ಮೇಲೆ ದಾಳಿ ನಡೆಸಿದ್ದಾರೆ. ತೀವ್ರ ರಕ್ತಸ್ರಾವದಿಂದ ಸುಹೇಲ್ ಸ್ಥಳದಲ್ಲೇ ಮೃತಪಟ್ಟಿದ್ದು, ಹಂತಕರು ಮಾರಕಾಸ್ತ್ರಗಳನ್ನು ಸ್ಥಳದಲ್ಲೇ ಬಿಸಾಕಿ ಪರಾರಿಯಾಗಿದ್ದಾರೆ ಎನ್ನಲಾಗಿದೆ.

ಸುಹೇಲ್ ಹತ್ಯೆ ಹಿಂದೆ ಜನವರಿ 13ರಂದು ಬಂಡೆಪಾಳ್ಯದಲ್ಲಿ ನಡೆದಿದ್ದ ರೌಡಿಶೀಟರ್ ಶಬ್ಬೀರ್ ಹತ್ಯೆಯ ಪ್ರತೀಕಾರದ ಶಂಕೆ ವ್ಯಕ್ತವಾಗಿದೆ. ಶಬ್ಬೀರ್ ಕೊಲೆ ಪ್ರಕರಣದಲ್ಲಿ ಸುಹೇಲ್ ಸಹೋದರರಾದ ಖಲೀಂ, ನಜೀರ್ ಸೇರಿದಂತೆ ಮೂವರು ಭಾಗಿಯಾಗಿದ್ದರು ಎನ್ನಲಾಗಿದೆ.

ಆದರೆ, ಶಬ್ಬೀರ್ ಕೊಲೆ ಪ್ರಕರಣಕ್ಕೂ ಸುಹೇಲ್‌ಗೂ ಯಾವುದೇ ಸಂಬಂಧವಿರಲಿಲ್ಲ ಎಂದು ತಿಳಿದುಬಂದಿದೆ. ಅಲ್ಲದೆ, ಸುಹೇಲ್‌ಗೆ ಯಾವುದೇ ಕ್ರಿಮಿನಲ್ ಹಿನ್ನೆಲೆಯೂ ಇರಲಿಲ್ಲ ಎನ್ನಲಾಗಿದೆ. ಹೀಗಾಗಿ ಸಹೋದರರ ಮೇಲಿನ ದ್ವೇಷಕ್ಕೆ ಸುಹೇಲ್‌ನನ್ನೇ ಗುರಿಯಾಗಿಸಿ ಹತ್ಯೆ ಮಾಡಿರುವ ಸಾಧ್ಯತೆ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಘಟನಾ ಸ್ಥಳಕ್ಕೆ ಡಿಸಿಪಿ ಸುಜಿತಾ, ಸಿಸಿಬಿ ಡಿಸಿಪಿ ಹರಿಬಾಬು ಹಾಗೂ ಜಂಟಿ ಪೊಲೀಸ್ ಆಯುಕ್ತ ರಮೇಶ್ ಬಾನತ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಅಣ್ಣನ ಕೊಲೆಗೆ ತಮ್ಮನ ರಿವೇಂಜ್ ಪ್ರತಿಜ್ಞೆ:

ಅಣ್ಣ ಸುಹೇಲ್ ಹತ್ಯೆಯ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬಂದಿದ್ದ ಸಹೋದರ ನಜೀರ್, ಹಂತಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾನೆ. “ಸುಹೇಲ್ ನನ್ನ ಅಣ್ಣ ಮಾತ್ರ ಆಗಿರಲಿಲ್ಲ, ಅಪ್ಪನ ರೀತಿಯಲ್ಲಿದ್ದ. ಆತನನ್ನು ಕೊಲೆ ಮಾಡಿದ ಯಾರನ್ನೂ ಸುಮ್ಮನೆ ಬಿಡುವುದಿಲ್ಲ” ಎಂದು ನಜೀರ್ ಪ್ರತೀಕಾರದ ಶಪಥ ಮಾಡಿದ್ದಾನೆ ಎನ್ನಲಾಗಿದೆ.

ಕಳೆದ ಕೆಲ ದಿನಗಳಿಂದಲೇ ಕೊಲೆಗೆ ಸ್ಕೆಚ್?

ಸುಹೇಲ್ ಹತ್ಯೆ ಪೂರ್ವಯೋಜಿತವಾಗಿರಬಹುದು ಎಂಬ ಶಂಕೆ ವ್ಯಕ್ತವಾಗಿದ್ದು, ಕಳೆದ ಕೆಲ ದಿನಗಳಿಂದಲೇ ಆರೋಪಿಗಳು ಆತನ ಚಲನವಲನಗಳನ್ನು ಗಮನಿಸುತ್ತಿದ್ದರು ಎನ್ನಲಾಗಿದೆ. ಹಾರ್ಲೆ ಡೇವಿಡ್‌ಸನ್ ಬೈಕ್‌ನಲ್ಲಿ ತೆರಳುತ್ತಿದ್ದ ಸುಹೇಲ್‌ನನ್ನು ಹಂತಕರು ಹಿಂಬಾಲಿಸಿ ದಾಳಿ ನಡೆಸಿರುವ ಸಾಧ್ಯತೆ ಇದೆ.

ಹತ್ಯೆ ಬಳಿಕ ಮಾರಕಾಸ್ತ್ರಗಳನ್ನು ಸ್ಥಳದಲ್ಲೇ ಬಿಸಾಕಿ ಆರೋಪಿಗಳು ಪರಾರಿಯಾಗಿದ್ದಾರೆ ಎನ್ನಲಾಗಿದೆ. ಪ್ರಕರಣದ ತನಿಖೆಗಾಗಿ ಪೊಲೀಸರು ಮೂರು ವಿಶೇಷ ತಂಡಗಳನ್ನು ರಚಿಸಿದ್ದಾರೆ. ಘಟನಾ ಸ್ಥಳದ ಸಿಸಿಟಿವಿ ಡಿವಿಆರ್‌ಗಳನ್ನು ವಶಕ್ಕೆ ಪಡೆದುಕೊಂಡಿದ್ದು, ಸಿಸಿ ಕ್ಯಾಮೆರಾ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ.

ಸುಹೇಲ್ ಮಂಗಮ್ಮನ ಪಾಳ್ಯದಿಂದ ಮಡಿವಾಳ ಮುಖ್ಯರಸ್ತೆಗೆ ಬಂದಿದ್ದೇಕೆ? ಬೊಮ್ಮನಹಳ್ಳಿಯಲ್ಲಿರುವ ಮೆಡಿಕಲ್ ಶಾಪ್‌ನಿಂದ ಹೊರಡುವಾಗ ಕೊನೆಯದಾಗಿ ಸುಹೇಲ್‌ಗೆ ಕರೆ ಮಾಡಿದ್ದು ಯಾರು? ಹಂತಕರು ಆತನ ಚಲನವಲನಗಳನ್ನು ಹೇಗೆ ಗಮನಿಸಿದರು? ಎಂಬ ಹಲವು ಪ್ರಶ್ನೆಗಳ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಹಂತಕರ ಪತ್ತೆಗೆ ಮಡಿವಾಳ ಪೊಲೀಸರು ಹಾಗೂ ಸಿಸಿಬಿ ತಂಡಗಳು ಕಾರ್ಯಾಚರಣೆ ಮುಂದುವರಿಸಿವೆ.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img